– ತನಿಖೆಗಿಳಿದ ಮಾನವ ಹಕ್ಕುಗಳ ಆಯೋಗ
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಆರೋಪ ಪ್ರಕರಣಕ್ಕೆ (Dharmasthala Burials Case) ಸಂಬಂಧಿಸಿದಂತೆ ಅನಾಮಿಕ ವ್ಯಕ್ತಿಯ ವಿಚಾರಣೆ ನಡೆಯುತ್ತಿದೆ. ಎಸ್‌ಐಟಿ ಈಗಾಗಲೇ ಅರ್ಧ ತಿಂಗಳು ಕೆಲಸ ಮಾಡಿದೆ. ಕಳೆದೆರಡು ವಾರಗಳಿಂದ ಎಸ್‌ಐಟಿ (SIT) ಕಾಲಿಗೆ ಚಕ್ರ ಕಟ್ಟಿಕೊಂಡು ಸಮಾಧಿ ಅಗೆದು ಶೋಧ ನಡೆಸಲಾಗುತ್ತಿದೆ.
ಅನಾಮಿಕ ಕೊಟ್ಟ ದೂರು ಸತ್ಯನಾ ಸುಳ್ಳಾ? ಎಂದು ವಿಚಾರಣೆ ಜೊತೆ ತನಿಖೆ ನಡೆಸುತ್ತಿದೆ. ಇಂದು ತೀವ್ರ ಕುತೂಹಲ ಕೆರಳಿದ್ದ ಪಾಯಿಂಟ್ ನಂ.13ರಲ್ಲಿ ಶೋಧ ನಡೆಸುತ್ತಿದೆ. ಮೊದಲಿಗೆ ಮೌಂಡೆಟ್ ಜಿಪಿಆರ್ ಡ್ರೋನ್‌ನಲ್ಲಿ (GPR Drone) ಶೋಧ ನಡೆಸಿದ ಬಳಿಕ ಏಕಕಾಲಕ್ಕೆ ಎರಡು ಹಿಟಾಚಿ ಬಳಸಿ ಗುಂಡಿ ಅಗೆಯಲಾಗುತ್ತಿದೆ. 20 ವರ್ಷಗಳಲ್ಲಿ ಹಿಂದೆ ಭೌಗೋಳಿಕವಾಗಿ ಬದಲಾವಣೆ ಆಗಿರುವ ಹಿನ್ನೆಲೆ, ಗುರುತು ಮಾಡಿರುವ ಪ್ರದೇಶವನ್ನ ಸಮತಟ್ಟುಗೊಳಿಸಲಾಗುತ್ತದೆ. ಬಳಿಕ ಮತ್ತೊಮ್ಮೆ ಡ್ರೋನ್ ಜಿಪಿಆರ್ ಮೂಲಕ ತಪಾಸಣೆ ನಡೆಸಿ ಶವಕ್ಕಾಗಿ ಶೋಧಿಸಲು ಎಸ್‌ಐಟಿ ಮುಂದಾಗಲಿದೆ. ಇದನ್ನೂ ಓದಿ: ವಿಧಾನಸಭೆಯಲ್ಲೂ ಧರ್ಮಸ್ಥಳ ಪ್ರಕರಣ ಸದ್ದು – ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ಸದಸ್ಯರ ಪಟ್ಟು
ಎಸ್‌ಐಟಿ ಅಧಿಕಾರಿಗಳು ಬಹಳ ಮುತುವರ್ಜಿಯಿಂದ ಎಲ್ಲಾ ತನಿಖೆಗಳ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಪ್ರತ್ಯಕ್ಷ ಸಾಕ್ಷಿಗಳು ಮತ್ತು ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಪಂಚಾಯತ್, ಠಾಣೆ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಆ ಕಾಲಮಾನದಲ್ಲಿ ಕೆಲಸ ಮಾಡಿದ ಎಲ್ಲರ ಸಾಕ್ಷಿಗಳ ಸಂಗ್ರಹ ನಡೆಸಲಾಗುತ್ತಿದೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | SIT ಭೇಟಿಯಾದ ಪದ್ಮಲತಾ ಕುಟುಂಬ – 38 ವರ್ಷಗಳ ಹಳೆಯ ಕೇಸ್ ತನಿಖೆಗೆ ಒತ್ತಾಯ
ತನಿಖೆಗಿಳಿದ ಮಾನವ ಹಕ್ಕುಗಳ ಆಯೋಗ
ಇನ್ನೂ ಜಿಪಿಆರ್ ಮೂಲಕ ಶೋಧಕಾರ್ಯ ನಡೆಯುತ್ತಿರುವಾಗಲೇ ಪ್ರಕರಣಕ್ಕೆ ಮಾನವ ಹಕ್ಕುಗಳ ಆಯೋಗ ಎಂಟ್ರಿ ಕೊಟ್ಟಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಬೀಡು ಬಿಟ್ಟ ನಾಲ್ವರು ಅಧಿಕಾರಿಗಳ ತಂಡದಲ್ಲಿ ಓರ್ವ ಐಪಿಎಸ್ ಅಧಿಕಾರಿಯಿದ್ದಾರೆ. ವಿವಿಧ ಆಯಾಮಗಳಲ್ಲಿ ದಾಖಲೆ ಮತ್ತು ಮಾಹಿತಿಗಳ ಸಂಗ್ರಹ ಮಾಡುತ್ತಿದ್ದಾರೆ. ಎಸ್‌ಐಟಿ, ಪೊಲೀಸ್ ಸ್ಟೇಷನ್, ದೇವಸ್ಥಾನ, ಗ್ರಾಮ ಪಂಚಾಯಿತಿಯಿಂದ ದಾಖಲೆಗಳನ್ನು ಕೇಳಿದ ಮಾನವ ಹಕ್ಕುಗಳ ಆಯೋಗ, ಸ್ವಚ್ಛತಾ ಕಾರ್ಮಿಕರಿಂದ ಹೇಳಿಕೆಗಳನ್ನ ಸಂಗ್ರಹ ಮಾಡುತ್ತಿದೆ. ಆಯೋಗ ಗೌಪ್ಯವಾಗಿ ಹಲವರ ಭೇಟಿ ಮಾಡಿ ವಿಚಾರಣೆಗೈದಿದೆ. ಮುಂದಿನ ನಾಲ್ಕೈದು ದಿನ ಧರ್ಮಸ್ಥಳದಲ್ಲಿ ಬೀಡು ಬಿಡಲಿರುವ ಮಾನವ ಹಕ್ಕುಗಳ ಆಯೋಗ ಹಲವಾರು ಆಯಾಮಗಳಲ್ಲಿ ತನಿಖೆ ನಡೆಸಿ ವರದಿ ಸಿದ್ಧಪಡಿಸಲಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್; ಇಂದು ಪಾಯಿಂಟ್ 17ರಲ್ಲಿ ಉತ್ಖನನ – ಸಿಗುತ್ತಾ ಬುರುಡೆ, ಮೂಳೆ ಕುರುಹು?
ಸ್ವಯಂಪ್ರೇರಿತ ಪ್ರಕರಣ ದಾಖಲು
ಧರ್ಮಸ್ಥಳದಲ್ಲಿ ಅನಾಮಿಕ ಶವ ಹೂತ ಕೇಸ್‌ಗೆ ಸಂಬಂಧಿಸಿದಂತೆ ಎನ್‌ಎಚ್‌ಆರ್‌ಸಿ ಸ್ವಯಂಪ್ರೇರಿತ ದಾಖಲಿಸಿಕೊಂಡಿದೆ. ಬೆಳ್ತಂಗಡಿ ತಾಲೂಕಿನಾದ್ಯಂತ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ ಕಾರ್ಯಾಚರಣೆ ನಡೆಸುತ್ತಿದ್ದು, ಎಸ್‌ಐಟಿ ಪೊಲೀಸ್ ಠಾಣೆ, ಧರ್ಮಸ್ಥಳ ಠಾಣೆಗಳಿಗೂ ಭೇಟಿ ಕೊಟ್ಟಿದೆ. ಕಳೆದ ರಾತ್ರಿ 10 ಗಂಟೆವರೆಗೂ ತನಿಖೆಯ ಅಖಾಡದಲ್ಲಿದ್ದ ಎನ್‌ಎಚ್‌ಆರ್‌ಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹ ಮಾಡಿದೆ. ಈಗಾಗಲೇ ಶೋಧ ನಡೆಸಿರುವ ಪಾಯಿಂಟ್‌ಗಳಿಗೆ ಭೇಟಿ ಕೊಟ್ಟಿರುವ ತಂಡ, ಒಂದು ವಾರಗಳ ಕಾಲ ತಾಲೂಕಿನಲ್ಲಿದ್ದುಕೊಂಡು ಹಲವು ಆಯಾಮಗಳಲ್ಲಿ ತನಿಖೆ ನಡೆಸಲು ಸಿದ್ಧತೆ ನಡೆಸಿದೆ.
ಒಟ್ಟಾರೆ, ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ನಿಗೂಢ ಪ್ರಕರಣಕ್ಕೆ ಧುಮುಕಿರುವ ಮಾನವ ಹಕ್ಕುಗಳ ಆಯೋಗ ಗೌಪ್ಯವಾಗಿ ಹಲವರ ವಿಚಾರಣೆ ನಡೆಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನರನ್ನು ವಿಚಾರಣೆಗೊಳಪಡಿಸಿ ಶವಗಳ ಹೂತಿಟ್ಟ ಕೇಸ್‌ಗೆ ಅಂತ್ಯ ಹಾಡುತ್ತಾ ಕಾದುನೋಡಬೇಕಿದೆ. ಇದನ್ನೂ ಓದಿ: ಧರ್ಮಸ್ಥಳ ನಿಗೂಢ ಶವ ಕೇಸಲ್ಲಿ ಮಾನವ ಹಕ್ಕುಗಳ ಆಯೋಗ ಎಂಟ್ರಿ