ಬೆಂಗಳೂರು: ಮೊಮ್ಮಗನಿಗೆ ಹಾಸನ ಕ್ಷೇತ್ರ ಬಿಟ್ಟುಕೊಟ್ಟು ತಮ್ಮ ಸ್ಪರ್ಧೆಗೆ ಕ್ಷೇತ್ರ ಹುಡುಕಾಟದಲ್ಲಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಕೊನೆಗೂ ತುಮಕೂರಿನಿಂದ ಅಖಾಡಕ್ಕಿಳಿಯೋದು ಫಿಕ್ಸ್ ಆಗಿದ್ದು, ಈ ಕುರಿತು ದೇವೇಗೌಡರು ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ಕಲ್ಪವೃಕ್ಷ ನಾಡಿನಿಂದಲೇ ಗೌಡರ ಕಣ ರೆಡಿಯಾಗಲಿದೆ. ಅಂದಹಾಗೆ ಎಲ್ಲಿಂದ ಸ್ಪರ್ಧೆ ಮಾಡಬೇಕು ಅಂತ ಗೊಂದಲದಲ್ಲಿದ್ದ ಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿತಾರೆ ಎನ್ನಲಾಗಿತ್ತು. ಆದರೆ ಬೆಂಗಳೂರು ಉತ್ತರಕ್ಕಿಂತ ತುಮಕೂರು ಸೇಫ್ ಅನ್ನಿಸಿದ ಕಾರಣಕ್ಕೆ ತುಮಕೂರಿನಿಂದ ಸ್ಪರ್ಧೆಗಿಳಿಯಲು ದೇವೇಗೌಡರು ಸಜ್ಜಾಗಿದ್ದಾರೆ. ಇಂದು ತುಮಕೂರು ಸ್ಪರ್ಧೆ ಬಗ್ಗೆ ದೇವೇಗೌಡರು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.
Advertisement
Advertisement
ದೇವೇಗೌಡರು ಕಿರಿಯ ಮೊಮ್ಮಗ ನಿಖಿಲ್ ಕುಮಾರಸ್ವಾಮಿಗೆ ಮಂಡ್ಯ ಹಾಗೂ ಹಿರಿಯ ಮೊಮ್ಮಗ ಪ್ರಜ್ವಲ್ ರೇವಣ್ಣನಿಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಇತ್ತ ದೇವೇಗೌಡರು ಮೈಸೂರಿನಿಂದ ನಿಲ್ಲಬೇಕು ಎಂದು ಇಚ್ಛಿಸಿದ್ದರು. ಆದರೆ ಗೌಡರು ಮೈಸೂರು ಕೇಳಿದ್ದರೂ ಕಾಂಗ್ರೆಸ್ ಬಿಟ್ಟು ಕೊಟ್ಟಿಲ್ಲ. ಹೀಗಾಗಿ ಬೆಂಗಳೂರು ಉತ್ತರ ಮತ್ತು ತುಮಕೂರು ಈ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ಖಚಿತವಾಗಿತ್ತು.
Advertisement
Advertisement
ಈಗ ಬೆಂಗಳೂರಿಗಿಂತ ತುಮಕೂರು ಸೇಫ್ ಎಂದು ದೇವೇಗೌಡರು ನಿರ್ಧಾರ ಮಾಡಿದ್ದಾರೆ. ಯಾಕೆಂದರೆ ತುಮಕೂರಿನಲ್ಲಿ ಜೆಡಿಎಸ್‍ಗೆ ನೆಲೆ ಇದ್ದು, ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಜೊತೆಗೆ ಮೈತ್ರಿಪಕ್ಷದ ನಾಯಕರು ಕೂಡ ಗಣನೀಯ ಪ್ರಮಾಣದಲ್ಲಿ ಇದ್ದಾರೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಸುಲಭವಾಗಿ ಗೆಲ್ಲಬಹುದು ಎಂದುಕೊಂಡಿದ್ದಾರೆ. ಕೆಲವರು ದೇವೇಗೌಡರು ತುಮಕೂರಿನಲ್ಲಿ ಸ್ಪರ್ಧೆ ಮಾಡಿದರೆ ಸೋಲಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ರಾಜ್ಯ ಮಟ್ಟದಲ್ಲಿ ದೋಸ್ತಿ ಸರ್ಕಾರದ ಮೂಲಕ ಗೆಲ್ಲಬಹುದು ಎಂಬುದು ದೇವೇಗೌಡರ ಲೆಕ್ಕಚಾರವಾಗಿದೆ.