ತುಮಕೂರು: ಕಾಂಗ್ರೆಸ್- ಜೆಡಿಎಸ್ ಮೈತ್ರಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಲೋಕಸಭಾ ಚುನಾವಣೆಗೆ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲು ಬಂದಿದ್ದಾರೆ. ಯಾಕೆ ಅವರಿಗೆ ಹಾಸನದಲ್ಲಿ ಜಾಗ ಇರಲಿಲ್ವಾ? ಇಲ್ಲಿಗೆ ಬಂದು ಪಾಪ ಸಜ್ಜನ ವ್ಯಕ್ತಿ ಮುದ್ದಹನುಮೇಗೌಡರನ್ನು ರಾಜಕೀಯವಾಗಿ ಸಾಯಿಸಿದರು ಎಂದು ಕಾಂಗ್ರೆಸ್ ನಾಯಕ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು, ಮುದ್ದಹನುಮೇಗೌಡರಿಗೆ ಮೋಸ ಆಗಿದೆ. ಲೋಕಸಭಾ ಚುನಾವಣೆಗೆ ಪಕ್ಷದಲ್ಲಿ 44ರಲ್ಲಿ 43 ಜನರಿಗೆ ಟಿಕೆಟ್ ಕೊಟ್ಟಿದ್ದಾರೆ ಆದ್ರೆ ಮುದ್ದಹನುಮೇಗೌಡರಿಗೆ ಮಾತ್ರ ಕೊಡಲಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ಮೈತ್ರಿ ಧರ್ಮ ಅನ್ನುತ್ತಾರೆ. ಮೈತ್ರಿಯಲ್ಲಿ ದೇವೇಗೌಡರು ತುಮಕೂರಿಗೆ ಬಂದಿದ್ದಾರೆ. ಯಾಕೆ ಹಾಸನದಲ್ಲಿ ಜಾಗ ಇರಲಿಲ್ವಾ? ದೇವೇಗೌಡರು ಇಲ್ಲಿ ಸ್ಪರ್ಧೆಗಿಳಿಯುವ ಮೂಲಕ ಪಾಪ ಸಜ್ಜನ ವ್ಯಕ್ತಿ ಮುದ್ದಹನುಮೇಗೌಡರನ್ನು ರಾಜಕೀಯವಾಗಿ ಸಾಯಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವೇಗೌಡರು ದೇಶಕ್ಕಾಗಿ ದುಡಿದಿದ್ದಾರೆ. ಆದರೆ ಹೇಮಾವತಿ ನೀರು ಬಿಟ್ಟಿಲ್ಲ. ನಾಡಿದ್ದು ನಡೆಯುವ ಸಿದ್ದರಾಮಯ್ಯರ ನೇತೃತ್ವದ ಸಭೆಗೆ ನಾನೂ ಮುದ್ದಹನುಮೇಗೌಡ ಹೋಗುತ್ತೀವಿ ಎಂದರು. ಬಳಿಕ ನಾನು ಪರಮೇಶ್ವರ್ ಬೆನ್ನಿಗೆ ನಿಂತು ಕಳೆದ ಬಾರಿ ಗೆಲ್ಲಿಸಿಕೊಂಡು ಬಂದಿದ್ದೇನೆ. ನಾನೂ ಸೋತರೂ ಪರವಾಗಿಲ್ಲ ಎಂದು ಅವರಿಗಾಗಿ ದುಡಿದೆ ಎಂದರು.