ತಾವಿಬ್ಬರೂ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿ ಅಸಂಖ್ಯಾತ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು ತಮಿಳಿನ ಖ್ಯಾತ ನಟ ಧನುಷ್ (Dhanush) ಮತ್ತು ರಜನಿಕಾಂತ್ ಪುತ್ರಿ, ಧನುಷ್ ಪತ್ನಿ ಐಶ್ವರ್ಯ ರಜನಿಕಾಂತ್. ತಾವಿಬ್ಬರೂ ದೂರ ಆಗುತ್ತಿರುವ ವಿಷಯವನ್ನು ಒಂಬತ್ತು ತಿಂಗಳ ಹಿಂದೆಯೇ ಸೋಷಿಯಲ್ ಮೀಡಿಯಾದಲ್ಲಿ ಇವರು ಖಚಿತ ಪಡಿಸಿದ್ದರು. ಇಂತಹ ಜೋಡಿಯು ದೂರ ಆಗುತ್ತಿರುವುದಕ್ಕೆ ಅಭಿಮಾನಿಗಳು ಮಾತ್ರವಲ್ಲ, ಎರಡೂ ಕುಟುಂಬಗಳು ನೊಂದುಕೊಂಡಿದ್ದವು.
ಧನುಷ್ ಮತ್ತು ಐಶ್ವರ್ಯ (Aishwarya Rajinikanth) ಅವರನ್ನು ಮತ್ತೆ ಒಂದು ಮಾಡಲು ಅನೇಕ ರೀತಿಯಲ್ಲಿ ಪ್ರಯತ್ನ ಪಡಲಾಯಿತು. ಆದರೆ, ಇವರಿಬ್ಬರೂ ಒಪ್ಪುತ್ತಿಲ್ಲ ಎನ್ನುವ ಮಾತೂ ಕೇಳಿ ಬಂತು. ಇದೀಗ ಈ ಜೋಡಿ ಡಿವೋರ್ಸ್ ವಾಪಸ್ಸು ಪಡೆಯಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಆಗಿದ್ದಲ್ಲವನ್ನೂ ಮರೆತು ಮತ್ತೆ ಒಂದಾಗುವ ಸಂಕಲ್ಪವನ್ನು ಈ ಜೋಡಿ ಮಾಡಿದೆ ಎನ್ನಲಾಗಿದ್ದು, ಮಗಳನ್ನು ಮತ್ತು ಅಳಿಯನನ್ನು ಒಪ್ಪಿಸಲು ರಜನಿಕಾಂತ್ ಕಾರಣ ಎನ್ನುವುದು ಗೊತ್ತಾಗಿದೆ. ಇದನ್ನೂ ಓದಿ: ಕಾಂತಾರ ಕಾಳಗ: ಜಾಲತಾಣಗಳಲ್ಲಿ ಸೈದ್ಧಾಂತಿಕ, ರಾಜಕೀಯ, ಪ್ರಾದೇಶಿಕ ಸೊಗಡಿನ ಚರ್ಚೆ
ರಜನಿಕಾಂತ್ (Rajinikanth) ಇಬ್ಬರನ್ನೂ ಕೂರಿಸಿಕೊಂಡು ಹಲವು ಸಲಹೆಗಳನ್ನು ನೀಡಿದ್ದಾರಂತೆ. ಅಲ್ಲದೇ, ಮಕ್ಕಳ ಭವಿಷ್ಯ ಸೇರಿದಂತೆ ಹಲವು ವಿಷಯಗಳನ್ನು ತಿಳಿಸಿ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ರಜನಿ ಸಂಧಾನಕ್ಕೆ ಇಬ್ಬರೂ ಒಪ್ಪಿಕೊಂಡು ಮತ್ತೆ ಒಂದಾಗುವ ಮಾತುಗಳನ್ನು ಆಡಿದ್ದಾರಂತೆ. ಇಂಥದ್ದೊಂದು ಸುದ್ದಿ ತಮಿಳು ಸಿನಿಮಾ ರಂಗದಲ್ಲಿ ಕೇಳಿ ಬರುತ್ತಿದ್ದು, ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿ ಆಗಿದೆ. ಆದಷ್ಟು ಬೇಗ ಈ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳಲಿ ಎಂದು ಹಲವರು ಶುಭ ಹಾರೈಸಿದ್ದಾರೆ.
ಇಬ್ಬರೂ ವಿಚ್ಛೇದನ (Divorce) ಪಡೆದ ನಂತರ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಳ್ಳುವ ಸಂದರ್ಭ ಬಂದಿದ್ದರೂ, ಒಟ್ಟಿಗೆ ಕಾಣಿಸಿಕೊಳ್ಳಲು ಹಿಂದೇಟು ಹಾಕಿತ್ತು ಈ ಜೋಡಿ. ಆದರೆ, ಸಿನಿಮಾ ಸಂಬಂಧಿ ಕೆಲಸಗಳಿಗೆ ಒಬ್ಬರಿಗೊಬ್ಬರು ಶುಭ ಹಾರೈಸಿಕೊಂಡಿದ್ದರು. ಮಕ್ಕಳ ಜೊತೆಯೂ ಧನುಷ್ ಹಲವು ಬಾರಿ ಕಾಣಿಸಿಕೊಂಡಿದ್ದರು. ಐಶ್ವರ್ಯ ಸಿನಿಮಾ ಮಾಡುವಲ್ಲಿ ಬ್ಯುಸಿಯಾಗಿದ್ದರೆ, ಧನುಷ್ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.