8 ತಿಂಗಳ ಬಳಿಕ ಒಮರ್ ಅಬ್ದುಲ್ಲಾಗೆ ಗೃಹಬಂಧನದಿಂದ ಮುಕ್ತಿ

Public TV
1 Min Read
Omar Abdullah

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಎಂಟು ತಿಂಗಳ ಬಳಿಕ ಗೃಹಬಂಧನದಿಂದ ಮುಕ್ತರಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನ 370 ವಿಧಿಯನ್ನು ತೆಗೆದುಹಾಕುವುದಕ್ಕೂ ಮುನ್ನ ಅಂದ್ರೆ 2019ರ ಆಗಸ್ಟ್ 4ರಂದು ರಾತ್ರಿ ಒಮರ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಬಳಿಕ 2020ರ ಫೆಬ್ರವರಿ 5ರಿಂದ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಅವರನ್ನು ಗೃಹಬಂಧನದಲ್ಲೇ ಮುಂದುವರಿಸಲಾಗಿತ್ತು.

ಈ ಮೂಲಕ ಒಮರ್ ಅಬ್ದುಲ್ ಅವರು 232 ದಿನ ಕಾಲ ಗೃಹ ಬಂಧನದಲ್ಲಿ ಕಾಲ ಕಳೆದು ಇಂದು ಬಿಡುಗಡೆಯಾಗಿದ್ದಾರೆ. ಆದರೆ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಸೇರಿದಂತೆ ಹಲವಾರು ನಾಯಕರು ಇನ್ನೂ ಗೃಹಬಂಧನದಲ್ಲಿದ್ದಾರೆ.

ನಮ್ಮ ಸಹೋದರ ಒಮರ್ ಅವರನ್ನು ಬಿಡುಗಡೆ ಮಾಡಲು ಯೋಚಿಸಿದ್ದೀರಾ ಎಂದು ಸಾರಾ ಪೈಲಟ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಸುಪ್ರೀಂ ಕೋರ್ಟ್ ಕಳೆದ ವಾರ ಕೇಂದ್ರ ಸರ್ಕಾರದಿಂದ ಉತ್ತರ ಕೋರಿತ್ತು. ಈಗ ಕಾಶ್ಮೀರದಲ್ಲಿ ವಾತಾವರಣ ಉತ್ತಮಗೊಂಡಿದೆ. ಒಮರ್ ಬಿಡುಗಡೆಗೆ ಸಂಬಂಧಿಸಿದಂತೆ ನಿಮ್ಮ ಸೂಚನೆಗಳೇನು? ಶೀಘ್ರದಲ್ಲೇ ಉತ್ತರ ನೀಡದಿದ್ದರೆ ಸಾರಾ ಪೈಲಟ್ ಅವರ ಅರ್ಜಿ ವಿಚಾರಣೆ ಆಲಿಸಲಾಗುತ್ತದೆ ಎಂದು ಕೋರ್ಟ್ ಕೇಳಿತ್ತು.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಮಾರ್ಚ್ 13 ರಂದು ಗೃಹಬಂಧನದಿಂದ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ ಮರುದಿನವೇ ಅವರು ತಮ್ಮ ಮಗ ಒಮರ್ ಅಬ್ದುಲ್ಲಾ ಅವರನ್ನು ಭೇಟಿಯಾಗಿದ್ದರು. ಕಳೆದ ಏಳು ತಿಂಗಳಲ್ಲಿ ಮೊದಲ ಬಾರಿಗೆ ತಂದೆ ಮತ್ತು ಮಗ ಮಾತನಾಡಿದ್ದರು.

ಬಿಡುಗಡೆಯ ನಂತರ ಮಗನನ್ನು ನೋಡುವ ಇಚ್ಛೆಯನ್ನು ಫಾರೂಕ್ ವ್ಯಕ್ತಪಡಿಸಿದ್ದರು. ಹೀಗಾಗಿ ಜಮ್ಮು ಮತ್ತು ಕಾಶ್ಮೀರ ಆಡಳಿತಾಧಿಕಾರಿಗಳು ಶ್ರೀನಗರದ ಉಪ ಜೈಲಿನಲ್ಲಿ ಒಮರ್ ಅವರನ್ನು ಭೇಟಿಯಾಗಲು ಅವಕಾಶ ಮಾಡಿಕೊಟ್ಟಿದ್ದರು. ಸುಮಾರು ಒಂದು ಗಂಟೆ ಇಬ್ಬರೂ ಮಾತುಕತೆ ನಡೆಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *