ಧರ್ಮಸ್ಥಳ ಫೈಲ್ಸ್‌ | ನಿಗೂಢ ಸತ್ಯದ ಬೆನ್ನತ್ತಿದ SIT – ನೇತ್ರಾವತಿ ಸ್ನಾನಘಟ್ಟ ಬಳಿ ಶವಗಳ ಉತ್ಖನನ ಕಾರ್ಯ ಶುರು

Public TV
2 Min Read
Dharmasthala 04

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ (Dharmasthala Burials Case) ತನಿಖೆ ನಿರ್ಣಾಯಕ ಹಂತ ತಲುಪಿದೆ. ನೂರಾರು ಶವಗಳನ್ನು ಹೂತಿದ್ದೇನೆ ಎಂದಿದ್ದ ದೂರುದಾರ ಇದೀಗ 13 ಸ್ಥಳಗಳನ್ನ ಗುರುತಿಸಿದ್ದು, ಇಂದಿನಿಂದ ಶವಗಳನ್ನು ಹೊರತೆಯುವ ಕಾರ್ಯ ಶುರು ಮಾಡಲಾಗುತ್ತಿದೆ.

ನಿನ್ನೆ (ಸೋಮವಾರ) ಮೊದಲು ಗುರುತು ಮಾಡಿದ್ದ ಸ್ಥಳದಿಂದಲೇ ಸಮಾಧಿ ಅಗೆಯುವ ಕೆಲಸಕ್ಕೆ ಎಸ್‌ಐಟಿ (SIT) ಮುಂದಾಗಿದೆ. ಅದಕ್ಕಾಗಿ 12 ಕಾರ್ಮಿಕರನ್ನು ನಿಯೋಜನೆ ಮಾಡಿಕೊಂಡಿದೆ ವಿಶೇಷ ತನಿಖಾ ತಂಡ. ಗ್ರಾಮ ಪಂಚಾಯಿತಿಯಿಂದ 12 ಕಾರ್ಮಿಕರನ್ನ ನಿಯೋಜನೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಧರ್ಮಸ್ಥಳ ಗ್ರಾಪಂ ನಿಂದ ಉತ್ಖನನಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಸ್ಟೆಲ್ಲಾ ವರ್ಗೀಸ್, ಕಂದಾಯ ಇಲಾಖೆ ಇತರ ಸಿಬ್ಬಂದಿಗಳೂ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಇಂದಿನಿಂದ ಸಮಾಧಿ ಅಗೆಯುವ ಕಾರ್ಯ ಶುರುವಾಗಲಿದೆ.

Dharmasthala 02

ನೇತ್ರಾವತಿ ಸ್ನಾನಘಟ್ಟದ ಬಳಿ ಈಗಾಗಲೇ ಸಿಬ್ಬಂದಿಗಳು ‌ಬಂದಿದ್ದು, 12 ಕಾರ್ಮಿಕರ ತಂಡ ಆರೆ, ಪಿಕಾಸಿ, ಗುದ್ದಲಿ ಜೊತೆಗೆ ಸಮಾಧಿ ಅಗೆಯಲು ಬೇಕಾದ ಎಲ್ಲ ಸಾಮಗ್ರಿಗಳನ್ನು ಸಜ್ಜುಗೊಳಿಸಲಾಗಿದೆ. ಅಲ್ಲದೇ ನಾಲ್ವರು ವೈದ್ಯರು, ಸಹಾಯಕ ಸಿಬ್ಬಂದಿ, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳದಲ್ಲೇ ಇದ್ದಾರೆ. ಕೆಲವೇ ಕ್ಷಣಗಳಲ್ಲಿ ಇವರೆಲ್ಲರ ಸಮಕ್ಷಮದಲ್ಲಿ ಸಮಾಧಿ ಅಗೆಯುವ ಕೆಲಸ ಶುರುವಾಗಲಿದೆ.

ಸೋಮವಾರ ಧರ್ಮಸ್ಥಳ ಗ್ರಾಮದ ಬೇರೆ ಬೇರೆ ಕಡೆಗಳಲ್ಲಿ ಶವ ಹೂತಿಟ್ಟ 13 ಜಾಗಗಳನ್ನ ಗುರುತು ಮಾಡಲಾಗಿತ್ತು. ಎಸ್‌ಐಟಿ ಅಧಿಕಾರಿಗಳು ಬಿಗಿ ಭದ್ರತೆಯಲ್ಲಿ ಆತನನ್ನು ಧರ್ಮಸ್ಥಳದ ನೇತ್ರಾವತಿ ಸ್ಥಾನಘಟ್ಟದ ಬಳಿ ಕರೆ ತಂದು, ಸ್ನಾನಘಟ್ಟದ ಎಡ ಬದಿಯಲ್ಲಿ ಎರಡು ಗಂಟೆಗಳ ಕಾಲ ಒಂದು ಕಿಲೋಮೀಟರ್ ಸಾಗಿ ಒಟ್ಟು 8 ಸ್ಥಳಗಳನ್ನ ಗುರುತಿಸಲಾಗಿತ್ತು. ಬಳಿಕ ನೇತ್ರಾವತಿ ಸ್ನಾನಘಟ್ಟ ಹಾಗೂ ನೇತ್ರಾವತಿ ಸೇತುವೆಯ ಮಧ್ಯಭಾಗದ ಅರಣ್ಯ ಪ್ರದೇಶದಲ್ಲಿ ನಾಲ್ಕು ಜಾಗಗಳನ್ನ ಗುರುತಿಸಲಾಗಿದೆ. ಬಳಿಕ ನೇತ್ರಾವತಿ ಸ್ನಾನಘಟ್ಟದ ಬಲ ಬದಿಯಲ್ಲಿದ್ದ ಅಜಿಕುರಿ ರಸ್ತೆ ಬದಿಯ ಜಾಗದಲ್ಲೂ ಶವ ಹೂತಿಟ್ಟಿರೋದಾಗಿ ಅನಾಮಿಕ ವ್ಯಕ್ತಿ ಗುರುತಿಸಿದ್ದಾರೆ. ಸೋಮವಾರ ಒಟ್ಟು 15 ಸ್ಥಳಗಳನ್ನು ಗುರುತಿಸುವ ತಯಾರಿ ಎಸ್‌ಐಟಿ ನಡೆಸಿದ್ದರೂ ಕತ್ತಲಾದ ಹಿನ್ನೆಲೆಯಲ್ಲಿ 13 ಸ್ಥಳಗಳನ್ನ ಮಾತ್ರ ಗುರುತಿಸಲಾಗಿತ್ತು.

Dharmasthala 05

ಸೋಮವಾರ ಗುರುತಿಸಿರೋ ಎಲ್ಲಾ 13 ಜಾಗಗಳಿಗೂ ಎಸ್‌ಐಟಿ ವಿಶೇಷ ಭದ್ರತೆ ಕಲ್ಪಿಸಿದೆ. ಮಹಜರಿನ ಮೊದಲ ದಿನ 13 ಸ್ಥಳಗಳನ್ನು ಗುರುತಿಸಿದ ಸ್ಥಳಗಳ ದಾಖಲೀಕರಣ ಮಾಡಿದ ಎಸ್‌ಐಟಿ ಟೀಮ್ ಗುರುತಿಸಿದ ಎಲ್ಲಾ ಸ್ಥಳಗಳಲ್ಲಿ ಬಿಗಿ ಭದ್ರತೆ ಮಾಡಿದೆ. ಗುರುತಿಸಿದ ಪ್ರತಿ ಸ್ಥಳಕ್ಕೂ ತಲಾ 2 ಮಂದಿ ಶಸ್ತ್ರಸಜ್ಜಿತ ಸಿಬ್ಬಂದಿಗಳನ್ನ ನೇಮಕ ಮಾಡಿದ್ದು, ದಟ್ಟ ಅರಣ್ಯದಲ್ಲಿ ರಾತ್ರಿ ಹಗಲು ಸರ್ಪಗಾವಲು ಹಾಕಿದೆ. ಗುರುತಿಸಿದ ಜಾಗಗಳಿಗೆ ಟೇಪ್ ಹಾಕಿ, ಎಲ್ಲದಕ್ಕೂ ನಂಬರ್ ನೀಡಲಾಗಿದೆ. ಇಂದು ಮತ್ತೆ ಉಳಿದಿರೋ ಜಾಗಗಳ ಗುರುತಿಸುವ ಕೆಲಸ ನಡೆಯಲಿದ್ದು, ಬಳಿಕ ಎಲ್ಲವನ್ನ ಅಗೆಯುವ ತೀರ್ಮಾನವನ್ನು ಎಸ್‌ಐಟಿ ಮಾಡಿದೆ.

Share This Article