ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯುತ್ತಿದೆ: ಮಾಹಿತಿ ನೀಡಿದ್ರು ಡಿಜಿಪಿ

Public TV
2 Min Read
mdk neelamani

ಮಡಿಕೇರಿ: ಕೊಡಗಿನಲ್ಲಿ ಆಗುತ್ತಿರುವ ರಕ್ಷಣಾ ಕಾರ್ಯಚರಣೆಯ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ್ದಾರೆ.

ಸುದ್ದಿಗೋಷ್ಠಿಯ ಹೈಲೈಟ್ಸ್:
ಕೊಡಗಿನಲ್ಲಿ ಪ್ರವಾಹ ಶುರುವಾಗಿ ಇಂದಿಗೆ 10 ದಿನವಾಗಿದೆ. ಆಗಸ್ಟ್ 15ರ ರಾತ್ರಿಯಿಂದ ಪ್ರವಾಹ ಶುರುವಾಗಿದೆ ಎಂಬ ಸುದ್ದಿ ಬಂತ್ತು. 16ರ ಬೆಳಗ್ಗೆಯಿಂದ ಎಲ್ಲ ರಕ್ಷಣಾ ಕಾರ್ಯ ಆರಂಭಗೊಂಡು ನಂತರ ಮಧ್ಯಾಹ್ನ ಎಲ್ಲಾ ಹಿರಿಯ ಅಧಿಕಾರಿಗಳನ್ನು ಹಾಗೂ ರಕ್ಷಣಾ ಸಿಬ್ಬಂದಿಯನ್ನು ಕೊಡಗಿಗೆ ಕಳುಹಿಸಲಾಗಿದೆ. ಪ್ರವಾಹಕ್ಕೆ 10 ಜನ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಬಂದಿದ್ದು, ಈಗ ಅವರ ಮೃತದೇಹವನ್ನು ಹುಡುಕಿ ಅವರ ಅಂತ್ಯಸಂಸ್ಕಾರ ಕೂಡ ಆಗಿದೆ. ಅಲ್ಲದೇ ಮತ್ತೆ 10 ಜನರು ಕಾಣೆಯಾಗಿದ್ದಾರೆ ಎನ್ನುವ ದೂರು ದಾಖಲಾಗಿದೆ.

ಗುರುವಾರ ಸಂಜೆ ಕಾಲೂರಿನಿಂದ ದಂಪತಿ ಬಂದು 7 ವರ್ಷದ ಮಗು ಕಣ್ಣ ಮುಂದೆಯೇ ನೀರಿನಲ್ಲಿ ಜಾರಿ ಬಿತ್ತು ಎಂದು ದೂರು ನೀಡಿದರು. ಬೆಳಗ್ಗೆಯಿಂದ ಆ ಮಗುವನ್ನು ಹುಡುಕುವ ಕಾರ್ಯ ನಡೆಯುತ್ತಿದೆ. ಅಪರಿಚಿತ ಶವ ಹಾಗೂ ಕಾಣೆಯಾಗಿದವರನ್ನು ಹುಡುಕಲು ದಿನಕ್ಕೆ 5 ರಕ್ಷಣಾ ತಂಡ ಹೋಗುತ್ತಿದೆ. ಸದ್ಯ ಕಾಣೆಯಾದವರನ್ನು ಹುಡುಕುವತ್ತ ನಮ್ಮ ಗಮನವಿದೆ. ಮೂರು ದಿನಗಳಿಂದ ಡ್ರೋನ್ ಮೂಲಕ ಮೃತದೇಹವನ್ನು ಹುಡುಕುತ್ತಿದ್ದೇವೆ. ಆದರೆ ಹವಾಮಾನ ಸರಿಯಿಲ್ಲದ ಕಾರಣ ಡ್ರೋನ್ ಬಳಸಲು ಸಾಧ್ಯವಾಗುತ್ತಿಲ್ಲ.

mdk neelamani 2

ಸದ್ಯ ಎಲ್ಲ ರಕ್ಷಣಾ ಸಿಬ್ಬಂದಿ ರಸ್ತೆ ಮೂಲಕ ಕೂಡ ಹೋಗಿ ಜನರನ್ನು ಹುಡುಕುತ್ತಿದ್ದಾರೆ. ಅಲ್ಲದೇ ಯೋಧರ ತಂಡದಿಂದ ಶ್ವಾನವನ್ನು ಕರೆಸಿಕೊಂಡಿದ್ದೇವೆ. ಆ ಶ್ವಾನಕ್ಕೆ ಮೃತದೇಹ ಹುಡುಕುವ ಅಭ್ಯಾಸವಿಲ್ಲ. ಆದರೂ ನಾವು ಪ್ರಯತ್ನಿಸುತ್ತಿದ್ದೇವೆ. ನದಿಯಲ್ಲಿ ಬೋಟ್ ಮೂಲಕವೂ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಸದ್ಯ ಈಗ 43 ಪರಿಹಾರ ಕೇಂದ್ರದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ನೆಲೆಸಿದ್ದಾರೆ. ಸದ್ಯ ಈಗ ಅವರಿಗೆ ಅಗತ್ಯ ವಸ್ತುಗಳು ಬಹಳಷ್ಟು ದೊರೆತಿದೆ. ಅವರು ಈಗ ತಮ್ಮವರನ್ನು ಹಾಗೂ ಆಸ್ತಿ, ಮನೆ ಕಳೆದುಕೊಂಡ ದುಃಖದಲ್ಲಿ ಇದ್ದಾರೆ. ಹಾಗಾಗಿ ಒಂದು ವೈದ್ಯರ ತಂಡ ಹಾಗೂ ಮನೋವಿಜ್ಞಾನಿಗಳ ತಂಡವನ್ನು ಕರೆಸಿ ಅವರ ಜೊತೆ ಮಾತನಾಡಿಸಿ ಅವರ ದುಃಖವನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ.

MDK RAIN 1 2

ಈಗ ಬಹಳ ಕಡೆ ಗುಡ್ಡಗಳು ಅಲ್ಲಲ್ಲಿ ಕುಸಿಯುತ್ತಿದೆ. ಈಗ ಮತ್ತೆ ಮಳೆ ಶುರುವಾಗಿದರಿಂದ ನಾವು ಹುಷಾರಾಗಿ ಇರಬೇಕಿದೆ. ಯಾವುದೇ ಮನೆಗಳು ಸ್ವಲ್ಪ ಅಪಾಯದಲ್ಲಿ ಇರುವುದು ಕಂಡು ಬಂದರೆ, ಅಲ್ಲಿದ್ದವರನ್ನು ಮನೆಯಿಂದ ಖಾಲಿ ಮಾಡಿಸಲಾಗುತ್ತಿದೆ. ರಕ್ಷಣಾ ತಂಡ ಎಲ್ಲವನ್ನೂ ನೋಡಿಕೊಳ್ಳುತ್ತಿದೆ. ಈಗ ಮತ್ತೆ ಗುಡ್ಡ ಕುಸಿತ ಶುರುವಾದರೆ, ಅದಕ್ಕೆ ನಾವು ಎಲ್ಲ ತಯಾರಿಗಳನ್ನು ನಡೆಸಿಕೊಂಡಿದ್ದೇವೆ. ಸದ್ಯ ನಾವು ಯಾವುದೇ ರಕ್ಷಣಾ ತಂಡವನ್ನು ವಾಪಸ್ ಕಳುಹಿಸಿಲ್ಲ. ಎಲ್ಲ ತಂಡ ತಮ್ಮ ಕಾರ್ಯಾಚರಣೆ ನಡೆಸುತ್ತಿದೆ.

MDK RAIN 2

ಭೂ ಕುಸಿತಗೊಂಡ ಜೋಡುಪಾಲ ಭಾಗದಲ್ಲಿ ಮಂಗಳೂರಿನ ಎನ್‍ಡಿಆರ್‍ಎಫ್ ತಂಡ 200ಕ್ಕೂ ಹೆಚ್ಚು ಮಂದಿ ರಕ್ಷಿಸಿ ಸಂಪಾಜೆ ಪರಿಹಾರ ಕೇಂದ್ರದಲ್ಲಿ ಸುರಕ್ಷಿತವಾಗಿ ಇರಿಸಿದ್ದಾರೆ. ಪೊಲೀಸರಿಗೆ ಹಾಗೂ ರಕ್ಷಣಾ ಸಿಬ್ಬಂದಿಗೆ ವಾಹನ ಹಾಗೂ 17 ಸೀಟ್‍ನ ವ್ಯಾನ್ ಹಾಗೂ ಜೀಪ್‍ಗಳ ಅಗತ್ಯವಿತ್ತು. ಆ ವಾಹನಗಳನ್ನೆಲ್ಲಾ ನಾವು ಕಳುಹಿಸಿಕೊಟ್ಟಿದ್ದೇವೆ.

ರಾಜ್ಯ ವಿಪತ್ತು ನಿರ್ವಹಣ ತಂಡ(ಎಸ್‍ಡಿಆರ್‍ಎಫ್) ತಂಡ ಕೂಡ ಆಗಸ್ಟ್ 16ರಿಂದಲೇ ಕಾರ್ಯಾಚರಣೆ ನಡೆಸುತ್ತಿದೆ. ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಪೊಲೀಸರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಮಾಧ್ಯಮ ಪ್ರತಿನಿಧಿಗಳು ಕೂಡ ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *