ಬೆಂಗಳೂರು: ಲೋಕಸಭಾ ಕ್ಷೇತ್ರಗಳಾದ ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಇಂದು ಮಿನಿ ಫೈಟ್ ನಡೆಯುತ್ತಿದ್ದು, ಮತದಾರರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಹುರುಪಿನಿಂದ ಮತಗಟ್ಟೆಯತ್ತ ಆಗಮಿಸುತ್ತಿದ್ದಾರೆ. ಈ ಮೂರು ಜಿಲ್ಲೆಗಳ ಉಪಚುನಾವಣೆಯ ಕುರಿತು ವಿವರವಾಗಿ ನೋಡೋದಾದ್ರೆ…
ಶಿವಮೊಗ್ಗ ಲೋಕಸಭಾ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಇಬ್ಬರು ಮಾಜಿ ಸಿಎಂ ಪುತ್ರರು ಕಣದಲ್ಲಿದ್ದಾರೆ. ಬಿಜೆಪಿಯಿಂದ ಬಿ.ವೈ.ರಾಘವೇಂದ್ರ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪರ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಆದರೆ ಈ ಚುನಾವಣೆ ಪರೋಕ್ಷವಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಡುವಿನ ನೇರ ಹೋರಾಟವೆಂದೆ ಕರೆಯಲಾಗುತ್ತಿದೆ.
Advertisement
Advertisement
ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ, 16,45,511 ಇದರಲ್ಲಿ ಪುರುಷರು 8,27,111 ಹಾಗೂ ಮಹಿಳೆಯರು 8,17,948 ಇದೆ. ಇನ್ನು ಜಾತಿ ಲೆಕ್ಕಾಚಾರದಲ್ಲಿ ನೋಡುವುದಾದರೆ, ಲಿಂಗಾಯಿತರು 2.7 ಲಕ್ಷ, ದಲಿತರು 2 ಲಕ್ಷ, ಈಡಿಗರು 2 ಲಕ್ಷ, ಬ್ರಾಹ್ಮಣರು 1.5 ಲಕ್ಷ, ಮುಸ್ಲಿಮರು 1.3 ಲಕ್ಷ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಲಿಂಗಾಯಿತ, ದಲಿತರು ಹಾಗೂ ಈಡಿಗ ಸಮುದಾಯದ ಮತದಾರರೇ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಸದ್ಯದ ಶಿವಮೊಗ್ಗದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯು 7ರಲ್ಲಿದ್ದರೆ, ಕಾಂಗ್ರೆಸ್ ಕೇವಲ 1 ಕ್ಷೇತ್ರವನ್ನು ವಶದಲ್ಲಿಟ್ಟುಕೊಂಡಿದೆ.
Advertisement
2014ರ ಲೋಕಸಭಾ ಚುನಾವಣಾ ಫಲಿತಾಂಶ ಏನಾಗಿತ್ತು?
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಜೆಪಿ ತೊರೆದು ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ತರಲು ಪುನಃ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ 6,06,216 ಮತಗಳನ್ನು ಪಡೆದು 3,63,305 ಮತಗಳ ಅಂತರದಿಂದ ಭಾರೀ ಜಯಭೇರಿಯನ್ನು ಬಾರಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ 2,42,611 ಮತಗಳನ್ನು ಪಡೆದುಕೊಂಡಿದ್ದರೆ, ಜೆಡಿಎಸ್ ನ ಗೀತಾ ಶಿವರಾಜ್ ಕುಮಾರ್ 2,40,636 ಮತಗಳನ್ನು ಗಳಿಸಿದ್ದರು.
Advertisement
ಬಳ್ಳಾರಿ:
ಬಳ್ಳಾರಿ ಲೋಕಸಭಾ ಉಪ ಚುನಾವಣಾ ಕಣ ರಂಗೇರಿದ್ದು, ಶ್ರೀರಾಮುಲು ಹಾಗೂ ಡಿಕೆ ಶಿವಕುಮಾರ್ ಅಭ್ಯರ್ಥಿಗಳ ನಡುವಿನ ನೇರ ಹೋರಾಟಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಶ್ರೀರಾಮುಲು ಅಕ್ಕ ಜೆ.ಶಾಂತ ಅಖಾಡದಲ್ಲಿದ್ದರೆ, ಕಾಂಗ್ರೆಸ್ಸಿನಿಂದ ಕೊನೆಯ ಕ್ಷಣದಲ್ಲಿ ವಿ.ಎಸ್.ಉಗ್ರಪ್ಪ ಬಳ್ಳಾರಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಪ್ರಮುಖವಾಗಿ ಶ್ರೀರಾಮುಲು, ಗಾಲಿ ಜನಾರ್ದನ ರೆಡ್ಡಿ ಹಾಗೂ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದರು. ಬಳ್ಳಾರಿ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ತನ್ನ ಸಮ್ಮಿಶ್ರ ಸರ್ಕಾರದ ಇಡೀ ಮಂತ್ರಿಮಂಡಲವನ್ನೇ ಪ್ರಚಾರಕ್ಕೆ ಬಳಸಿಕೊಂಡಿತ್ತು.
ಈ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,13,354 ಮತದಾರರಿದ್ದು, ಇದರಲ್ಲಿ ಪುರುಷರು 8,55,194 ಹಾಗೂ ಮಹಿಳೆಯರು 8,57,944 ಆಗಿದೆ. ಜಾತಿವಾರು ಲೆಕ್ಕಾಚಾರದಲ್ಲಿ ನೋಡುವುದಾದರೆ, ವಾಲ್ಮೀಕಿ (ನಾಯಕ) 3 ಲಕ್ಷ, ಲಿಂಗಾಯತ 3 ಲಕ್ಷ, ಎಸ್‍ಸಿ (ಲಂಬಾಣಿ) 2.5 ಲಕ್ಷ, ಕುರುಬ 2.5 ಲಕ್ಷ, ಮುಸ್ಲಿಂ 2 ಲಕ್ಷ, ಗೊಲ್ಲ 1 ಲಕ್ಷ, ಗಂಗಾಮತ 70 ಸಾವಿರ, ಬಲಿಜ 70 ಸಾವಿರ, ರೆಡ್ಡಿ-ಕಮ್ಮ 40 ಸಾವಿರ ಹಾಗೂ ಉಪ್ಪಾರ ಸಮುದಾಯದ 35 ಸಾವಿರ ಮತದಾರರಿದ್ದಾರೆ. ಇದರಲ್ಲಿ ವಾಲ್ಮೀಕಿ, ಲಿಂಗಾಯಿತ, ಲಂಬಾಣಿ ಹಾಗೂ ಕುರುಬ ಸಮುದಾಯದ ಮತಗಳೇ ನಿರ್ಣಾಯಕ ಮತಗಳು
ಸದ್ಯದ ಬಳ್ಳಾರಿಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 6 ರಲ್ಲಿ ಪ್ರಾಬಲ್ಯ ಸಾಧಿಸಿದ್ದರೆ, ಬಿಜೆಪಿ ಕೇವಲ 2 ಸ್ಥಾನಗಳನ್ನು ಪಡೆದುಕೊಂಡಿದೆ. ಮಾಹಿತಿಗಳ ಪ್ರಕಾರ ರೆಡ್ಡಿ, ಶ್ರೀರಾಮುಲು ಹಾಗೂ ಡಿಕೆಶಿವಕುಮಾರ್, ಸಿಎಂ ಕುಮಾರಸ್ವಾಮಿ ನಡುವೆ ನೇರ ಹಣಾಹಣಿಯಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶ ಏನಾಗಿತ್ತು?
ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಶ್ರೀರಾಮುಲು 5,34,406 ಮತಗಳನ್ನು ಪಡೆದು, 85,144 ಮತಗಳ ಅಂತರದಿಂದ ವಿಜಯ ಸಾಧಿಸಿದ್ದರು. ಕಾಂಗ್ರೆಸ್ಸಿನ ಎನ್.ವೈ.ಹನುಮಂತಪ್ಪ 4,49,262 ಮತಗಳನ್ನು ಪಡೆದುಕೊಂಡಿದ್ದರು.
ಮಂಡ್ಯ:
ಸಕ್ಕರೆ ನಾಡು ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಶಿವರಾಮೇಗೌಡರು ಕಣಕ್ಕೆ ಇಳಿದಿದ್ದಾರೆ. ಇತ್ತ ಬಿಜೆಪಿ ಡಾ.ಸಿದ್ದರಾಮಯ್ಯರನ್ನ ಕಣಕ್ಕೆ ಇಳಿಸಿದೆ. ಮಂಡ್ಯದಲ್ಲಿಯ ಜಾತಿ ಲೆಕ್ಕಾಚಾರ ಹೀಗಿದೆ. ಒಕ್ಕಲಿಗರು 8,10,000, ಪರಿಶಿಷ್ಟ ಜಾತಿ ಮತ್ತು ಪಂಗಡ 3,50,000, ಲಿಂಗಾಯತ 1,00,000, ಕುರುಬರು 1,00,000, ಮುಸ್ಲಿಮರು 80,000, ಬೆಸ್ತರು 40,000, ಬ್ರಾಹ್ಮಣರು 30,000, ಕ್ರೈಸ್ತರು 30,000, ಇತರರು 1,40,000 ಮತದಾರರಿದ್ದಾರೆ. ಇವುಗಳಲ್ಲಿ ಒಕ್ಕಲಿಗರು ಮತಗಳು ನಿರ್ಣಾಯಕವಾಗಲಿದೆ.
ಮಂಡ್ಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ ಪತಾಕೆಯನ್ನು ಹಾರಿಸಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿಎಸ್.ಪುಟ್ಟರಾಜು 5,24,370 ಮತಗಳನ್ನು ಪಡೆದು ಗೆಲುವು ಕಂಡಿದ್ದರು. ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿದ್ದ ರಮ್ಯಾ ಅವರು 5,18,852 ಮತ ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಬಿ.ಶಿವಲಿಂಗಯ್ಯ 86,993 ಮತ ಪಡೆದಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv