– ಶವ ಹೂತಿಟ್ಟ ಜಾಗ ತೋರಿಸಲು ಸಿದ್ಧವೆಂದ ದೂರುದಾರ
ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದ (Dharmasthala Burials Case) ತನಿಖೆ ಶುರುವಾಗಿದೆ. ಅನಾಮಧೇಯ ವ್ಯಕ್ತಿ ಕೊಟ್ಟ ಹೇಳಿಕೆ ಆಧರಿಸಿ ಇವತ್ತಿನಿಂದ ತನಿಖೆ ಆರಂಭಿಸಲಾಗಿದೆ. ಇಬ್ಬರು ವಕೀಲರೊಂದಿಗೆ ಮಂಗಳೂರಿನ ಎಸ್‌ಐಟಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದ ಅನಾಮಧೇಯ ವ್ಯಕ್ತಿ ಸುಮಾರು 8 ತಾಸುಗಳ ಕಾಲ ವಿಚಾರಣೆ ಎದುರಿಸಿದ್ದಾನೆ.
ಕೋರ್ಟ್ ಮುಂದೆ ಅನಾಮಿಕ ವ್ಯಕ್ತಿ ಕೊಟ್ಟ ಹೇಳಿಕೆ ಆಧರಿಸಿ ಪ್ರಣವ್ ಮೊಹಾಂತಿ ನೇತೃತ್ವದ ಎಸ್‌ಐಟಿ ತಂಡ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಎಸ್‌ಐಟಿ ಕೇಳಿದ ಪ್ರಶ್ನೆಗಳಿಗೆ ಶವ ಹೂತಿಟ್ಟ ವ್ಯಕ್ತಿ ಉತ್ತರ ಕೊಟ್ಟಿದ್ದಾನೆ. ತನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಶವ ಹೂತಿಟ್ಟ ಜಾಗಗಳನ್ನು ತೋರಿಸಲು ಸಿದ್ಧನಿದ್ದೇನೆ ಅಂತ ವಿಚಾರಣೆ ವೇಳೆ ಅನಾಮಿಕ ವ್ಯಕ್ತಿ ಹೇಳಿಕೊಂಡಿದ್ದಾನೆ. ಇದೀಗ ದೂರುದಾರ ಇಬ್ಬರು ವಕೀಲರ ಜೊತೆ ಅಜ್ಞಾತ ಸ್ಥಳಕ್ಕೆ ಹೊರಟಿದ್ದಾನೆ.
ದೂರುದಾರನಿಗೆ SIT ಪ್ರಶ್ನೆ ಏನು?
* ಯಾವ್ಯಾವ ವರ್ಷದಲ್ಲಿ ಎಷ್ಟು ಶವ ಹೂತಿದ್ದೀರಾ..?
* ಯಾವ ಪ್ರದೇಶದಲ್ಲಿ ಶವ ಹೂತು ಹಾಕಿದ್ದೀರಿ..?
* ಶವ ಹೂತಿರುವ ಜಾಗವನ್ನು ತೋರಿಸುತ್ತೀರಾ..?
* ನಿಮಗೆ ಯಾರಾದರೂ ಬೆದರಿಕೆ/ಒತ್ತಡ ಹಾಕಿದ್ರಾ..?
* ನಿಮಗೆ ಶವಗಳನ್ನು ತೋರಿಸಿದ್ದು ಯಾರು..?
* ಕಾರಿನಲ್ಲಿ ಶವಗಳನ್ನು ತಂದಿದ್ಯಾರು..?
* ಶವಗಳನ್ನು ತಂದಾಗ ಯಾವ ಸ್ಥಿತಿಯಲ್ಲಿದ್ದವು..?
* ಹೂತಿಟ್ಟ ಶವಗಳಲ್ಲಿ ಮಹಿಳೆಯ ಶವಗಳೆಷ್ಟು..?
* ಅಂದೇ ಪೊಲೀಸರ ಗಮನಕ್ಕೆ ಯಾಕೆ ತರಲಿಲ್ಲ..?
* ನೀವು ಧರ್ಮಸ್ಥಳ ಬಿಟ್ಟು ಹೋಗಿದ್ಯಾಕೆ..?
* 20 ವರ್ಷಗಳ ಬಳಿಕ ನಿಮಗೆ ಸ್ಥಳ ನೆನಪಿದ್ಯಾ..?
* ಇದೇ ಸ್ಥಳ ಅಂತ ಹೇಗೆ ಹೇಳಬಲ್ಲಿರಾ..?
ಎಸ್‌ಐಟಿಗೆ ಅನಾಮಿಕನ ಉತ್ತರವೇನು?
ಪಾಪಪ್ರಜ್ಞೆ ಕಾಡುತ್ತಿದೆ; ನಾನು ಹೇಳಿದ್ದೆಲ್ಲವೂ ಸತ್ಯ. ನಾನು ಶವ ಹೂತಿಟ್ಟ ಜಾಗ ತೋರಿಸುತ್ತೇನೆ. ನನಗೆ ಎಲ್ಲವೂ ನೆನಪಿದೆ. ಹೂತಿಟ್ಟ ಶವಗಳಲ್ಲಿ ಮಹಿಳೆಯರದ್ದೇ ಹೆಚ್ಚು, ಕೆಲ ಮಹಿಳೆಯರ ಶವಗಳು ನಗ್ನ ಸ್ಥಿತಿಯಲ್ಲಿದ್ದವು. ಇವೆಲ್ಲ ಅನಾಥ ಶವಗಳು ಅಂತ ನಾನು ಭಾವಿಸಿದ್ದೆ. ಅನಂತರ ನನಗೆ ಅನುಮಾನ ಬರಲು ಶುರುವಾಯ್ತು. ನನಗೆ ಯಾರ ಭಯವೂ, ಒತ್ತಡವೂ ಇಲ್ಲ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಎಂದು ಹೇಳಿದ್ದಾನೆ.