Connect with us

Districts

ಅವಸರದಲ್ಲಿ ಭರ್ಜರಿ ಅಭಿವೃದ್ಧಿ – ರಾಯಚೂರಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ತಯಾರಿ ಜೋರು

Published

on

ರಾಯಚೂರು: ಸಿಎಂ ಗ್ರಾಮವಾಸ್ತವ್ಯ ಮಾಡಲಿರುವ ರಾಯಚೂರಿನ ಕರೇಗುಡ್ಡ ಈಗ ಅವಸರದ ಅಭಿವೃದ್ಧಿ ಕಾಣುತ್ತಿದೆ. ಗ್ರಾಮಕ್ಕೆ ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಶರವೇಗದಲ್ಲಿ ಸಿದ್ಧತೆಗಳು ನಡೆಯುತ್ತಿವೆ.

ಜೂನ್ 26ರಂದು ರಾಯಚೂರಿನ ಮಾನ್ವಿಯ ಕರೇಗುಡ್ಡದಲ್ಲಿ ವ್ಯಾಸ್ತವ್ಯ ಹೂಡಲಿರುವ ಹಿನ್ನೆಲೆಯಲ್ಲಿ ಭರ್ಜರಿ ಕಾಮಗಾರಿಗಳು ಆರಂಭವಾಗಿದೆ. ಜನರು ಗೋಳಾಡಿದರೂ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗ್ರಾಮಕ್ಕೆ ಸಿಎಂ ಬರಲಿದ್ದಾರೆ ಎಂದು ಅವಸರದಲ್ಲಿ ಗ್ರಾಮವನ್ನು ಅಭಿವೃದ್ಧಿ ಮಾಡುತ್ತಿದ್ದಾರೆ.

ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಂತೂ ಇತಿಹಾಸದಲ್ಲೇ ಕಾಣದಷ್ಟು ಸುಂದರವಾಗಿದೆ. ಅಚ್ಚುಕಟ್ಟಾದ ಹೈಟೆಕ್ ಶೌಚಾಲಯವೂ ಅಂತಿಮ ಹಂತಕ್ಕೆ ಬಂದಿದೆ. ಯಾರೂ ಕಿವಿಗೆ ಹಾಕಿಕೊಳ್ಳದ ರಸ್ತೆಯ ಸಮಸ್ಯೆಯೂ ತೀರಿದೆ. ವಿದ್ಯುತ್ ಸಮಸ್ಯೆ ಸದ್ಯಕ್ಕೆ ನಿಂತಿದೆ. ಗ್ರಾಮಲ್ಲಿ ಎಂದೂ ಕಾಣದ ಚರಂಡಿ ಕಾಮಗಾರಿಯೂ ಭರದಿಂದ ಸಾಗುತ್ತಿದೆ.

ಗ್ರಾಮದ ನೀರಿನ ಸಮಸ್ಯೆ ಬಗೆಹರಿಸಲು ಮೂರು ಬೋರ್‍ವೆಲ್ ಗಳನ್ನು ಕೊರೆಯಲಾಗಿದೆ. ಇದರಲ್ಲಿ ಎರಡು ಬೋರ್‍ವೆಲ್‍ನಲ್ಲಿ ಉತ್ತಮ ನೀರು ಸಿಕ್ಕಿದೆ. ಗ್ರಾಮದಲ್ಲಿ ಸಿಸಿ ರಸ್ತೆ, ಗ್ರಾಮದ ಹೊರಗಡೆ ಡಾಂಬರ್ ರಸ್ತೆಯ ಕಾಮಗಾರಿ ನಡೆದಿದೆ. ಸಿಎಂ ಆಗಮನದ ಹಿನ್ನೆಲೆಯಲ್ಲಿ ಕೆಲವೇ ದಿನಗಳಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿ ಗ್ರಾಮದ ಚಿತ್ರಣವನ್ನೇ ಇಲ್ಲಿ ಜನಪ್ರತಿನಿಧಿಗಳು ಬದಲಿಸಿದ್ದಾರೆ.

ಸುಮಾರು 22 ಎಕರೆ ಪ್ರದೇಶದಲ್ಲಿ ಮುಖ್ಯಮಂತ್ರಿ ಜನಸಂಪರ್ಕ ಸಭೆಗೆ ಹಾಗೂ ವೇದಿಕೆಗೆ ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ. ಸುತ್ತಮುತ್ತಲ ಗ್ರಾಮಗಳಿಂದ ಅಹವಾಲುಗಳನ್ನ ಹಿಡಿದು ಬರುವ ಜನರಿಗಾಗಿ ಪ್ರತ್ಯೇಕ ವ್ಯವಸ್ಥೆಗಳನ್ನ ಮಾಡಲಾಗುತ್ತಿದೆ. ಸಿಎಂ ವಾಸ್ತವ್ಯ ಮಾಡಲಿರುವ ಗ್ರಾಮ ಶಾಲೆಯಂತೂ ಮಧುವಣಗಿತ್ತಿಯಂತೆ ಅಲಂಕಾರಗೊಳ್ಳುತ್ತಿದೆ. ಸಿಎಂ ಬರುವ ನೆಪದಲ್ಲಾದರೂ ಗ್ರಾಮ ಅವಸರದ ಅಭಿವೃದ್ಧಿ ಕಾಣುತ್ತಿದೆಯಲ್ಲ ಎಂದು ಗ್ರಾಮಸ್ಥರು ಖುಷಿಪಟ್ಟಿದ್ದಾರೆ.

ಬಿಜೆಪಿ ಪಾದಯಾತ್ರೆ
ಸಿಎಂ ವಾಸ್ತವ್ಯಕ್ಕೆ ಸಕಲ ಸಿದ್ದತೆಗಳು ಭರದಿಂದ ಸಾಗಿರುವುದು ನಿಜ. ಆದರೆ ಜ್ವಲಂತ ಸಮಸ್ಯೆಗಳ ಗೂಡಾಗಿರುವ ರಾಯಚೂರಿನಲ್ಲಿ ಮುಖ್ಯಮಂತ್ರಿಗಳಿಗೆ ಹೋರಾಟ, ಪ್ರತಿಭಟನೆಗಳ ಬಿಸಿಯೂ ಜೋರಾಗಿ ತಟ್ಟುವ ಸಾಧ್ಯತೆಯಿದೆ. ರಾಯಚೂರು ಜಿಲ್ಲೆ ಮಾನವಿ ತಾಲೂಕಿನ ಕರೇಗುಡ್ಡದಲ್ಲಿ ಗ್ರಾಮ ವಾಸ್ತವ್ಯ ಮಾಡುವ ಹಿನ್ನೆಲೆ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಪಾದಯಾತ್ರೆ ಆರಂಭಿಸಿದ್ದಾರೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ, ಕನಿಷ್ಠ ಈಗಲಾದರೂ ಸಿಎಂ ಜಿಲ್ಲೆಯ ಕಡಗೆ ನೋಡಲಿ ಅಂತ ಪಾದಯಾತ್ರೆ ಕೈಗೊಂಡಿದ್ದಾರೆ.

ಸಿಎಂ ಮಲತಾಯಿ ಧೋರಣೆ ತೋರಿಸುತ್ತಿದ್ದು ಹೈಕ ಭಾಗಕ್ಕೆ ಅನುದಾನ ನೀಡದೇ ತಾರತಮ್ಯ ಮಾಡುತ್ತಿದ್ದಾರೆ ಅಂತ ಶಿವನಗೌಡ ನಾಯಕ್ ಆರೋಪಿಸಿದ್ದಾರೆ. ದೇವದುರ್ಗದ ಗೂಗಲ್ ಗ್ರಾಮದಿಂದ ಪಾದಯಾತ್ರೆ ಆರಂಭಿಸಿ ಜೂನ್ 26 ರಂದು ಕರೇಗುಡ್ಡ ತಲುಪಲಿದ್ದಾರೆ.

ನೂರಾರು ಜನರೊಂದಿಗೆ ಪಾದಯಾತ್ರೆಗೆ ಮುಂದಾಗಿರುವ ಶಿವನಗೌಡ ತಮ್ಮ ಕ್ಷೇತ್ರದ ಅರ್ಧಕ್ಕೆ ನಿಂತಿರುವ ಕಾಮಗಾರಿಗಳು ಪುನರಾರಂಭವಾಗಬೇಕು, ಎನ್ ಆರ್ ಬಿಸಿ ಕಾಲುವೆ ಆಧುನಿಕರಣಗೊಳ್ಳಬೇಕು ಅನ್ನೋ ಬೇಡಿಕೆ ಸೇರಿ ನಾನಾ ಸಮಸ್ಯೆಗೆ ಸಿಎಂ ಪರಿಹಾರ ಒದಗಿಸಬೇಕು ಅಂತ ಆಗ್ರಹಿಸಿದ್ದಾರೆ. ಸುಮಾರು 86 ಕಿ.ಮೀ ಪಾದಯಾತ್ರೆ ಮಾಡಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಮನವಿಯನ್ನು ಸಲ್ಲಿಸಲಿದ್ದಾರೆ.

Click to comment

Leave a Reply

Your email address will not be published. Required fields are marked *