– ಅನಾಮಧೇಯನ ಹೇಳಿಕೆ ಮೇಲೆ ತನಿಖೆ
ಬೆಂಗಳೂರು/ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದ (Dharmasthala Burials Case) ಬಗ್ಗೆ ಅನಾಮಧೇಯ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಎಸ್‌ಐಟಿ ರಚಿಸಿದೆ. ನಾಲ್ವರು ಹಿರಿಯ ಐಪಿಎಸ್ ಅಧಿಕಾರಿಗಳ ತಂಡದಿಂದ ಈ ಪ್ರಕರಣದ ತನಿಖೆ ನಡೆಯಲಿದೆ. ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಆಗಿರುವ ಪ್ರಣವ್ ಮೊಹಂತಿ ಎಸ್‌ಐಟಿ ತಂಡದ ನೇತೃತ್ವ ವಹಿಸಿದ್ದಾರೆ. ಪ್ರಕರಣದ ತನಿಖೆ ಆರಂಭಕ್ಕೂ ಮುನ್ನ ಡಿಜಿಪಿ ಪ್ರಣವ್ ಮೊಹಾಂತಿ ಗೃಹಸಚಿವ ಪರಮೇಶ್ವರ್ ರನ್ನು (G Parameshwar) ಭೇಟಿ ಮಾಡಿದ್ರು. ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿದ ಮೊಹಾಂತಿ.. ಕೇಸ್ ಸಂಬಂಧ ಚರ್ಚಿಸಿದ್ರು. ಅಲ್ಲದೇ ಇಬ್ಬರು ಐಪಿಎಸ್‌ಗಳಾದ ಅನುಚೇತ್, ಸೌಮ್ಯಲತಾ ತಂಡದಿಂದ ಹೊರಗುಳಿಯುತ್ತಾರೆ ಎನ್ನಲಾದ ವಿಚಾರದ ಬಗ್ಗೆಯೂ ಚರ್ಚಿಸಿದ್ರು.
ಇಬ್ಬರು ಐಪಿಎಸ್‌ಗಳು ತನಿಖೆಯಿಂದ ಹೊರಗುಳಿಯುತ್ತಾರಾ..?
ಎಸ್‌ಐಟಿ ತಂಡ ಮುಖ್ಯಸ್ಥ ಪ್ರಣವ್ ಮೊಹಾಂತಿ ಭೇಟಿ ಬಳಿಕ ಗೃಹಸಚಿವ ಪರಮೇಶ್ವರ್ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ರು. ಪ್ರಕರಣದಲ್ಲಿ ಎಸ್‌ಐಟಿ ರಚನೆ ಸಂಬಂಧ ಚರ್ಚಿಸಿದರು. ಬಳಿಕ ಪ್ರತಿಕ್ರಿಯಿಸಿದ ಗೃಹಸಚಿವ ಪರಮೇಶ್ವರ್ ತನಿಖೆಗೆ ವಹಿಸುವಂತೆ ಒತ್ತಡ ಕೇಳಿ ಬಂದಿತ್ತು.. ಅಲ್ಲದೇ ಅನಾಮಧೇಯ ದೂರಿನ ಮೇರೆಗೆ ಎಸ್‌ಐಟಿ (SIT) ರಚಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣ ತನಿಖೆ ನಡೆಸಲಿದ್ದಾರೆ. ಪ್ರಣವ್ ಮೊಹಾಂತಿ ತಂಡ ಜವಾಬ್ದಾರಿಯುತವಾಗಿ ತನಿಖೆ ನಡೆಸಲಿದೆ. ತನಿಖಾ ತಂಡದಿಂದ ಯಾವ ಅಧಿಕಾರಿಯೂ ಹಿಂದೆ ಸರಿಯುವ ಬಗ್ಗೆ ತಿಳಿಸಿಯೂ ಇಲ್ಲ. ಮಾತಾಡಿಯೂ ಇಲ್ಲ. ನನಗಾಗಲಿ, ಸರ್ಕಾರಕ್ಕಾಗಲಿ ಯಾರು ನಾವು ತನಿಖೆ ಮಾಡಲ್ಲ ಅಂತ ಹೇಳಿಲ್ಲ ಎಂದು ಸ್ಪಷ್ಟನೆ ಕೊಟ್ಟರು.
ಧರ್ಮಸ್ಥಳದ ಎಸ್‌ಐಟಿ ತನಿಖೆ ಹೇಗಿರಲಿದೆ..?
ಮೊದಲು ಎಫ್‌ಐಆರ್ ಮತ್ತು 164 ಅಡಿ ಹೇಳಿಕೆ ಪ್ರತಿ ಅತ್ಯಗತ್ಯ. ಬಳಿಕ ಜಡ್ಜ್ ಮುಂದೆ ಕೊಟ್ಟ ಹೇಳಿಕೆ ಮಾಹಿತಿ ಪಡೆಯಲಿದೆ ಎಸ್‌ಐಟಿ. ನಂತ್ರ ಹೇಳಿಕೆ ನೀಡಿದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಸದ್ಯ ಸಿಕ್ಕಿರೋ ಅಸ್ಥಿಪಂಜರದ ಡಿಎನ್‌ಎ ಮ್ಯಾಚಿಂಗ್ ಪ್ರಕ್ರಿಯೆ ನಡೆಯಲಿದೆ. ಇದಾದಮೇಲೆ ಬಾಕಿ ಉಳಿದಿರೋ ಅಸ್ಥಿಪಂಜರ ಹುಡುಕಾಟಕ್ಕೆ ಎಸ್‌ಐಟಿ ಮುಂದಾಗಲಿದೆ. ತನಿಖೆ ಬಳಿಕ ಕೋರ್ಟ್‌ಗೆ ದೋಷಾರೋಪಪಟ್ಟಿ ಸಲ್ಲಿಕೆ ಮಾಡಲಿದೆ.
ಮಹಿಳಾ ಆಯೋಗದ ಅಧ್ಯಕ್ಷೆ ಹೇಳೋದೇನು?
ಧರ್ಮಸ್ಥಳದ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಬಗ್ಗೆ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದನ್ನು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಸ್ವಾಗತಿಸಿದ್ದಾರೆ. ಅನಾಮಧೇಯ ವ್ಯಕ್ತಿ ಹೇಳಿದ ಸಾವುಗಳ ಬಗ್ಗೆ ತನಿಖೆ ಆಗಬೇಕು. ಸತ್ಯ.. ಅಸತ್ಯ ಗೊತ್ತಾಗಬೇಕು. ಸಮಗ್ರ ತನಿಖೆ ನಡೆಯಬೇಕು ಎಂದು ʻಪಬ್ಲಿಕ್ ಟಿವಿʼ ಜೊತೆ ಮಾತಾಡಿದ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.
ನಿಷ್ಪಕ್ಷಪಾತ ತನಿಖೆ ಆಗಲಿ ಎಂದ ಬಿಜೆಪಿ
ಧರ್ಮಸ್ಥಳ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿರುವುದಕ್ಕೆ ಬಿಜೆಪಿ ಶಾಸಕ ಅಶ್ವಥ್ ನಾರಾಯಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಂದೂ ಧಾರ್ಮಿಕ ಸಂಸ್ಥೆಗಳ ಮೇಲೆ ಗುಮಾನಿ, ಅನುಮಾನ ಸೃಷ್ಟಿಗೆ ಸರ್ಕಾರ ಮುಂದಾಗಿದೆ. ತನ್ನ ವೈಫಲ್ಯ, ಗೋಲ್ಮಲ್ ಡೈವರ್ಟ್ ಮಾಡಿಕೊಳ್ಳಲು ಎಸ್‌ಐಟಿ ರಚಿಸಿದೆ ಎಂದು ಟೀಕಿಸಿದ್ದಾರೆ. ಇನ್ನುಳಿದಂತೆ ಮಾಜಿ ಸಿಎಂ ಯಡಿಯೂರಪ್ಪ. ಸಂಸದ ಬಿ.ವೈ ರಾಘವೇಂದ್ರ, ವಿಪಕ್ಷ ನಾಯಕ ಅಶೋಕ್ ಸ್ವಾಗತಿಸಿದ್ದಾರೆ. ಎಸ್‌ಐಟಿ ತನಿಖೆ ನಿಷ್ಪಕ್ಷಪಾತ ನಡೆದು ಸತ್ಯಾಸತ್ಯತೆ ಹೊರಬರಲಿ ಎಂದಿದ್ದಾರೆ.
ಇನ್ನು ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆಶಿ, ಹಿರಿಯ ಅಧಿಕಾರಿಗಳಿಗೆ ತನಿಖೆಯ ಹೊಣೆ ವಹಿಸಲಾಗಿದೆ. ಬಿಜೆಪಿಯವರು ಏನಾದ್ರೂ ಹೇಳಲಿ. ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ ಎಂದಿದ್ದಾರೆ. ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿ, ಈ ಪ್ರಕರಣ ದೇಶದಲ್ಲಿ ಚರ್ಚೆ ಆಗ್ತಿದೆ. ಹೀಗಾಗಿ ಸರ್ಕಾರ ಎಸ್‌ಐಟಿ ರಚಿಸಿದೆ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದಿದ್ದಾರೆ.