ಬೆಂಗಳೂರು: ದೇವನಹಳ್ಳಿ (Devanahalli) ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಹೈಟೆಕ್ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 15ರಂದು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಒಟ್ಟಿನಲ್ಲಿ ಕೃಷಿ ಮತ್ತು ಕೈಗಾರಿಕೆ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕೆನ್ನುವುದು ತಮ್ಮ ಕಳಕಳಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ (M.B Patil) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ʻಅಲ್ಲಿ ಕೆಲವರು ಭೂಸ್ವಾಧೀನ (Devanahalli Land Acquisition) ಬೇಡವೆಂದು ಹೋರಾಟ ಮಾಡುತ್ತಿದ್ದಾರೆ. ಮತ್ತೆ ಕೆಲವರು 449 ಎಕರೆ ಜಮೀನನ್ನು ಬಿಟ್ಟುಕೊಡಲು ಸಿದ್ಧವಾಗಿದ್ದು, ಎಕರೆಗೆ 3.5 ಕೋಟಿ ರೂ. ಪರಿಹಾರ ಕೇಳುತ್ತಿದ್ದಾರೆ. ರೈತರಲ್ಲೇ ಈ ಬಗ್ಗೆ ಬೇರೆಬೇರೆ ಅಭಿಪ್ರಾಯಗಳಿವೆ. ಸರ್ಕಾರ ಎಲ್ಲಾ ರೀತಿಯ ಸಾಧಕ-ಬಾಧಕಗಳನ್ನೂ ಪರಿಶೀಲಿಸುತ್ತಿದೆʼ ಎಂದಿದ್ದಾರೆ. ಇದನ್ನೂ ಓದಿ: KIADB ಭೂಸ್ವಾಧೀನ ವಿರೋಧಿಸಿ ಧರಣಿ ವೇಳೆ ವಿಷ ಕುಡಿದ ರೈತ – ಆಸ್ಪತ್ರೆಗೆ ದಾಖಲು
ಶನಿವಾರದಂದು ʻಚನ್ನರಾಯಪಟ್ಟಣ ಹೋಬಳಿ ರೈತ ಹೋರಾಟ ಸಮಿತಿʼ ಹೆಸರಿನಲ್ಲಿ ಕೆಲವು ರೈತರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, 449 ಎಕರೆಯನ್ನು ಸರ್ಕಾರಕ್ಕೆ ಕೊಡುವುದಾಗಿ ಹೇಳಿದ್ದಾರೆ. ಯೋಜನೆಗೆ ಸಂಬಂಧಿಸಿದಂತೆ ಮೊದಲು ಅಧಿಸೂಚನೆ ಹೊರಟಿದ್ದೇ ಇಷ್ಟು ಭೂಮಿಗೆ. ಸರ್ಕಾರ ನಿಜವಾದ ರೈತರ ದನಿಗೆ ಬೆಲೆ ಕೊಡುತ್ತದೆಯೇ ವಿನಾ ರೈತರ ಹೆಸರಿನಲ್ಲಿ ಏನೇನೋ ಮಾತನಾಡುತ್ತಿರುವವರಿಗಲ್ಲ ಎಂದು ಅವರು ತಿಳಿಸಿದ್ದಾರೆ.
ದೇವನಹಳ್ಳಿ ಸುತ್ತಮುತ್ತ ಯಾವ್ಯಾವ ಬಿಲ್ಡರ್‌ಗಳು ಎಷ್ಟೆಷ್ಟು ಭೂಮಿ ಖರೀದಿಸಿದ್ದಾರೆ, ಯಾರ ಜೊತೆ ಅವರು ಒಪ್ಪಂದ ಮಾಡಿಕೊಂಡಿದ್ದಾರೆ, ಯಾವ ರಾಜಕಾರಣಿಗಳ ಜಮೀನು ಎಷ್ಟಿದೆ, ಹೋರಾಟದ ಹಿಂದೆ ಯಾರ ಕುಮ್ಮಕ್ಕಿದೆ ಎನ್ನುವುದೆಲ್ಲ ನಮಗೆ ಗೊತ್ತಿದೆ. ದೇವನಹಳ್ಳಿ ಸುತ್ತಲಿನ ಪರಿಸರದಲ್ಲಿ ಕೃಷಿ ಉಳಿಯಬೇಕು ಎನ್ನುವ ಕೂಗೂ ಎದ್ದಿದೆ. ಹೀಗಾಗಿ ಸರಕಾರವು ಶಾಶ್ವತ ಕೃಷಿ ವಲಯ ಮಾಡುವ ಬಗ್ಗೆಯೂ ಚಿಂತಿಸುತ್ತಿದೆ. ಈಗ ಕೆಲವರು ಇದು ಬೇಡ ಎನ್ನುತ್ತಿದ್ದಾರೆ. ಈ ರೀತಿಯ ದ್ವಂದ್ವ ಸರಿಯಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಭೂಸ್ವಾಧೀನ ಬೇಡವೆಂದು ಕೆಲವು ಸಾಹಿತಿಗಳು, ಚಿಂತಕರು ನಮ್ಮ ಪಕ್ಷದ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಅದನ್ನು ನಾನು ವಿರೋಧಿಸುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಡುವ ಹಕ್ಕಿದೆ. ನಾವು ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸುತ್ತಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಸರ್ಕಾರಿ ಬಸ್ಸಿನಲ್ಲಿ ಪ್ರಾಣಿಗಳ ಜೊತೆ ಟಯರ್, ಫ್ರಿಡ್ಜ್, ವಾಷಿಂಗ್ ಮೆಷಿನ್ ಸಾಗಿಸಬಹುದು! -ಯಾವುದಕ್ಕೆ ಎಷ್ಟು ದರ?