– ಕಾರವಾರದಲ್ಲಿ ಖಾಫ್ರಿ ದೇವನಿಗೆ ವಿಶಿಷ್ಟ ಸೇವೆ
ಕಾರವಾರ: ಕೊರೊನಾ ವೈರಸ್ ಇಡೀ ವಿಶ್ವವನ್ನೇ ಆವರಿಸಿದೆ. ಅದರಲ್ಲೂ ಕರ್ನಾಟಕದಲ್ಲಿ ವ್ಯಕ್ತಿಯೋರ್ವನನ್ನು ಬಲಿ ತೆಗೆದುಕೊಂಡ ನಂತರ ಜನರಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ ಸಂಕಷ್ಟ ಬಂದಾಗ ವೆಂಕಟರಮಣ ಎನ್ನುವಂತೆ ಜನರು ದೇವರ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಕಾರವಾರದಲ್ಲಿ ಭಕ್ತರು ತಮ್ಮೂರಿಗೆ ಕೊರೊನಾ ವೈರಸ್ ಹಾಗೂ ಯಾವುದೇ ರೋಗ ರುಜನಗಳು ಭಾದಿಸದಿರಲಿ ಎಂದು ನಗರದ ರಾಷ್ಟ್ರೀಯ ಹೆದ್ದಾರಿ 66ರ ಕೋಡಿಭಾಗ್ ಬಳಿ ಇರುವ ಸರ್ವ ರೋಗ ಕಷ್ಟ ನಿವಾರಕ ಖಾಫ್ರಿ ದೇವರ ಮೊರೆ ಹೋಗಿದ್ದಾರೆ. ದೇವರಿಗೆ ಮದ್ಯ, ಸಿಗರೇಟು, ಕುರಿ, ಕೋಳಿ ನೀಡುವ ಮೂಲಕ ವಿಶಿಷ್ಟವಾಗಿ ದೇವರಲ್ಲಿ ಬೇಡಿಕೊಂಡಿದ್ದಾರೆ.
Advertisement
ಯಾವುದೇ ದೇವರಿಗೆ ಹಾಲು, ನೈವೇದ್ಯ, ಅಭಿಷೇಕ ಮಾಡುವುದು ಸಾಮಾನ್ಯ. ಅದರಲ್ಲೂ ಉಗ್ರ ಸ್ವರೂಪದ ದೇವರಾದರೆ ಕುರಿ, ಕೋಳಿ ಬಲಿ ನೀಡುತ್ತಾರೆ. ಆದರೆ ಇಲ್ಲಿಯ ದೇವರಿಗೆ ಸಾರಾಯಿ ಅಭಿಷೇಕ, ಸಿಗರೇಟಿನಿಂದ ಪೂಜಿಸುವ ಅಪರೂಪದ ಪದ್ಧತಿಯಿದ್ದು, ರೋಗ ರುಜನ ತೊಂದರೆ ಬಂದರೆ ಈ ರೀತಿಯ ಹರಕೆ ಸಲ್ಲಿಸುವುದು ಶತಮಾನಗಳಿಂದ ನಡೆದುಕೊಂಡು ಬಂದಿದೆ. ತಮಗೆ ಹಾಗೂ ತಮ್ಮೂರಿಗೆ ಯಾವುದೇ ರೋಗ ರುಜನಗಳು ಬರಬಾರದು ಎಂದು ದೇವನಿಗೆ ಸಾರಾಯಿ, ಸಿಗರೇಟುಗಳನ್ನು ನೂರಾರು ಭಕ್ತರು ಭಕ್ತಿಯಿಂದ ತಂದು ಇಂದು ಅರ್ಪಿಸಿದರು.
Advertisement
Advertisement
ಶತಮಾನದ ಇತಿಹಾಸ ಹೊಂದಿದ ವಿಶಿಷ್ಟ ದೇವರು:
ಸುಮಾರು 1 ಶತಮಾನಗಳ ಹಿಂದೆ ದಕ್ಷಿಣ ಆಫ್ರಿಕಾ ದೇಶದ ಖಾಫ್ರಿ ಹೆಸರಿನ ಪ್ರಜೆ ಇಲ್ಲಿ ಗುಡಿಸಲೊಂದರಲ್ಲಿ ವಾಸವಾಗಿದ್ದನಂತೆ. ಆತ ಪರೋಪಕಾರಿ ವ್ಯಕ್ತಿಯಾಗಿದ್ದ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದನಂತೆ. ಹೀಗಾಗಿ ಅವನಿಗೆ ಬಡವರ ರಕ್ಷಕ ಎಂದು ಕರೆಯಲಾಗುತ್ತಿತ್ತು. ಕೆಲವರ ಪಾಲಿಗೆ ಆತ ದೇವಮಾನವನಾಗಿದ್ದನು. ಹೀಗಿರುವಾಗ ಆತ ಇದ್ದಕ್ಕಿದ್ದಂತೆ ಕಣ್ಮರೆಯಾದ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲ. ಆದರೂ ಜನರು ಆತನ ಮೇಲೆ ಅಪಾರವಾದ ಭಯ-ಭಕ್ತಿ ಹೊಂದಿದ್ದರು. ಒಂದು ದಿನ ಗ್ರಾಮದ ಪರಸಪ್ಪ ಎಂಬಾತನಿಗೆ ಕಣ್ಮರೆಯಾದ ಖಾಫ್ರಿ ಕನಸಿನಲ್ಲಿ ಬಂದು ತನಗೊಂದು ಗುಡಿಯನ್ನು ಕಟ್ಟುವಂತೆ ಹಾಗೂ ತನಗೆ ಇಷ್ಟವಾದ ಸಾರಾಯಿ, ಸಿಗರೇಟು ಮಾಂಸದ ಭಕ್ಷಾದಿಗಳನ್ನು ನೀಡುವಂತೆ ಸೂಚಿಸಿದನೆಂದು ಹೇಳಲಾಗುತ್ತದೆ. ಇದರಿಂದ ಪರಸಪ್ಪ ಖಾಫ್ರಿಯ ಒಂದು ಕಲ್ಲಿನ ಮೂರ್ತಿಯನ್ನು ತಂದು ಪ್ರತಿಷ್ಟಾಪಿಸಿ ಪೂಜಿಸಲು ಪ್ರಾರಂಭಿಸಿದನು.
Advertisement
ಖಾಫ್ರಿಯ ಮೇಲೆ ಭಯ-ಭಕ್ತಿಯಿದ್ದವರು ರೋಗ ರುಜನ ಹರಡದಂತೆ ಹಾಗೂ ಯಾವುದೇ ಕಷ್ಟಗಳಿದ್ದರೂ ಬಂದು ಆತನ ಕಲ್ಲಿನ ಮೂರ್ತಿಗೆ ಸೇವೆಯನ್ನು ಸಲ್ಲಿಸಲು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ಖಾಫ್ರಿ ಭಕ್ತರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಬರುವಾಗ ಎಲ್ಲರನ್ನೂ ಕಾಪಾಡುವಂತೆ ಕೋರಿ ಕಡ್ಡಾಯವಾಗಿ ಸಾರಾಯಿ, ಸಿಗರೇಟು ತಂದು ದೇವರಿಗೆ ಸಲ್ಲಿಸುತ್ತಾರೆ.
ಸ್ಥಳೀಯರ ಪ್ರಕಾರ ಖಾಪ್ರಿ ಎನ್ನುವ ಸಂತ ಇಂದು ನಮಗೆ ನಮ್ಮ ಕಷ್ಟ-ಕಾರ್ಪಣ್ಯಗಳನ್ನು, ರೋಗ ರುಜನಗಳನ್ನು ನಿವಾರಿಸುವ, ಬೇಡಿಕೆಗಳನ್ನು ಈಡೇರಿಸುವ ಸಾಕ್ಷಾತ್ ದೇವನಾಗಿ ಇಲ್ಲಿ ನೆಲೆ ನಿಂತಿದ್ದಾನೆ. ಭಕ್ತಾದಿಗಳು ಅವನ ಮೇಲೆ ಭಕ್ತಿಯಿಟ್ಟು ಬಂದು ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ ಎನ್ನುತ್ತಾರೆ.
ಖಾಫ್ರಿ ದೇವರಿ ಆಚರಣೆಯ ವಿಶಿಷ್ಟತೆ:
ಹೂ-ಹಣ್ಣು ಕಾಯಿಯನ್ನು ಸಲ್ಲಿಸುವುದು. ಕೋಳಿಯನ್ನು ಬಲಿಕೊಡುವುದು, ಖಾಯಿಪಲ್ಲೆ ತರಕಾರಿಯ ತುಲಾಭಾರ ನಡೆಸುವುದು ಖಾಫ್ರಿ ದೇವರಿಗೆ ಪೂಜೆ ಸಲ್ಲಿಸುವ ಸಂಪ್ರದಾಯದ ಭಾಗವಾಗಿದೆ. ಜೊತೆಗೆ ಭಕ್ತಾದಿಗಳು ವೈವಿಧ್ಯಮಯವಾದ ಮದ್ಯಗಳನ್ನು ತಂದು ದೇವನಿಗೆ ಸಲ್ಲಿಸುವುದು ವಿಶೇಷವಾಗಿದೆ.
ಅಲ್ಲದೇ ಅದನ್ನೆ ದೇವರ ಪ್ರಸಾದ ಎಂದು ಸ್ವೀಕರಿಸುವವರು ಇದ್ದಾರೆ. ಸಿಗರೇಟನ್ನು ತಂದು, ಅಗರಬತ್ತಿಯ ರೂಪದಲ್ಲಿ ಆರತಿಯನ್ನು ಮಾಡುತ್ತಾರೆ. ಜಾತ್ರೆಯ ಸಂದರ್ಭದಲ್ಲಿ ಕಾರವಾರವಷ್ಟೇ ಅಲ್ಲದೇ ಗೋವಾ ರಾಜ್ಯದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತರು ಬಂದು ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ. ಹಲವರು ಕಟ್ಟಿಕೊಂಡ ಹರಕೆ ಈಡೇರಿದ ನಂತರದಲ್ಲಿ ತಮ್ಮ ಮನಸ್ಸಿಗೆ ತೋಚಿದಂತೆ ಹಣದ ರೂಪದಲ್ಲಿ, ವಸ್ತುರೂಪದಲ್ಲಿ ಸೇವೆಯನ್ನು ಕೂಡ ಸಲ್ಲಿಸುತ್ತಾರೆ.