ಬೆಂಗಳೂರು: ಹೈಕೋರ್ಟ್ ಆದೇಶದ ಮೆರೆಗೆ ಸರ್ಕಾರಿ ಜಾಗದಲ್ಲಿರುವ ದೇಗುಲಗಳನ್ನು ತೆರವು ಮಾಡುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಶ್ರೀರಾಂಪುರದ ಗಂಗಮ್ಮ ದೇಗುಲದ ತೆರವು ಕಾರ್ಯಚರಣೆಗೆ ಪಾಲಿಕೆಯ ಅಧಿಕಾರಿಗಳು ಮುಂದಾದರು. ಆದರೆ ಭಕ್ತರ ತೀವ್ರ ವಿರೋಧಕ್ಕೆ ಮಣಿದು ತೆರವು ಕಾರ್ಯಚರಣೆ ಮಾಡದೇ ವಾಪಸ್ಸಾದರು.
ಗಂಗಮ್ಮ ದೇಗುಲವನ್ನು ಯಾವುದೇ ಕಾರಣಕ್ಕೆ ಬಿಟ್ಟು ಕೊಡುವುದಿಲ್ಲ. ನಮ್ಮ ಪ್ರಾಣ ಬೇಕಾದ್ರೂ ಕೊಡ್ತೇವೆ. ಆದರೆ ದೇವಸ್ಥಾನವನ್ನ ಒಡೆಯೋದಕ್ಕೆ ಬಿಡಲ್ಲ. 80 ವರ್ಷದ ದೇಗುಲವನ್ನು ಕೆಡವುದಕ್ಕೆ ಬಿಡಲ್ಲ ಎಂದು ಹೇಳುತ್ತಾ ಭಕ್ತರು ದೇವಸ್ಥಾನದ ಆವರಣದಲ್ಲಿಯೇ ಕುಳಿತರು. 2009ರ ನಂತರ ನಗರದಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಾಣವಾಗಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಿ ಎಂದು ಹೈಕೋರ್ಟ್ ಆದೇಶ ನೀಡಿತ್ತು. ಇದಕ್ಕೆ ಭಕ್ತರು ವಿರೋಧ ವ್ಯಕ್ತಪಡಿಸಿ ಸುಪ್ರೀಂಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
Advertisement
Advertisement
ಸರ್ಕಾರಿ ಜಾಗದಲ್ಲಿರುವ ದೇಗುಲಗಳನ್ನು ತೆರವುಗೊಳಿಸಿ ಎಂಬ ಆದೇಶ ಬಂದಿದ್ದರಿಂದ ಬಿಬಿಎಂಪಿಯ ಅಧಿಕಾರಿಗಳು ಇಂದು ಶ್ರೀರಾಂಪುರದ ಗಂಗಮ್ಮ ದೇಗುಲದ ತೆರವು ಕಾರ್ಯಚರಣೆಗೆ ಹೋಗಿದ್ದರು. ಈ ಹಿಂದೆ ಟೋಲ್ ಗೇಟ್ ನಲ್ಲಿರುವ ಸಾಯಿಬಾಬಾ ದೇವಸ್ಥಾನವನ್ನು ತೆರವು ಮಾಡೋದಕ್ಕೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದರು. ಆದರೆ ಅಲ್ಲಿಯೂ ಭಕ್ತರ ವಿರೋಧ ಹಿನ್ನೆಲೆ ತೆರವು ಕಾರ್ಯಚರಣೆಯನ್ನು ಪಾಲಿಕೆಯ ಅಧಿಕಾರಿಗಳು ತಾತ್ಕಾಲಿಕವಾಗಿ ನಿಲ್ಲಿಸಿದ್ದರು.