Dharwad
ವಿಡಿಯೋ: ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ದೇವರ ಪಲ್ಲಕ್ಕಿ ಹೊತ್ತ ಭಕ್ತ

ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ಬೀರವಳ್ಳಿ ಗ್ರಾಮದ ಕಲ್ಮೇಶ್ವರನ ಜಾತ್ರೆಯಲ್ಲಿ ಪಲ್ಲಕ್ಕಿ ಹೊತ್ತಿದ್ದ ವ್ಯಕ್ತಿ ಕೆಂಡ ಹಾಯುವಾಗ ಆಯತಪ್ಪಿ ಬಿದ್ದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.
ಪ್ರತಿ ವರ್ಷದಂತೆ ಗ್ರಾಮದಲ್ಲಿ ಕಲ್ಮೇಶ್ವರ ದೇವರ ಪಲ್ಲಕ್ಕಿ ಉತ್ಸವದ ಜೊತೆಯಲ್ಲಿ ಕೆಂಡದೋಕುಳಿ ನಡೆಯುತ್ತದೆ. ಈ ಜಾತ್ರೆಯಲ್ಲಿ ಭಕ್ತಾದಿಗಳು ಕೆಂಡವನ್ನು ಬಣ್ಣದಂತೆ ಎರಚಾಡಿ ದೇವರಿಗೆ ಭಕ್ತಿ ಸಮರ್ಪಣೆ ಮಾಡ್ತಾರೆ. ಸೋಮವಾರ ಮಧ್ಯರಾತ್ರಿ ದೇವರ ಪಲ್ಲಕ್ಕಿ ಹೊತ್ತಿದ್ದ ಇಬ್ಬರಲ್ಲಿ ಹಿಂದೆ ಇದ್ದ ವ್ಯಕ್ತಿ ಕೆಂಡ ಹಾಯುವಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ತಕ್ಷಣ ಸ್ಥಳದಲ್ಲಿದ್ದವರು ಬಂದು ಪಲ್ಲಕ್ಕಿಯನ್ನ ಮೇಲಕ್ಕೆತ್ತಿ ತೆಗೆದುಕೊಂಡು ಹೋಗಿದ್ದಾರೆ. ಕೆಳಗೆ ಬಿದ್ದ ವ್ಯಕ್ತಿಯೂ ಕೂಡ ತಕ್ಷಣ ಮೇಲೆದ್ದು ಓಡಿದ್ದಾರೆ.
ಸಾಮಾನ್ಯವಾಗಿ ಜಾತ್ರೆ ಹಾಗೂ ರಥೋತ್ಸವಗಳು ಸಂಜೆ ಹೊತ್ತಿನಲ್ಲಿ ನಡೆಯುತ್ತವೆ. ಆದರೆ ಕಲ್ಮೇೀಶ್ವರನ ರಥೋತ್ಸವ ಮಧ್ಯರಾತ್ರಿ ನಡೆಯುತ್ತದೆ. ಹರಕೆ ಹೊತ್ತ ಭಕ್ತರು ದೇವಾಲಯದ ಪ್ರಾಂಗಣದಲ್ಲಿ ಒಂದೆಡೆ ಸೇರಿ ಕೆಂಡದೋಕುಳಿಯಲ್ಲಿ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಬೆಂಕಿಯನ್ನ ಹೂವಿನಂತೆ ಕೈಯಲ್ಲಿ ಹಿಡಿದು ಎರಚಾಡೋದು ನೋಡಿದರೆ ಎಂಥವರಿಗೆ ಒಂದು ಕ್ಷಣ ಮೈ ಜುಮ್ ಅನ್ನಿಸುತ್ತದೆ.
