ಹಾಸನ: ಅಜ್ಜ ದೇವೇಗೌಡರು ತ್ಯಾಗ ಮಾಡಿದ ಕ್ಷೇತ್ರದಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಗೆದ್ದಿದ್ದಾರೆ. ಪ್ರಜ್ವಲ್ ರೇವಣ್ಣ 1,42,123 ಮತಗಳ ಅಂತರದಿಂದ ಬಿಜೆಪಿಯ ಮಂಜು ಅವರನ್ನು ಸೋಲಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರು 6,75,512 ಮತಗಳನ್ನು ಪಡೆದಿದ್ದರೆ, ಎ.ಮಂಜು 5,33,389 ಮತಗಳನ್ನು ಗಳಿಸಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನ ಸಭಾ ಕ್ಷೇತ್ರಗಳಿವೆ. 16,29,587 ಮತದಾರರಿದ್ದು, ಅವರಲ್ಲಿ 12,73,219 ಮತದಾನ ಮಾಡಿದ್ದರು.
Advertisement
Advertisement
ಗೆಲುವಿನ ಹಾದಿ:
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಸಿ.ಎನ್ ಬಾಲಕೃಷ್ಟ ಮಾಜಿ ಪ್ರದಾನಿ ದೇವೇಗೌಡರ ಸಂಬಂಧಿ ಆಗಿದ್ದು, ಸಾಂಪ್ರದಾಯಿಕ ಜೆಡಿಎಸ್ ಮತಗಳ ಜೊತೆಗೆ ಪ್ರಮುಖ ವಕ್ಕಲಿಗ ಸಮುದಾಯ ಮತಗಳು ಕೂಡ ಜೆಡಿಎಸ್ ಪಾಲಾಗಿವೆ. ಹೀಗಾಗಿ ಒಂದು ಲಕ್ಷಕ್ಕಿಂತಲೂ ಹೆಚ್ಚು ಮತಗಳು ಮೈತ್ರಿ ಅಭ್ಯರ್ಥಿ ಪರ ಬಿದ್ದಿವೆ.
Advertisement
ಜೆಡಿಎಸ್‍ನಿಂದ ಶಾಸಕರಾಗಿ ಸತತವಾಗಿ ನಾಲ್ಕನೆ ಬಾರಿಗೆ ಆಯ್ಕೆಯಾಗಿರುವ ಹೆಚ್.ಕೆ.ಕುಮಾರ್ ಸ್ವಾಮಿ ಸಕಲೇಶಪುರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆನೆ ಹಾವಳಿ ಸಮಸ್ಯೆಗೆ ಮುಖ್ಯಮಂತ್ರಿಯವರಿಂದ ವಿಶೇಷ ಅನುದಾನ ಬಿಡುಗಡೆ ಮಾಡಿಸಿದ್ದರು. ಮೀಸಲು ಕ್ಷೇತ್ರವಾದ ಸಕಲೇಶಪುರ ಸಾಂಪ್ರದಾಯಿಕವಾಗಿ ಬಿಜೆಪಿ ಹೊರತುಪಡಿಸಿ ಪಕ್ಷಕ್ಕೆ ಮತಗಳನ್ನು ಚಲಾಯಿಸಲಾಗಿದೆ.
Advertisement
ಹೊಳೇನರಸೀಪುರ ಜೆಡಿಎಸ್‍ನ ತಾಯಿ ಬೇರು ಇರುವ ವಿಧಾನ ಸಭಾ ಕ್ಷೇತ್ರವಾಗಿದ್ದು, ಮಾಜಿ ಪ್ರದಾನಿ ದೇವೇಗೌಡರಿಗೆ ಜನ್ಮ ನೀಡಿದ ಪ್ರಮುಖ ವಿಧಾನ ಸಭಾ ಕ್ಷೇತ್ರವಾಗಿದೆ. ಜೊತೆಗೆ ಸಚಿವ ಹೆಚ್.ಡಿ.ರೇವಣ್ಣನವರ ಸ್ವಕ್ಷೇತ್ರ. ಇಲ್ಲಿ ಜೆಡಿಎಸ್ ವೋಟನ್ನು ತಡೆಯುವರು ಯಾರು ಇರಲಿಲ್ಲ. ಇನ್ನೂ ಬೇಲೂರು ವಿಧಾನ ಸಭಾ ಕ್ಷೇತ್ರದಲ್ಲಿ ಈ ಭಾರಿ ಗೆಲುವು ಕಂಡಿರುವ ಜೆಡಿಎಸ್‍ನ ಲಿಂಗೇಶ್ ಜಿಲ್ಲೆಯಲ್ಲಿ ಏಕೈಕ ಲಿಂಗಾಯಿತ ಶಾಸಕ. ಆದ್ದರಿಂದ ಲಿಂಗಾಯಿತ ಮತದಾರರು ಜೆಡಿಎಸ್ ಪಕ್ಷದ ಪರ ಇದ್ದರು. ಜೊತೆಗೆ ಈ ಕ್ಷೇತ್ರದಲ್ಲಿ ಹಲವಾರು ದಶಕಗಳಿಂದ ದೇವೇಗೌಡರ ಪ್ರಭಾವ ಕೂಡ ಇದೆ.
ಅರಕಲಗೂಡು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದವರೇ ಆದ ಹಿರಿಯ ನಾಯಕ ಎ.ಟಿ ರಾಮಸ್ವಾಮಿಯವರು ಪಕ್ಷದ ಪರ ಪ್ರಚಾರ ಮಾಡಿದ್ದರು. ಕ್ಷೇತ್ರದಲ್ಲಿರುವ ಕುರುಬ ಸಮುದಾಯದ ಮತಗಳು ಸಹ ಸಿದ್ದರಾಮಯ್ಯನವರ ಪ್ರವಾಸದ ಹಿನ್ನೆಲೆಯಲ್ಲಿ ಜೆಡಿಎಸ್ ಪಾಲಾಗಿದೆ. ಕಡೂರು ವಿಧಾನ ಸಭಾ ಕ್ಷೇತ್ರದಲ್ಲಿ ದೇವೇಗೌಡರಿಗೆ ಸಾಕಷ್ಟು ಮತದಾರರಿದ್ದಾರೆ. ಕಳೆದ ಬಾರಿ ಇಲ್ಲಿ ದೇವೇಗೌಡರಿಗೆ ಮುನ್ನಡೆ ನೀಡಿದ್ದರು. ಈ ಭಾರಿಯೂ ಮತದಾರರು ಅವರ ಮೊಮ್ಮಗ ಪ್ರಜ್ವಲ್‍ಗೆ ಮುನ್ನಡೆ ನೀಡಿದ್ದಾರೆ.
ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ಮಾಜಿ ಶಾಸಕ ಹೆಚ್.ಎಸ್ ಪ್ರಕಾಶ್ ನಿಧನರಾಗಿದ್ದು. ಮತದಾರ ರ ಅನುಕಂಪ ಮತ್ತೆ ಜೆಡಿಎಸ್‍ನ ಕಡೆಗೆ ಒಲವಿತ್ತು. ಜೆಡಿಎಸ್ ಕಾಂಗ್ರೆಸ್‍ನ ಚುನಾವಣಾ ಪೂರ್ವ ಹೊಂದಾಣಿಕೆ ಹಿನ್ನೆಲೆಯಲ್ಲಿ ಬಿಜೆಪಿಗಿಂತಲೂ ಹೆಚ್ಚಿನ ಮತಗಳು ಮೈತ್ರಿ ಅಭ್ಯರ್ಥಿ ಪಾಲಾಗಿವೆ.