ಗುಜರಾತ್ ಪ್ರವಾಸದಲ್ಲಿ ಎಚ್‍ಡಿಡಿ – ಏಕತಾ ಪ್ರತಿಮೆಗೆ ಭೇಟಿ

Public TV
2 Min Read
Deve Gowda

ಗಾಂಧಿನಗರ: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಉಕ್ಕಿನ ಪ್ರತಿಮೆ ಇರುವ ಸ್ಥಳಕ್ಕೆ ಭಾರತದ ಮಾಜಿ ಪ್ರಧಾನಿ ದೇವೇಗೌಡ ಅವರು ಭೇಟಿ ನೀಡಿದ್ದಾರೆ.

ಗುಜರಾತ್‍ನ ಅಹಮದಾಬಾದ್ ನಿಂದ 200 ಕಿ.ಮೀ ದೂರದಲ್ಲಿರುವ ಸರ್ದಾರ್ ಸರೋವರದ ಅಣೆಕಟ್ಟಿನ ಬಳಿ ಇರುವ ಸರ್ದಾರ್ ವಲ್ಲಭಬಾಯಿ ಅವರ 182 ಮೀಟರ್ ಉದ್ದದ ಏಕತಾ ಪ್ರತಿಮೆಯನ್ನು ದೇವೇಗೌಡರು ವೀಕ್ಷಿಸಿದ್ದಾರೆ.

Deve Gowda 2

ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಗುಜರಾತ್‍ಗೆ ವಿಮಾನ ಮೂಲಕ ಪ್ರಯಾಣ ಬೆಳೆಸಿರುವ ಗೌಡರು, ಏಕತಾ ಪ್ರತಿಮೆಯ ಜೊತೆಗೆ ಗುಜರಾತ್ ನಲ್ಲಿರುವ ಇತರ ಪ್ರದೇಶಗಳಿಗೂ ಭೇಟಿ ನೀಡಲಿದ್ದಾರೆ. ಇದರ ಜೊತೆಗೆ ಗರುಡೇಶ್ವರ ದೇವಸ್ಥಾನ, ರಂಗ್ ಅವದೂತ್ ಮಹಾರಾಜ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ.

ದೇಶದ ಏಕತೆಗೆ ಶ್ರಮಿಸಿದ, ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಉದ್ದದ ಉಕ್ಕಿನ ಪ್ರತಿಮೆ 2018 ಅಕ್ಟೋಬರ್ 31 ಅನಾವರಣ ಮಾಡಲಾಯಿತು. ಈ ಮೂಲಕ ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಟೇಲರ `ಏಕತಾ ಪ್ರತಿಮೆ’ ಪಾತ್ರವಾಗಿದೆ. ವಲ್ಲಭಭಾಯ್ ಅವರ ಪೂರ್ಣ ಪ್ರತಿಮೆ ಇದಾಗಿದ್ದು ಧೋತಿ ಮತ್ತು ಜುಬ್ಬ ತೊಟ್ಟ ಸ್ಯಾಂಡಲ್ ಚಪ್ಪಲಿ ಧರಿಸಿರುವ ಪಟೇಲ್ ರ ಸರಳ ವ್ಯಕ್ತಿತ್ವವನ್ನು ನಾವು ಪ್ರತಿಮೆಯಲ್ಲಿ ಕಾಣಬಹುದು.

Deve Gowda3

ಈ ಯೋಜನೆ ಆರಂಭಗೊಂಡಿದ್ದು ಹೇಗೆ?
2010 ರಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗುಜರಾತ್ ರಾಜ್ಯವನ್ನು ಅಭಿವೃದ್ಧಿ ಪಡಿಸಲು ಈ ಯೋಜನೆಯನ್ನು ಘೋಷಿಸಿದ್ದರು. 2013 ರಲ್ಲಿ ಯೋಜನೆ ನಿರ್ಮಾಣ ಶಂಕುಸ್ಥಾಪನೆ ನಡೆಸಿ ಕಾಮಗಾರಿಯನ್ನು ಆರಂಭಿಸಲಾಯಿತು. 2015 ರಲ್ಲಿ ಹೈಡ್ರಲಾಜಿಕಲ್ ಸಮೀಕ್ಷೆ, ಸುರಂಗ ಪರೀಕ್ಷೆ, ನೆರಳು ಬೆಳಕಿನ ಅಧ್ಯಯನಗಳನ್ನು ಪೂರ್ಣಗೊಳಿಸಿದ ಎಲ್ ಆಂಡ್ ಟಿ ಸಂಸ್ಥೆಯೂ ಈ ಬೃಹತ್ ಯೋಜನೆ ಉಸ್ತುವಾರಿಯನ್ನು ಹೊತ್ತುಕೊಂಡು ಸಂಪೂರ್ಣ ಮಾಡಿದೆ. 182 ಮೀಟರ್ ಎತ್ತರ ಈ ಪ್ರತಿಮೆಗೆ 25 ಸಾವಿರ ಟನ್ ಉಕ್ಕು, 90 ಸಾವಿರ ಟನ್ ಸಿಮೆಂಟ್, ಸುಮಾರು ಏಳು ಕಿಲೋಮೀಟರ್ ತ್ರಿಜ್ಯದಿಂದ ಕಾಣುವ ಹಾಗೇ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ವಿಶೇಷವಾಗಿ ಈ ಪ್ರತಿಮೆ ನಿರ್ಮಾಣಕ್ಕೆ ದೇಶದ ಹಲವು ಕಡೆಯಿಂದ ಕಬ್ಬಿಣವನ್ನು ಸಂಗ್ರಹಿಸಲಾಗಿತ್ತು.

ಎಷ್ಟು ಖರ್ಚಾಗಿದೆ?
ವಿಶ್ವದ ಉತ್ಕೃಷ್ಟ ತಂತ್ರಜ್ಞಾನ ಮತ್ತು ವಾಸ್ತುಶಿಲ್ಪವನ್ನು ಏಕತಾ ಮೂರ್ತಿ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. 2,989 ಕೋಟಿ ರೂ. ವೆಚ್ಚದಲ್ಲಿ ಉಕ್ಕಿನಷ್ಟೇ ಗಟ್ಟಿಯಾಗಿ ಪ್ರತಿಮೆ ನಿರ್ಮಿಸಲಾಗಿದೆ. ಪಿಪಿಪಿ ಮಾದರಿಯಲ್ಲಿ ಈ ಯೋಜನೆ ಪೂರ್ಣಗೊಂಡಿದ್ದು 2012-13ರ ಬಜೆಟ್ ನಲ್ಲಿ 100 ಕೋಟಿ, 2014-15ರ ಬಜೆಟ್ ನಲ್ಲಿ 500 ಕೋಟಿ ಹಣವನ್ನು ಗುಜರಾತ್ ಸರ್ಕಾರ ನೀಡಿತ್ತು. 200 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರ 2014-15ರ ಬಜೆಟ್ ನಲ್ಲಿ ನೀಡಿತ್ತು.

Statue of Unity sardar patel 13 1

ಏನೆಲ್ಲ ವಿಶೇಷತೆಯಿದೆ?
ಪ್ರತಿಮೆಯಲ್ಲೇ ಎರಡು ಲಿಫ್ಟ್ ಗಳಿವೆ. ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರವಾಸಿಗರ ವಸತಿಗಾಗಿ 52 ರೂಂಗಳಿರುವ ಶ್ರೇಷ್ಠ ಭಾರತ ಹೆಸರಿನ ತ್ರಿಸ್ಟಾರ್ ಲಾಡ್ಜ್ ನಿರ್ಮಿಸಿದೆ. ಸೆಲ್ಫಿ ಪಾಯಿಂಟ್, ರೆಸ್ಟೋರೆಂಟ್‍ಗಳು, ಫೆರ್ರಿ ಸೇವೆ, ಬೋಟಿಂಗ್ ಸೌಕರ್ಯವಿದೆ. 250 ಟೆಂಟ್‍ಗಳಿರುವ `ಟೆಂಟ್ ಸಿಟಿ’, 306 ಮೀಟರ್ ಉದ್ದದ ಮಾರ್ಬಲ್ ಫ್ಲೋರಿಂಗ್ ವಾಕ್‍ವೇ, ವೀಕ್ಷಣಾ ಗ್ಯಾಲರಿಯೂ ಇದೆ. ಪಟೇಲರಿಗೆ ಸಂಬಂಧಿಸಿದ ಮ್ಯೂಸಿಯಂ. ಆಡಿಯೊ-ವಿಡಿಯೋ ಗ್ಯಾಲರಿ, ಸಂಶೋಧನಾ ಕೇಂದ್ರವನ್ನು ತೆರೆಯಲಾಗಿದೆ. ನಾಲ್ಕು ಹಂತದಲ್ಲಿ ಕಾಮಗಾರಿ ಮಾಡಲಾಗಿದ್ದು ತ್ರೀಡಿ ತಂತ್ರಜ್ಞಾನದ ಮೂಲಕ ಪಟೇಲರ ಚಿತ್ರಗಳನ್ನು ಸೃಷ್ಟಿಸಿ ಅವರ ಸಾಧನೆಗಳನ್ನು ಪ್ರವಾಸಿಗರಿಗೆ ತಿಳಿಸಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *