ಮುಂಬೈ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಆಸ್ತಿ ಐದು ವರ್ಷದಲ್ಲಿ ಶೇ.100ರಷ್ಟು ಏರಿಕೆ ಆಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲಾತಿಗಳಿಂದ ಮಾಹಿತಿ ಲಭ್ಯವಾಗಿದೆ. ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಸ್ಥಿರ ಮತ್ತು ಚರ ಆಸ್ತಿಯ ಮೌಲ್ಯವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು.
ನಾಗಪುರ ನೈಋತ್ಯ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿರುವ ಫಡ್ನವೀಸ್ ನಾಮಪತ್ರ ಸಲ್ಲಿಸಿದ್ದಾರೆ. 2014ರ ಚುನಾವಣೆ ಸಂದರ್ಭದಲ್ಲಿ ಆಸ್ತಿಯ ಮೌಲ್ಯವನ್ನು ತುಲನೆ ಮಾಡಿದಾಗ ಸದ್ಯದ ಆಸ್ತಿ ಐದು ವರ್ಷದ ಅಂತರದಲ್ಲಿ ಶೇ.100ರಷ್ಟು ಏರಿಕೆಯಾಗಿದೆ.
ಮಾರುಕಟ್ಟೆಯಲ್ಲಿಯ ಬೆಲೆ ಏರಿಕೆಯಿಂದಾಗಿ ಸಹಜವಾಗಿ ಮುಖ್ಯಮಂತ್ರಿಗಳ ಆಸ್ತಿ ಮೌಲ್ಯ ಹೆಚ್ಚಳವಾಗಿದೆ. ಮುಂಬೈ ನಗರದ ಆಸ್ತಿಯ ಮೌಲ್ಯದಲ್ಲಾದ ಏರಿಕೆ ಕಾರಣದಿಂದ ಈ ಬೆಳವಣಿಗೆಯಾಗಿದೆ. 2014ರಲ್ಲಿಯ 1.18 ಕೋಟಿ ರೂ. ಮೌಲ್ಯದ ಆಸ್ತಿಯ ಮೌಲ್ಯ ಇಂದು 3.78 ಕೋಟಿ ರೂ.ಆಗಿದೆ. ಇದೇ ರೀತಿ ಸಿಎಂ ಪತ್ನಿ ಅಮೃತಾರ ಆಸ್ತಿ 2014ರಲ್ಲಿದ್ದ 42.60 ಲಕ್ಷ ಏರಿಕೆ ಕಂಡು 99.3 ಲಕ್ಷದಷ್ಟು ಆಗಿದೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ಸ್ಪಷ್ಟಪಡಿಸಿದೆ.
ಕ್ಯಾಶ್ ಇನ್ ಹ್ಯಾಂಡ್:
2014ರಲ್ಲಿ ಫಡ್ನವೀಸ್ ಅವರ ಕೈಯಲ್ಲಿ 50 ಸಾವಿರ ರೂ. ನಗದು ಹೊಂದಿದ್ದರು. 2019ರಲ್ಲಿ 17,500 ರೂ. ನಗದು ಹೊಂದಿದ್ದಾರೆ. ಪತ್ನಿ ಅಮೃತಾರ ಬಳಿ 2014ರಲ್ಲಿ 12,500 ನಗದು ಇತ್ತು. 2019ರಲ್ಲಿ ನಗದು 20 ಸಾವಿರ ರೂ.ಗಳಿವೆ. ಫಡ್ನವಿಸ್ ಬ್ಯಾಂಕ್ ಖಾತೆಯಲ್ಲಿದ್ದ 1,19,630 ರೂ. 2019ರ ವೇಳೆಗೆ 8,29,665 ರೂ.ಗೆ ಏರಿಕೆ ಕಂಡಿದೆ. ಸಿಎಂ ಆದ ಬಳಿಕ ಫಡ್ನವೀಸ್ ಸಂಬಳ ಮತ್ತು ಭತ್ಯೆಯಿಂದಾಗಿ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಇದೇ ರೀತಿ ಫಡ್ನವೀಸ್ ಅವರ ಪತ್ನಿ ಅಮೃತಾರ ಖಾತೆಯಲ್ಲಿದ್ದ ಮೊತ್ತ 1,00,881 ರೂ.ನಿಂದ 3,37,025 ರೂ.ಗಳಿಗೆ ಏರಿಕೆ ಆಗಿದೆ. ಇದಲ್ಲದೇ ಅಮೃತಾ ವೈಯಕ್ತಿಕವಾಗಿ ಶೇರು ಮಾರುಕಟ್ಟೆಯಲ್ಲಿ ವ್ಯವಹರಿಸುತ್ತಿದ್ದು, ಆ ಆಸ್ತಿಯ ಮೌಲ್ಯ 1.66 ಕೋಟಿ ಯಿಂದ 2.33 ಕೋಟಿ ರೂ. ಏರಿಕೆಯಾಗಿದೆ. ಅಮೃತಾ ಮುಂಬೈನ ಎಕ್ಸಿಸ್ ಬ್ಯಾಂಕ್ ಉಪಾಧ್ಯಕ್ಷೆ ಮತ್ತು ಪಶ್ಚಿಮ ಭಾರತದ ಕಾರ್ಪೋರೇಟ್ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.