ಬೆಂಗಳೂರು: 3 ವರ್ಷಗಳಿಂದ ನಡೆಯುತ್ತಿದ್ದ ದೇವನಹಳ್ಳಿಯ ಚನ್ನರಾಯಪಟ್ಟಣ ಜಮೀನು ಭೂಸ್ವಾಧೀನ ವಿವಾದ ಕೊನೆಗೂ ಅಂತ್ಯವಾಗಿದೆ. 1,777 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಹೊರಡಿಸಿದ್ದ ಫೈನಲ್ ನೋಟಿಫಿಕೇಶನ್‌ಅನ್ನು ರಾಜ್ಯ ಸರ್ಕಾರ ರದ್ದು ಮಾಡೋದಾಗಿ ಘೋಷಣೆ ಮಾಡಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರೈತರು, ಹೋರಾಟಗಾರರು, ಸಂಘಟನೆಗಳ ಸಭೆಯಲ್ಲಿ ನೋಟಿಫಿಕೇಶನ್ ರದ್ದು ಮಾಡುವ ಬಗ್ಗೆ ಘೋಷಣೆ ಮಾಡಿದರು. ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 1,777 ಎಕರೆ ಜಮೀನು ಭೂಸ್ವಾಧೀನಕ್ಕೆ ಸರ್ಕಾರ ನೋಟಿಫಿಕೇಶನ್ ಹೊರಡಿಸಿತ್ತು. ಕೃಷಿ ಭೂಮಿ ಭೂಸ್ವಾಧೀನ ಮಾಡದಂತೆ ರೈತರು ಹೋರಾಟ ಮಾಡುತ್ತಿದ್ದರು. ಕೃಷಿ ಚಟುವಟಿಕೆಗಳು ಮುಂದುವರೆಸುವ ದೃಷ್ಟಿಯಿಂದ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನ ರದ್ದು ಮಾಡುತ್ತಿರೋದಾಗಿ ತಿಳಿಸಿದರು.ಇದನ್ನೂ ಓದಿ: ಇದೇ ರೀತಿ 20 ದೇಶದ ಕಾಡಿನಲ್ಲಿ ವಾಸವಿದ್ದೆವು – ಗೋಕರ್ಣ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ ಮಾತು
ಒಂದು ವೇಳೆ ರೈತರು ಸ್ವಯಂ ಪ್ರೇರಿತರಾಗಿ ಜಮೀನು ಕೊಟ್ಟರೆ ಆ ಭೂಮಿ ಸರ್ಕಾರ ಪಡೆಯಲಿದೆ. ಜೊತೆಗೆ ಸೂಕ್ತ ಪರಿಹಾರ ಕೊಡುವ ಜೊತೆಗೆ ಅಭಿವೃದ್ಧಿಪಡಿಸಿದ 50% ಭೂಮಿಯನ್ನು ಜಮೀನು ಕೊಡುವ ರೈತರಿಗೆ ಕೊಡಲಾಗುತ್ತದೆ. ಸರ್ಕಾರದ ಈ ನಿರ್ಧಾರ ದೇವನಹಳ್ಳಿ ಜಮೀನಿಗೆ ಮಾತ್ರ ಅನ್ವಯ ಆಗಲಿದೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ನಿರ್ಧಾರದ ಬಗ್ಗೆ ಮಾತನಾಡಿದ ನಟ ಪ್ರಕಾಶ್ ರಾಜ್, ಇದು 3 ವರ್ಷಗಳ ಪ್ರತಿಭಟನೆಗೆ ಸಿಕ್ಕ ಜಯ. ಇದು ರೈತರ ಜಯ ಇದು. ಸಂಘಟನೆಗಳ ಜಯ. ಐತಿಹಾಸಿಕ ಚಳುವಳಿಯ ಜಯ ಇದು. ಸರ್ಕಾರಕ್ಕೆ, ಸಿಎಂಗೆ ಧನ್ಯವಾದಗಳನ್ನು ಹೇಳ್ತೀನಿ. ದೇವನಹಳ್ಳಿ ಹೋರಾಟಕ್ಕೆ ಜಯವಾಗಿದೆ. ಮುಂದಿನ ಹೋರಾಟದ ಬಗ್ಗೆ ಮುಂದೆ ನೋಡೋಣ ಎಂದರು.
ರೈತ ನಾಯಕ ಬಡಗಲಪುರ ನಾಗೇಂದ್ರ ಮಾತಾಡಿ, ಇದೊಂದು ಸಂಘಟಿತ ಹೋರಾಟ. ಎಲ್ಲರು ಒಟ್ಟಾಗಿ ಹೋರಾಟ ಮಾಡಿದ್ವಿ. ಇದೊಂದು ಐತಿಹಾಸಿಕ ಜಯ. ಯಾವುದೇ ಕೃಷಿ ಭೂಮಿಗೆ ಸಮಸ್ಯೆ ಮಾಡಿದ್ರೆ ಹೋರಾಟ ಮಾಡ್ತೀವಿ. ಫಲವತ್ತಾದ ಭೂಮಿ ಸ್ವಾಧೀನ ಮಾಡಿಕೊಳ್ಳಬಾರದು. ಭೂಮಿ ಬಲಾತ್ಕಾರವಾಗಿ ವಶ ಮಾಡಿಕೊಂಡರೇ ಹೋರಾಟ ಮಾಡ್ತೀವಿ. ಇದು ರೈತರ ಹೋರಾಟಕ್ಕೆ ಸಿಕ್ಕ ಜಯ ಇದು. ಇಲ್ಲಿ ಯಾವುದೇ ಮಾಫಿಯಾದ ಕೈಗಳು ಇಲ್ಲ. ಇದು ರೈತರು, ಮಹಿಳೆಯರ ಹೋರಾಟಕ್ಕೆ ಸಿಕ್ಕ ಜಯ ಎಂದರು. ಇದನ್ನೂ ಓದಿ: ಭಾರತಕ್ಕೆ ಟೆಸ್ಲಾ ಎಂಟ್ರಿ | ಮೈಲೇಜ್ ಎಷ್ಟು? ಬೇರೆ ದೇಶದಲ್ಲಿ ದರ ಎಷ್ಟಿದೆ? ಭಾರತದಲ್ಲಿ ದುಬಾರಿ ಯಾಕೆ?