– ಇಂದು ಬೆಳಗ್ಗೆ ಎಸ್‌ಐಟಿಯಿಂದ ದಾಳಿ
– ತಿಮರೋಡಿ ಮನೆಗೆ ಬಂದವರಿಗೆ ನಡುಕ ಶುರು
ಮಂಗಳೂರು: ಸರ್ಚ್ ವಾರಂಟ್ ಪಡೆದು ವಿಶೇಷ ತನಿಖಾ ತಂಡದ ಪೊಲೀಸರು (SIT Police) ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarody) ಅವರ ಉಜಿರೆ ನಿವಾಸದ ಮೇಲೆ ದಾಳಿ ನಡೆಸಿ ಸಿಸಿಟಿವಿ (CCTV) ಮತ್ತು ಚಿನ್ನಯ್ಯ ಬಳಸುತ್ತಿದ್ದ ಫೋನನ್ನು ವಶಕ್ಕೆ ಪಡೆದಿದೆ.
ದಾಳಿಯ ವೇಳೆ ಬುರುಡೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚಿನ್ನಯ್ಯನ್ನು (Chinnayya) ಎಸ್‌ಐಟಿ ಪೊಲೀಸರು ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದ್ದಾರೆ.
ಎಸ್‌ಐಟಿ ಉತ್ಕನನ ನಡೆಸಿದ ಬಳಿಕ ತಾನು ತಿಮರೋಡಿಯ ನಿವಾಸಕ್ಕೆ ಹೋಗುತ್ತಿದ್ದೆ. ಅಲ್ಲಿ ನನಗೆ ಒಂದು ಕೊಠಡಿಯನ್ನು ನೀಡಲಾಗಿತ್ತು. ಅಲ್ಲಿ ನಾನು ಬಟ್ಟೆ, ಬ್ಯಾಗ್ ಇಟ್ಟಿದ್ದೇನೆ. ನಾನು ಮೊಬೈಲ್ ಬಳಸುತ್ತಿರಲಿಲ್ಲ. ನನ್ನ ಮೊಬೈಲ್ ತಿಮರೋಡಿ ಕಡೆಯವರ ಜೊತೆ ಇತ್ತು ಎಂದು ಚಿನ್ನಯ್ಯ ಹೇಳಿದ್ದ. ಈ ಕಾರಣಕ್ಕೆ ಕೊಠಡಿಯ ಮಹಜರು ನಡೆಸಿ ಮೊಬೈಲ್ ಮತ್ತು ಬಟ್ಟೆಗಳನ್ನು ವಶಕ್ಕೆ ಪಡೆದಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ 5 ಗಂಟೆಗೆ ಆಗಮಿಸಿ ಎಸ್‌ಐಟಿ ಅಧಿಕಾರಿಗಳಿಗೆ ಶಾಕ್ ಕೊಟ್ಟ ಸುಜಾತ ಭಟ್!
ಧರ್ಮಸ್ಥಳದಲ್ಲಿ ಶೋಧ ನಡೆಯುತ್ತಿದ್ದಾಗ ಬುರುಡೆ ಗ್ಯಾಂಗ್‌ನ ಎಲ್ಲಾ ಸದಸ್ಯರು ತಿಮರೋಡಿ ಮನೆಯಲ್ಲೇ ತಂಗಿದ್ದರು. ಎಲ್ಲಾ ಪ್ಲ್ಯಾನ್‌ಗಳು ಇಲ್ಲೇ ಸಿದ್ಧವಾಗುತ್ತಿತ್ತು. ಹೀಗಾಗಿ ತಿಮರೋಡಿ ಮನೆಗೆ ಯಾರೆಲ್ಲ ಬಂದಿದ್ದರು ಎಲ್ಲಾ ವಿವರಗಳನ್ನು ಪತ್ತೆ ಹಚ್ಚಲು ಪೊಲೀಸರು ಸಿಸಿಟಿವಿ ಹಾರ್ಡ್ ಡಿಸ್ಕ್ ಅನ್ನು ವಶಕ್ಕೆ ಪಡೆದಿದ್ದಾರೆ.
ತಿಮರೋಡಿ ಮನೆಯ ಕೊಠಡಿಯಲ್ಲಿ ಚಿನ್ನಯ್ಯ ಕೆಲ ರಾಷ್ಟ್ರೀಯ ಮಾಧ್ಯಮ ಮತ್ತು ಯೂಟ್ಯೂಬ್ ವಾಹಿನಿಗಳಿಗೆ ಸಂದರ್ಶನ ನೀಡಿದ್ದ. ಈ ಸಂದರ್ಶನದ ವಿಡಿಯೋಗಳು ಕೆಲ ದಿನಗಳಿಂದ ಪ್ರಸಾರವಾಗುತ್ತಿದೆ. ಹೀಗಾಗಿ ಸಂದರ್ಶನ ನೀಡಿದ ಜಾಗಗಳ ಮಹಜರು ಪ್ರಕ್ರಿಯೆಯನ್ನು ಎಸ್‌ಐಟಿ ಪೊಲೀಸರು ನಡೆಸಿದ್ದಾರೆ. ಇದನ್ನೂ ಓದಿ: ಮಟ್ಟಣ್ಣನವರ್‌ನಿಂದ ಹೋರಾಟ ಹಳ್ಳ ಹಿಡಿಯಿತು – ಸೌಜನ್ಯ ಪರ ಹೋರಾಟಗಾರರಲ್ಲೇ ಒಡಕು!
ಸಿಸಿಟಿವಿ ಡಿವಿಆರ್‌ಗಳನ್ನು ಪೊಲೀಸರು ಪಡೆದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತಿಮರೋಡಿ ನಿವಾಸಕ್ಕೆ ಆಗಮಿಸಿದ್ದ ವ್ಯಕ್ತಿಗಳ ವಿಚಾರಣೆಯನ್ನು ಪೊಲೀಸರು ನಡೆಸುವ ಸಾಧ್ಯತೆಯಿದೆ. ಇವರುಗಳನ್ನು ಪ್ರಕರಣದ ಸಾಕ್ಷಿಗಳಾಗುವ ಸಾಧ್ಯತೆಯಿದೆ.
ಅಷ್ಟೇ ಅಲ್ಲದೇ ತಮ್ಮ ಪರವಾಗಿ ಸುದ್ದಿಗಳನ್ನು ಪ್ರಚಾರ ಮಾಡಲು ಕೆಲ ಯೂಟ್ಯೂಬರ್‌ಗಳಿಗೆ ಬುರುಡೆ ಗ್ಯಾಂಗ್ ಪ್ರೋತ್ಸಾಹ ನೀಡುತ್ತಿತ್ತು. ಐದಕ್ಕೂ ಹೆಚ್ಚು ಯೂಟ್ಯೂಬರ್‌ಗಳು ತಿಮರೋಡಿ ನಿವಾಸದಲ್ಲಿ ತಂಗಿದ್ದರು. ಈ ಯೂಟ್ಯೂಬರ್‌ಗಳನ್ನು ಪೊಲೀಸರು ತನಿಖೆಗೆ ಒಳಪಡಿಸುವ ಸಾಧ್ಯತೆಯಿದೆ.
ದಾಳಿ ನಡೆಯುವ ಬಗ್ಗೆ ಖಚಿತ ಮಾಹಿತಿ ಇದ್ದ ಕಾರಣ ಪೊಲೀಸ್ ವಾಹನಗಳ ಜೊತೆ ಇಂದು ಬೆಳಗ್ಗೆ ಮಾಧ್ಯಮಗಳ ವಾಹನಗಳು ತಿಮರೋಡಿಗೆ ತೆರಳಿತ್ತು. ಆದರೆ ಪೊಲೀಸರು ತಿಮರೋಡಿಗೆ ಹೋಗುವ ಮಾರ್ಗ ಮಧ್ಯೆಯೇ ಎಲ್ಲಾ ಮಾಧ್ಯಮಗಳ ವಾಹನಗಳನ್ನು ತಡೆದು ನಿಲ್ಲಿಸಿದ್ದರು.