ನವದೆಹಲಿ: ಇನ್ನು ಮುಂದೆ ಪಿಯುಸಿಯಲ್ಲಿ ಕಲೆ (Arts) ಮತ್ತು ವಾಣಿಜ್ಯ (Commerce) ವಿಷಯವನ್ನು ಓದಿದವರೂ ವಾಣಿಜ್ಯ ಪೈಲಟ್ (Pilots) ಆಗಬಹುದು.
ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ವಾಣಿಜ್ಯ ಪೈಲಟ್ ಪರವಾನಗಿ (CPL) ತರಬೇತಿಗಾಗಿ ವಿದ್ಯಾರ್ಥಿ 12ನೇ ತರಗತಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯವನ್ನು ಕಡ್ಡಾಯವಾಗಿ ಅಧ್ಯಯನ ಮಾಡಿರಬೇಕೆಂಬ ಷರತ್ತನ್ನು ತೆಗೆಯಲು ಮುಂದಾಗಿದೆ ಎಂದು ವರದಿಯಾಗಿದೆ.
1990ರ ದಶಕದ ಮಧ್ಯದಿಂದ ಭಾರತದಲ್ಲಿ ಪೈಲಟ್ ಆಗಲು ವಿಜ್ಞಾನ ಮತ್ತು ಗಣಿತ ಓದಿರಬೇಕೆಂಬ ನಿಯಮ ತರಲಾಗಿತ್ತು. ಇದಕ್ಕೂ ಮೊದಲು 10ನೇ ತರಗತಿ ಉತ್ತೀರ್ಣ (ಮೆಟ್ರಿಕ್) ಮಾತ್ರ ಶೈಕ್ಷಣಿಕ ಅವಶ್ಯಕತೆಯಾಗಿತ್ತು. ಇದನ್ನೂ ಓದಿ: ಅಮೆರಿಕಕ್ಕೆ ಭಾರತದಿಂದ 5 ವಿಮಾನ ಭರ್ತಿ ಐಫೋನ್ ಕಳುಹಿಸಿದ ಆಪಲ್
ಈಗ ವೈದ್ಯಕೀಯ ಫಿಟ್‌ನೆಸ್ ಮಾನದಂಡದ ಜೊತೆ ಯಾವುದೇ ಮಾಧ್ಯಮದಲ್ಲಿ 12ನೇ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪೈಲಟ್ ತರಬೇತಿ ಪಡೆಯಲು ಅವಕಾಶ ನೀಡಲು ಡಿಜಿಸಿಎ ಮುಂದಾಗುತ್ತಿದೆ.
ಒಮ್ಮೆ ಅಂತಿಮಗೊಳಿಸಿದ ನಂತರ ಈ ಶಿಫಾರಸನ್ನು ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಸಚಿವಾಲಯ ಅನುಮೋದಿಸಿದಾಗ CPL ತರಬೇತಿಯು ಎಲ್ಲಾ ಸ್ಟ್ರೀಮ್‌ಗಳಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಮುಕ್ತವಾಗಿರುತ್ತದೆ ಎಂದು ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಜಿಪಿಎಸ್ ಆಧಾರಿತ ಟೋಲ್ ಬಗ್ಗೆ ನಿರ್ಧಾರ ಕೈಗೊಂಡಿಲ್ಲ – ಹೆದ್ದಾರಿ ಸಚಿವಾಲಯ ಸ್ಪಷ್ಟನೆ
ಅಲೈಯನ್ಸ್ ಏರ್ ಮತ್ತು ಇಂಡಿಗೋದಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಪೈಲಟ್ ಕ್ಯಾಪ್ಟನ್ ಶಕ್ತಿ ಲುಂಬಾ ಪ್ರತಿಕ್ರಿಯಿಸಿ, ಭಾರತವನ್ನು ಹೊರತುಪಡಿಸಿ ಬೇರೆ ಯಾವುದೇ ದೇಶದಲ್ಲಿ ಸಿಪಿಎಲ್ ತರಬೇತಿಗೆ ಅರ್ಹತಾ ಮಾನದಂಡವಾಗಿ 12ನೇ ತರಗತಿ ಮಟ್ಟದಲ್ಲಿ ಭೌತಶಾಸ್ತ್ರ ಮತ್ತು ಗಣಿತದ ಅವಶ್ಯಕತೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಹಲವರು ಮಂದಿ ಈ ನಿಯಮವನ್ನು ಪ್ರಶ್ನಿಸಿದ್ದಾರೆ. ನೀವು ಶ್ರೀಮಂತರಾಗಿದ್ದರೆ ಮತ್ತು ನಿಮ್ಮದೇ ಸ್ವಂತ ವಿಮಾನವನ್ನು ಹಾರಿಸಲು ಬಯಸಿದರೆ ಈ ನಿಯಮಗಳು ಅನ್ವಯವಾಗುವುದಿಲ್ಲ. ಹೀಗಾಗಿ ಗಣಿತ ಮತ್ತು ಭೌತಶಾಸ್ತ್ರ ಕಡ್ಡಾಯ ಮಾಡಿದ್ದು ಯಾಕೆ ಎಂದು ಕೇಳಿದ್ದಾರೆ. ಇದನ್ನೂ ಓದಿ: ಲೇಸರ್ ಲೈಟ್ ಎಫೆಕ್ಟ್, ಪಾಟ್ನಾ ಏರ್‌ಪೋರ್ಟ್‌ನಲ್ಲಿ ತಪ್ಪಿತು ದುರಂತ – ಪೈಲಟ್ ಸಾಹಸದಿಂದ ಉಳಿಯಿತು ನೂರಾರು ಜೀವ
ವಾಣಿಜ್ಯ ಪೈಲಟ್ ಪ್ರಮಾಣಪತ್ರ ಪಡೆಯಲು ಭಾರತದಿಂದ ಹಲವು ಮಂದಿ ವಿದೇಶಕ್ಕೆ ತರಬೇತಿ ಪಡೆಯಲು ಹೋಗುತ್ತಿರುವ ಬೆನ್ನಲ್ಲೇ DGCA ನಿಯಮ ಬದಲಾವಣೆಗೆ ಮುಂದಾಗಿದೆ.