ಮುಂಬೈ: ಕೇಂದ್ರ ಸರ್ಕಾರದ ಹಣವನ್ನು ವಾಪಸ್ ಕಳುಹಿಸಲು ದೇವೇಂದ್ರ ಫಡ್ನವಿಸ್ ಅವರನ್ನು 80 ಗಂಟೆಗಳ ಕಾಲ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು ಎಂಬ ಸಂಸದ ಅನಂತ್‍ಕುಮಾರ್ ಹೆಗ್ಡೆ ಹೇಳಿಕೆಯನ್ನು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿರಸ್ಕರಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 80 ಗಂಟೆಗಳ ಕಾಲ ಮುಖ್ಯಮಂತ್ರಿಯಾಗಿದ್ದಾಗ ನಾನು ಯಾವುದೇ ಹಣಕಾಸು ನಿರ್ಧಾರವನ್ನು ಕೈಗೊಂಡಿಲ್ಲ. ಈ ಕುರಿತು ನಾನು ಗಂಭೀರವಾಗಿ ಹೇಳಲು ಬಯಸುತ್ತೇನೆ ಯಾವುದೇ ಹಣವನ್ನು ಕೇಂದ್ರ ಸರ್ಕಾರಕ್ಕೆ ಮರಳಿ ಕಳುಹಿಸಿಲ್ಲ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಹಣಕಾಸು ವ್ಯವಸ್ಥೆಯನ್ನು ಪರಿಶೀಲಿಸಿದರೆ ಈ ಕುರಿತು ತಿಳಿಯುತ್ತದೆ ಸ್ಪಷ್ಟಪಡಿಸಿದರು.
No policy decision was taken in that period.
कोणताही धोरणात्मक निर्णय त्या काळात घेतला नाही!#Maharashtra pic.twitter.com/w8rzhB7bEf
— Devendra Fadnavis (@Dev_Fadnavis) December 2, 2019
ಈ ಎಲ್ಲ ಹೇಳಿಕೆಗಳು ಸುಳ್ಳು, ಬುಲೆಟ್ ರೈಲು ಯೋಜನೆಯಲ್ಲಿ ಸಹ ಕೇಂದ್ರ ಸರ್ಕಾರ ನಿಯೋಜಿಸಿದ ಕಂಪನಿ ಕಾಮಗಾರಿ ನಡೆಸುತ್ತಿದೆ. ರಾಜ್ಯ ಸರ್ಕಾರ ಬುಲೆಟ್ ರೈಲಿಗೆ ಕೇವಲ ಭೂಮಿಯನ್ನು ಮಾತ್ರ ನೀಡುತ್ತಿದೆ. ಇದನ್ನು ಹೊರತು ಪಡಿಸಿದರೆ ಯಾವುದೇ ಹಣಕಾಸು ವ್ಯವಹಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ನಡೆದಿಲ್ಲ. ಹೀಗಿರುವಾಗ ಹಣ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಕುರಿತು ಹೇಳಿಕೆಗಳು ಸುಳ್ಳು ಎಂದು ತಿಳಿಸಿದರು.
ನಾನು ಯಾವುದೇ ಪ್ರಮುಖ ನಿರ್ಧಾರವನ್ನು ಕೈಗೊಂಡಿಲ್ಲ, ಸರ್ಕಾರದ ವಿತ್ತ ವಿಭಾಗವನ್ನು ಪರಿಶೀಲಿಸಿದರೆ ಸತ್ಯ ತಿಳಿಯುತ್ತದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದು ಡ್ರಾಮಾ, ಕೇಂದ್ರ ಸರ್ಕಾರದ ಹಣವನ್ನು ಸಿಎಂ ಖಾತೆಯಿಂದ ಮರಳಿ ಕೇಂದ್ರಕ್ಕೆ ಕಳುಹಿಸಲು ಫಡ್ನವಿಸ್ 80 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು ಎಂದು ಸಂಸದ ಅನಂತ್‍ಕುಮಾರ್ ಹೆಗ್ಡೆ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರೊಂದಿಗಿನ ಸಭೆಯಲ್ಲಿ ಹೆಗ್ಡೆ ಮಾತನಾಡಿದ್ದರು.
ವಿಡಿಯೋದಲ್ಲಿ ಹೇಳಿದ್ದೇನು..?
ನಿಮಗೆಲ್ಲ ಗೊತ್ತಿದೆ. ಮಹರಾಷ್ಟ್ರದಲ್ಲಿ ಕೇವಲ 80 ತಾಸಿಗೆ ನಮ್ಮವರು ಮುಖ್ಯಮಂತ್ರಿಯಾದರು. ನಂತರ ಫಡ್ನವಿಸ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಯಾಕೆ ಈ ನಾಟಕ ಮಾಡಬೇಕಿತ್ತು?. ನಮಗೇನೂ ಗೊತ್ತಿರಲಿಲ್ವ. ಬಹುಮತ ಇಲ್ಲ ಎಂದು ಗೊತ್ತಿದ್ದರೂ ಯಾಕೆ ಸಿಎಂ ಆಗಲು ಹೋದ್ರು? ಇಂದು ಸಾಮಾನ್ಯವಾಗಿ ಎಲ್ಲರನ್ನೂ ಕೇಳಬಹುದಾದ ಪ್ರಶ್ನೆಯಾಗಿದೆ.
ಸುಮಾರು 40 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ಸಿಎಂ ಅವರ ನಿಯಂತ್ರಣದಲ್ಲಿತ್ತು. ಕಾಂಗ್ರೆಸ್ಸಿನವರು, ಎನ್‍ಸಿಪಿ ಮತ್ತು ಶಿವಸೇನೆಯವರು ಬಂದರೆ ಖಂಡಿತವಾಗಿ ಆ 40 ಸಾವಿರ ಕೋಟಿ ರೂ. ಹಣಕ್ಕೂ ತುಳಸಿ ನೀರು ಬಿಡುತ್ತಿದ್ದರು. ಅದು ಅಭಿವೃದ್ಧಿಗೆ ಹೋಗುತ್ತಿರಲಿಲ್ಲ. ಯಾಕಂದರೆ ಅದಷ್ಟೂ ಕೇಂದ್ರ ಸರ್ಕಾರದ್ದಾಗಿತ್ತು.
ಈ ಎಲ್ಲಾನು ಮುಂಚೆನೇ ಪ್ಲಾನ್ ಮಾಡಿದ್ದರು. ಹೀಗಾಗಿ ಏನಾದ್ರೂ ಆಗಲಿ ಒಂದು ದೊಡ್ಡ ನಾಟಕ ಆದರೂ ಮಾಡಲೇಬೇಕು ಅಂತ ತೀರ್ಮಾನವಾಯಿತು. ಅದಕ್ಕೋಸ್ಕರ ಸ್ವಲ್ಪ ಮಟ್ಟಿಗೆ ಹೊಂದಾಣಿಕೆ ಮಾಡಿಕೊಂಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣವಚನ ಮಾಡಿ 15 ಗಂಟೆಯೊಳಗಡೆ ಅದಷ್ಟೂ ಗಣವನ್ನು ಎಲ್ಲೆಲ್ಲಿ ತಲುಪಿಸಬೇಕಿತ್ತೋ ಅಲ್ಲಲ್ಲಿ ತಪಿಸುವ ಮೂಲಕ ವ್ಯವಸ್ಥಿತವಾಗಿ ಅದನ್ನು ರಕ್ಷಣೆ ಮಾಡುವ ಕೆಲಸವನ್ನು ಫಡ್ನವಿಸ್ ಮಾಡಿದರು.
ಸಂಪೂರ್ಣವಾಗಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವಾಪಸ್ ನೀಡಿದರು. ಇಲ್ಲೇ ಇದ್ದರೆ ಮುಂದಿನ ಮುಖ್ಯಮಂತ್ರಿ ಮುಂದೇನು ಮಾಡಬಹುದೆಂದು ನಿಮಗೆ ಗೊತ್ತಿದೆ ಅಲ್ವ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯ ಖಾತೆಯಲ್ಲಿ 40 ಸಾವಿರ ಕೋಟಿ ರೂಪಾಯಿ ಇತ್ತು. ಈ ದುಡ್ಡನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಖಾತೆಗೆ ವರ್ಗಾ ಮಾಡಬೇಕಿತ್ತು. ಅದಕ್ಕಾಗಿ ನಾಟಕ ಮಾಡಿದರು ಎಂದು ಹೇಳಿದ್ದು, ಸದ್ಯ ಸಂಸದರ ಈ ಹೇಳಿಕೆ ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಫಡ್ನವಿಸ್ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.