ಬಿಸಿಸಿಐ ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ನೇಮಕ

Public TV
1 Min Read
devajit saikia

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ನೂತನ ಕಾರ್ಯದರ್ಶಿಯಾಗಿ ಅಸ್ಸಾಂನ ಮಾಜಿ ಕ್ರಿಕೆಟಿಗ ದೇವಜಿತ್‌ ಸೈಕಿಯಾ (Devajit Saikia) ನೇಮಕವಾಗಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಅಧ್ಯಕ್ಷರಾಗಿ ಜಯ್‌ ಶಾ (Jay Shah) ಆಯ್ಕೆಯಾದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಒಂದು ತಿಂಗಳ ಬಳಿಕ ಸೈಕಿಯಾ ನೇಮಕಗೊಂಡಿದ್ದಾರೆ ಎಂದು ವರದಿಯಾಗಿದೆ.

devajit saikia 2

ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಇಂದು ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ (Roger Binny), ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಹಾಗೂ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ಇತ್ತೀಚಿನ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲಿ ಟೀಂ ಇಂಡೀಯಾ ಸೋಲಿಗೆ ಕಾರಣಗಳನ್ನು ಆತ್ಮಾವಲೋಕನ ಮಾಡಿಕೊಳ್ಳಲಾಯಿತು. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಕಾರಣಗಳೇನೆಂಬುದನ್ನು ಚರ್ಚಿಸಲಾಯಿತು. ಜೊತೆಗೆ ಮುಂದಿನ ಸವಾಲುಗಳ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸುವ ಬಗ್ಗೆಯೂ ಮಾತುಕತೆ ನಡೆಸಲಾಯಿತು.

Gautam Gambhir

ದೇವಜಿತ್ ಸೈಕಿಯಾ ಯಾರು?
ಸೈಕಿಯಾ ಅಸ್ಸಾಂ ಮೂಲದ ಮಾಜಿ ಕ್ರಿಕೆಟರ್‌. 1990 – 1991ರ ನಡುವೆ‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 4 ಪಂದ್ಯಗಳನ್ನಾಡಿದ್ದ ಸೈಕಿಯಾ ವಿಕೆಟ್‌ ಕೀಪರ್‌ ಆಗಿದ್ದರು. ಈ ಪಂದ್ಯದಲ್ಲಿ 53 ರನ್‌ ಗಳಿಸಿದ್ದ ಅವರು 9 ವಿಕೆಟ್‌ ಪಡೆದಿದ್ದರು. ಬಳಿಕ ಕಾನೂನು ವೃತ್ತಿಯಲ್ಲಿ ಮುಂದುವರಿಯಲು ಪ್ರಾರಂಭಿಸಿದರು. 28ನೇ ವಯಸ್ಸಿನಲ್ಲಿ ಗುವಾಹಟಿ ಹೈಕೋರ್ಟ್‌ ವಕೀಲರಾಗಿ ಅಭ್ಯಾಸ ಆರಂಭಿಸಿದರು. ಇದಕ್ಕೂ ಮುನ್ನ ಸ್ಪೋರ್ಟ್ಸ್‌ ಕೋಟಾ ಮೂಲಕ ಉತ್ತರ ಗಡಿನಾಡು ರೈಲ್ವೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ ಸೇವೆ ಸಲ್ಲಿಸಿದ್ದರು.

ನಂತರ 2019ರಲ್ಲಿ ಮತ್ತೆ ಕ್ರೀಡಾಲೋಕಕ್ಕೆ ಮರಳಿದರು. ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ​​(ACA)ನ ಆರು ಉಪಾಧ್ಯಕ್ಷರಲ್ಲಿ ಒಬ್ಬರಾಗಿದ್ದರು. 2019ರಲ್ಲಿ ಅಸ್ಸಾಂ ಕ್ರಿಕೆಟ್‌ ಅಸೋಸಿಯೇಷನ್‌ ಕಾರ್ಯದರ್ಶಿಯಾಗಿ ಬಳಿಕ 2022ರಲ್ಲಿ ಬಿಸಿಸಿಐ ಹಂಟಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು. ಇದೀಗ ಬಿಸಿಸಿಐ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

Share This Article