ತುಮಕೂರು: ಮೊಮ್ಮಗನಿಗಾಗಿ ಕ್ಷೇತ್ರ ತ್ಯಾಗ ಮಾಡಿರುವ ದೇವೇಗೌಡರಿಗೆ ಈ ಬಾರಿ ಅಗ್ನಿ ಪರೀಕ್ಷೆ ಎದುರಾದಂತೆ ಕಾಣುತ್ತಿದೆ. ಅಳೆದೂ ತೂಗಿ ತುಮಕೂರು ಕ್ಷೇತ್ರ ಆರಿಸಿಕೊಂಡಿರೋ ಗೌಡರಿಗೆ ಹಲವು ಕಂಟಕಗಳು ಎದುರಾಗಿವೆ. ಒಂದೆಡೆ ಗಂಗೆಯ ಕಂಟಕವಿದ್ದರೆ, ಇನ್ನೊಂದೆಡೆ ದೋಸ್ತಿ ಪಕ್ಷದವರೇ ಸೆಡ್ಡು ಹೊಡೆಯುತ್ತಿದ್ದಾರೆ. ಹೀಗಾಗಿ ಗೌಡರಿಗೆ ತುಮಕೂರು ಕ್ಷೇತ್ರದಿಂದ ಗೆಲುವು ಸಾಧಿಸುವುದು ಸುಲಭವಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.
ಹೌದು, ದೇವೇಗೌಡರು ತುಮಕೂರು ಕ್ಷೇತ್ರವನ್ನು ಆಯ್ಕೆ ಮಾಡಿದ ಬಳಿಕ ಹಾಸನದ ಗೊರೂರು ಜಲಾಶಯದಿಂದ ತುಮಕೂರಿಗೆ ನೀರು ಹರಿಸುವ ವಿಚಾರದಲ್ಲಿ ಗೌಡರ ಕುಟುಂಬ ಅಡ್ಡಗಾಲಗಿದೆ ಎನ್ನುವ ವಿಷಯ ಈಗ ಚರ್ಚೆಗೆ ಬಂದಿದೆ. ಹೀಗಾಗಿ ಜನ ‘ದೇವೇಗೌಡರು ಅಂದರೆ ತುಮಕೂರು ವಿರೋಧಿಗಳು’ ಎನ್ನುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ನಡುವೆ ಜಿಲ್ಲೆಯಲ್ಲಿ ಮೂರು ಶಾಸಕರನ್ನು ಹೊಂದಿರುವ ಜೆಡಿಎಸ್ ಬಲ ನೆಚ್ಚಿಕೊಂಡೇ ದೇವೇಗೌಡರು ಕಣಕ್ಕಿಳಿದಿದ್ದಾರೆ ನಿಜ. ಆದರೆ ಕ್ಷೇತ್ರದಲ್ಲಿ ದೋಸ್ತಿ ಪಕ್ಷ ಕಾಂಗ್ರೆಸ್ ಬೆಂಬಲವಿಲ್ಲದೆ ಗೆಲುವು ಸಾಧಿಸುವುದು ಕಷ್ಟವಿದೆ. ಎದುರಾಳಿ ಬಿಜೆಪಿ ನಾಲ್ವರು ಶಾಸಕರನ್ನು ಹೊಂದಿದ್ದು, ಕ್ಷೇತ್ರದ ಮೇಲೆ ಬಲವಾದ ಹಿಡಿತ ಹೊಂದಿದೆ. ಹೀಗಾಗಿ ಬಿಜೆಪಿ ಮಣಿಸಬೇಕಾದರೆ ಜೆಡಿಎಸ್‍ಗೆ ಕಾಂಗ್ರೆಸ್ ಬೆಂಬಲ ಬೇಕಾಗಿದೆ. ಆದ್ರೆ ಸದ್ಯದ ಮಟ್ಟಿಗೆ ಆ ಯಾವ ಲಕ್ಷಣಗಳು ಕಾಣಸಿಗುತ್ತಿಲ್ಲ. ಇನ್ನೊಂದೆಡೆ ಹಾಲಿ ಸಂಸದ ಮುದ್ದುಹನುಮೇಗೌಡ ಗೌಡರ ವಿರುದ್ಧ ಸಿಟ್ಟಾಗಿದ್ದು, ಸ್ಪರ್ಧೆ ಮಾಡೋದಾಗಿ ಗುಡುಗಿದ್ದಾರೆ.
ಇದಕ್ಕೆ ಕೈ ಮಾಜಿ ಶಾಸಕ ಕೆ.ಎನ್ ರಾಜಣ್ಣ ಕೂಡ ಸಾಥ್ ನೀಡಿದ್ದು ದೊಡ್ಡ ಮೀನು ಸಣ್ಣ ಮೀನನ್ನ ನುಂಗಲು ಬರುತ್ತಿದೆ ಅಂತ ಗೌಡರ ವಿರುದ್ಧ ಕಿಡಿ ಕಾರಿದ್ದಾರೆ. ಇದೆಲ್ಲದರ ನಡುವೆ ಜಾತಿ ಲೆಕ್ಕಾಚಾರ ಕೂಡ ದೇವೇಗೌಡರ ನಿದ್ದೆಗೆಡಿಸಿದೆ.
ಜಾತಿ ಲೆಕ್ಕಾಚಾರ ಹೇಗಿದೆ?
ತುಮಕೂರು ಕ್ಷೇತ್ರದಲ್ಲಿ ವೀರಶೈವರು ಪ್ರಬಲರಾಗಿದ್ದು 3.5 ಲಕ್ಷ ಜನಸಂಖ್ಯೆ ಹೊಂದಿದ್ದಾರೆ. ಒಕ್ಕಲಿಗರು 3.20 ಲಕ್ಷ, ದಲಿತರು 2.80 ಲಕ್ಷ, ಮುಸ್ಲಿಂ 1.8 ಲಕ್ಷ, ಕುರುಬರು 1.7 ಲಕ್ಷ, ಯಾದವರು 90 ಸಾವಿರ ಹಾಗೂ ತಿಗಳರು 80 ಸಾವಿರ ಮತದಾರರಿದ್ದಾರೆ.
ಒಂದು ವೇಳೆ ಮುದ್ದುಹನುಮೇಗೌಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಒಕ್ಕಲಿಗರ ಮತಗಳು ವಿಭಜನೆ ಆಗಲಿವೆ. ಇದು ದೇವೇಗೌಡರಿಗೆ ಹೊಡೆತ ಕೊಡಲಿದೆ. ಜೊತೆಗೆ ಜಿಲ್ಲಾ ಕಾಂಗ್ರೆಸ್ ನಾಯಕರಾದ ಮುದ್ದುಹನುಮೇಗೌಡರ ಜೊತೆ ನಿಂತರೆ ಹಿಂದುಳಿದ, ದಲಿತ ಮತಗಳು ಸಹ ವಿಭಜನೆ ಆಗಲಿವೆ. ಇದು ಸಹ ಗೌಡರು ಭಯ ಬೀಳಲು ಕಾರಣವಾಗಿದೆ. ಹಾಸನ ಬಿಟ್ಟು ತುಮಕೂರಿಗೆ ವಲಸೆ ಬಂದಿರೋ ದೇವೇಗೌಡರಿಗೆ ದೊಡ್ಡ ಅಗ್ನಿ ಪರೀಕ್ಷೆ ಎದುರಾಗಿದೆ ಅನ್ನೋ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.