ಮಡಿಕೇರಿ: ಇಂದು ಮಹಾಶಿವರಾತ್ರಿ ಸಡಗರ ಎಲ್ಲೆಲ್ಲೂ ಶಿವ ಜಪ ಮಾಡುತ್ತಿರುವ ಭಕ್ತರು ಈಶ್ವರನ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಇಂದು ನಾಡಿನೆಲ್ಲೆಡೆ ಮಹಾರುದ್ರ ಅಭಿಷೇಕ ಪ್ರಿಯ ಮಹದೇಶ್ವರನ ಆರಾಧನೆ ನಡೆಯುತ್ತಿದೆ. ಶಿವ ಮಂದಿರಗಳಲ್ಲಿ ವಿಶೇಷ ಪೂಜೆಗಳ ಮೂಲಕ ವಿಷಕಂಠನ ಸ್ಮರಣೆ ಮಾಡುತ್ತಿರುವ ಭಕ್ತರು ನಾನಾ ವಿಧಧ ಅಭಿಷೇಕಗಳ ಮೂಲಕ ನಮಿಸುತ್ತಿದ್ದಾರೆ. ಇತ್ತ ಕಾಫಿನಾಡು ಕೊಡಗಿನಲ್ಲಿಯೂ ಕೂಡ ಶಿವಾರಾಧನೆ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ.
ಮಂಜಿನ ನಗರಿ ಮಡಿಕೇರಿಗೆ ಹೊಂದಿಕೊಂಡಿರುವ ಕರ್ಣಂಗೇರಿಯ ಶ್ರೀ ರಾಜರಾಜೇಶ್ವರಿ ಸನ್ನಿಧಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯದಲ್ಲಿ ಇಂದು ಮಹಾದೇವನಿಗೆ ಹಾಲು, ನೀರು, ತುಪ್ಪ, ಜೇನು, ಎಳನೀರು, ಫಲ ಪುಷ್ಪಗಳಿಂದ ಭಕ್ತರು ಅಭಿಷೇಕ ಮಾಡಿದ್ದಾರೆ. ಅದರಲ್ಲೂ ಕ್ಷೇತ್ರದಲ್ಲಿ ನೆಲೆ ನಿಂತಿರುವ 52 ಅಡಿ ಎತ್ತರದ ಬೃಹತ್ ಶಿವ ಮೂರ್ತಿಯನ್ನು ಕಂಡು ಪುಳಕಿತರಾಗುವ ಭಕ್ತರು, ಗರ್ಭಗುಡಿಯ ಶಿವಲಿಂಗಕ್ಕೆ ಶಂಖನಾಧ, ಗಂಟೆ ಶಬ್ಧದ ಮೂಲಕ ಪೂಜೆ ಪುನಸ್ಕಾರ ಮಾಡಿ ಬಳಿಕ ಬೃಹದಾಕಾರದ ಶಿವ ವಿಗ್ರಹಕ್ಕೂ ನಮಿಸುತ್ತಾರೆ.
ಹಸಿರ ಸಿರಿಯ ನಡುವೆ ನೆಲೆನಿಂತಿರುವ ಕೊಡಗಿನ ಈ ಬೃಹತ್ ಈಶ್ವರ ಮೂರ್ತಿ ಇದೀಗ ಶಿವ ಭಕ್ತರನ್ನು ಸೆಳೆಯುತ್ತಿದೆ. ನಗರದ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಆಯೋಜನೆ ಮಾಡಲಾಗಿದೆ, ವಿವಿಧ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದ್ದ ಮಹೇಶ್ವರನ ದರ್ಶನ ಪಡೆದ ಭಕ್ತರು ತಮ್ಮ ಕಷ್ಟಗಳನ್ನು ಹೋಗಲಾಡಿಸುವ ಜಗದೀಶ್ವರ ಎಂದು ಮೊರೆ ಇಟ್ಟರು.
ಇಂದು ಬೆಳಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಹೋಮ-ಹವನಗಳಲ್ಲಿ ಪಾಲ್ಗೊಂಡರು. ಹೆಸರಾಂತ ಓಂಕಾರೇಶ್ವರನ ಸನ್ನಿಧಿಯಲ್ಲಿ ವಿವಿಧ ಅಭಿಷೇಕಗಳ ಬಳಿಕ ಶಿವಲಿಂಗಕ್ಕೆ ಹೂಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ನಗರದ ಶ್ರೀ ವೀರಮುನೇಶ್ವರ ದೇವಾಲಯದಲ್ಲಿಯೂ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಯಿತು.