ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಇಂದು ಬೆಂಗಳೂರು ಹೊರವಲಯ ಹೆಗ್ಗನಹಳ್ಳಿಗೆ ಭೇಟಿ ನೀಡಿ ಹಸಿದವರಿಗೆ ಹೋಳಿಗೆ, ಪಲಾವ್, ಬಜ್ಜಿ ಬಡಿಸಿ ಖುಷಿ ಪಟ್ಟಿದ್ದಾರೆ.
ಕೊರೊನಾ ಲಾಕ್‍ಡೌನ್ ಹಿನ್ನೆಲೆ ಸ್ಥಳೀಯ ಜೆಡಿಎಸ್ ಮುಖಂಡ ಗಂಗಾಧರ್ ನೇತೃತ್ವದಲ್ಲಿ 4 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸ್ವತಃ ದೇವೇಗೌಡರೇ ಜನರಿಗೆ ಹೋಳಿಗೆ, ಪಲಾವ್, ಬಜ್ಜಿ ಬಡಿಸಿದರು. ಆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಜನರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು.
ಈ ಬಗ್ಗೆ ಮಾತನಾಡಿದ ಎಚ್‍ಡಿಡಿ, ಈ ಭಾಗದಲ್ಲಿ ಹೆಚ್ಚು ಕೂಲಿ ಕಾರ್ಮಿಕರು ಹಾಗೂ ಬಡ ವರ್ಗದ ಜನರು ಇದ್ದಾರೆ. ಹೀಗಾಗಿ ಲಾಕ್‍ಡೌನ್ ಸಮಯದಲ್ಲಿ ಜನರಿಗೆ ಕೆಲಸವಿಲ್ಲದೆ ಕಷ್ಟದಲ್ಲಿದ್ದಾರೆ. ಈ ಜನರಿಗೆ ನಮ್ಮ ಗಂಗಾಧರ್ ಹಾಗೂ ದಾಸರಹಳ್ಳಿಯ ಶಾಸಕ ಮಂಜುನಾಥ್ ಸಹಾಯ ಮಾಡಿ ಜನರ ಹಸಿವನ್ನ ನೀಗಿಸುವ ಕೆಲಸ ಮಾಡುತ್ತಿದ್ದಾರೆ, ಇದು ಬಹಳ ಸಂತಸ ತಂದಿದೆ ಎಂದು ಹೇಳಿದರು.
ಬಳಿಕ ಕಾರ್ಮಿಕರ ಸ್ಥಳಾಂತರ ವಿಚಾರದಲ್ಲಿ ಶನಿವಾರ ರಾಜ್ಯ ಸರ್ಕಾರ ತಪ್ಪು ಮಾಡಿದೆ. ರೈಲಿನಲ್ಲಿ 1,200 ಕಾರ್ಮಿಕರನ್ನು ಕಳುಹಿಸಿದ್ದಾರೆ. ಕಾರ್ಮಿಕರು ಊಟ, ವಸತಿ ಇಲ್ಲದೆ ಹಸಿವಿನಿಂದ ಬಳಲಿದ್ದಾರೆ. ಜನರ ಪ್ರತಿಭಟನೆ ಹಿನ್ನೆಲೆ ಇಂದು ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿದೆ. ಬಹುಶಃ ಇನ್ನೂ ಹೆಚ್ಚಿನ ರೈಲಿನ ವ್ಯವಸ್ಥೆ ಮಾಡಬಹುದು ಎಂದರು. ಇದೇ ವೇಳೆ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಹೆಚ್ಚು ಪ್ರತಿಕ್ರಿಯಿಸದೆ, ಅವರು ಯಾಕೆ ಪ್ರತಿಭಟನೆ ಮಾಡಬೇಕಿತ್ತು ನನಗೆ ಗೊತ್ತಿಲ್ಲ ಎಂದು ಎಚ್‍ಡಿಡಿ ಸುಮ್ಮನಾದರು.