Bengaluru CityKarnatakaLatestMain Post

ಕರ್ನಾಟಕ ಕಟ್ಟುವಲ್ಲಿ ದಿ.ದೇವರಾಜ ಅರಸು ಪಾತ್ರ ಹಿರಿದು: ಬೊಮ್ಮಾಯಿ

ಬೆಂಗಳೂರು: ಕರ್ನಾಟಕದ ನಾಮಕರಣದಿಂದ ಹಿಡಿದು ಕರ್ನಾಟಕ ಕಟ್ಟುವಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಪಾತ್ರ ಹಿರಿದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ದೇವರಾಜ ಅರಸು ಅವರ 106ನೇ ಜನ್ಮ ದಿನಾಚರಣೆಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಕನ್ನಡ ನಾಡು ಕಂಡಂಥ ಧೀಮಂತ ನಾಯಕರು, ಜನಪರ, ಹಿಂದುಳಿದ ಮತ್ತು ರೈತಪರ ಮುಖ್ಯಮಂತ್ರಿ ದೇವರಾಜ ಅರಸು. ನಮ್ಮ ಕರ್ತವ್ಯಗಳನ್ನು ನೆನಪಿಸುವ ದಿನವಿದು. ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ದಿನ. ಹಿಂದುಳಿದ ವರ್ಗಗಳ ಏಳಿಗೆಗಾಗಿ, ಸ್ವಾಭಿಮಾನದ ಬದುಕಿಗಾಗಿ ಸರ್ಕಾರ ಕೆಲಸ ಮಾಡಬೇಕು. ವಿಶೇಷವಾಗಿ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕೆನ್ನುವ ಸಂಕಲ್ಪವನ್ನು ಮಾಡುವ ದಿನ ಇದು ಎಂದು ಭಾವಿಸಿದ್ದೇನೆ ಎಂದರು. ಇದನ್ನೂ ಓದಿ: 48 ವರ್ಷಗಳಾದ್ರೂ ಲಕ ಲಕ ಹೊಳೆಯುತ್ತಿದೆ ದೇವರಾಜ ಅರಸು ಬಳಸಿದ ಬೆಂಜ್ ಕಾರು

ದೇವರಾಜ ಅರಸು ಅವರು ಜಾರಿಗೆ ತಂದ ಕ್ರಾಂತಿಕಾರಿ ಭೂ ಸುಧಾರಣೆ ಕಾಯ್ದೆ, ನಮ್ಮೆಲ್ಲರಿಗೂ ಅತ್ಯಂತ ಸ್ಫೂರ್ತಿದಾಯಕ. ಕರ್ನಾಟಕದಲ್ಲಿ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎನ್ನುವ ಘೋಷಣೆಯನ್ನು ಅಕ್ಷರಶಃ ಪಾಲಿಸಿದವರು ದೇವರಾಜ ಅರಸು. ಹಲವಾರು ನಾಯಕರನ್ನು ಬೆಳೆಸಿದ್ದಾರೆ. ಕರ್ನಾಟಕದ ರಾಜಕಾರಣದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದ್ದಾರೆ. ಅವರ ಹೆಜ್ಜೆ ಗುರುತುಗಳು ಕರ್ನಾಟಕದ ಭೂಮಿಯಲ್ಲಿ ಶಾಶ್ವತವಾಗಿದೆ. ಅವರ ಹೆಸರಿನಲ್ಲಿ ಇಂದಿಗೂ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಅವರ ವಿಚಾರಧಾರೆಗಳು ಪಕ್ಷಾತೀತವಾಗಿ, ಸರ್ವ ಸಮ್ಮತವಾಗಿ ಒಪ್ಪುವಂಥ ನಾಯಕರು ಎಂದು ನುಡಿದರು. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿ ನಾಯಕರಿಂದ ಕೋವಿಡ್ ನಿಯಮ ಉಲ್ಲಂಘನೆ – ದೂರು ದಾಖಲು

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಲೋಕಸಭಾ ಸದಸ್ಯ ಪಿ.ಸಿ. ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button