ವಿಜಯಪುರ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ರಾಜಕೀಕರಣಗೊಳಿಸಬೇಡಿ ಎಂದು ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದರು.
ವಿಜಯಪುರದಲ್ಲಿ (Vijayapura) ಮಾತನಾಡಿದ ಅವರು, ಎಸ್‌ಐಟಿ (SIT) ರಚನೆಯಾಗಿದೆ, ಪೊಲೀಸರು ಕೆಲಸ ಮಾಡ್ತಿದ್ದಾರೆ, ಮಾಡಲು ಬಿಡಿ. ಪ್ರಕರಣದ ತನಿಖೆಯನ್ನ ರಾಜಕೀಕರಣಗೊಳಿಸಬೇಡಿ. ಅಡ್ವಾನ್ಸ್ ಜಡ್ಜ್ಮೆಂಟ್ ಬರೆಯುವ ಅವಶ್ಯಕತೆ ಇಲ್ಲ. ತನಿಖೆ ಮಾಡಲಿ, ಏನು ಸತ್ಯಾಂಶವಿದೆ, ಅದು ಹೊರಗೆ ಬರುತ್ತದೆ ಎಂದರು. ಇನ್ನೂ ಈ ಕುರಿತು ಬಿಜೆಪಿಯವರು ಏನಾದರೂ ಹಬ್ಬಿಸೋದು ಕಾಮನ್. ಚುನಾವಣೆ ಸಮಯದಲ್ಲಿಯೂ 6 ತಿಂಗಳು ಇರುವಾಗ ಶುರು ಮಾಡುತ್ತಾರೆ. ಆದರೆ ಈಗ ಮೂರು ವರ್ಷ ಮುಂಚೆಯೇ ಶುರು ಮಾಡಿದ್ದಾರೆ. ಇದೇನು ಹೊಸದಲ್ಲ, ಹಿಂದೆ ಕರಾವಳಿಯಲ್ಲಿ ಹಿಂದೂಗಳ ಹತ್ಯೆ ಎಂದಿದ್ದರು. ಸಿಬಿಐ, ಎಸ್‌ಐಟಿ ರಚನೆ ಮಾಡಿದ್ದರು. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದರು.ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಆಗಸ್ಟ್‌ನಲ್ಲಿ ಯೆಲ್ಲೋ ಲೈನ್ ಉದ್ಘಾಟನೆ ಸಾಧ್ಯತೆ
ಇದೇ ವೇಳೆ ಬಿಜೆಪಿ ಶಾಸಕರಿಗೆ ಕಡಿಮೆ ಅನುದಾನ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಕೊಟ್ಟಿದ್ದಾರೆ. ಬಿಜೆಪಿ, ಜೆಡಿಎಸ್ ಶಾಸಕರಿಗೆ 25 ಕೋಟಿ ರೂ. ಕೊಟ್ಟಿದ್ದೇವೆ. ಬಿಜೆಪಿಯವರು ನಮಗೆ ಕೇವಲ 5 ಕೋಟಿ ರೂ. ಕೊಟ್ಟಿದ್ದರು. ನಾವು ಅವರಿಗಿಂತ ಹೆಚ್ಚಿಗೆ ಕೊಟ್ಟಿದ್ದೇವೆ ಎಂದು ಟಾಂಗ್ ಕೊಟ್ಟರು.
ಕೆಪಿಸಿಸಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿ, ಅದು ನಮ್ಮ ಹಂತದಲ್ಲಿ ಇಲ್ಲ. ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಸಮಯ ಬಂದಾಗ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುತ್ತಾರೆ. ಸೂಕ್ತ ಸಮಯದಲ್ಲಿ ವರಿಷ್ಠರು ನಿರ್ಧಾರ ಮಾಡುತ್ತಾರೆ. ಇದನ್ನು ನಾವು ಹೇಳೋಕೆ ಆಗಲ್ಲ. ಕಾದು ನೋಡೋಣ ಎಂದರು.
ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಬಿರುಗಾಳಿ ವಿಚಾರವಾಗಿ ಮಾತನಾಡಿ, ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ಮಾಡಬೇಕು. ಸಿಎಂ ಈಗಾಗಲೇ ನಾನೇ 5 ವರ್ಷ ಇರ್ತಿನಿ ಎಂದಿದ್ದಾರೆ. ಜಾಗ ಖಾಲಿ ಇಲ್ಲ ಎಂದು ಸ್ವತಃ ಡಿಸಿಎಂ ಹೇಳಿದ್ದಾರೆ. ಅವರೇ ಹೊಂದಾಣಿಕೆ ಆಗಿದ್ದಾರೆ, ನಾವೇನು ಹೇಳಬೇಕು ಎಂದು ತಿಳಿಸಿದರು.ಇದನ್ನೂ ಓದಿ: ದೆಹಲಿಯಲ್ಲಿ ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ – ಪ್ರಯಾಣಿಕರು ಸೇಫ್