– ಸುಮ್ಮನಹಳ್ಳಿ ಚಿತಾಗಾರದಲ್ಲಿ ಐವರ ಅಂತ್ಯಕ್ರಿಯೆ
ಬೆಂಗಳೂರು: ದಾಂಪತ್ಯದಲ್ಲಿ ತಾಳಮೇಳ ಇಲ್ಲ ಅಂದ್ರೆ ಏನಾಗುತ್ತೆ ಎಂಬುದಕ್ಕೆ ಶುಕ್ರವಾರ ಸಂಜೆ ಬೆಂಗಳೂರಿನ ತಿಗಳರಪಾಳ್ಯದಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆ ಪ್ರಕರಣವೇ ಉದಾಹರಣೆ. 9 ತಿಂಗಳ ಮಗು ಸೇರಿದಂತೆ ಐವರ ಸಾವಿಗೆ ಕಾರಣವಾದ ಪ್ರಕರಣದ ಒಂದೊಂದೇ ಸತ್ಯಗಳು ಈಗ ಹೊರಕ್ಕೆ ಬರುತ್ತಿವೆ.
ಹಲ್ಲೆಗೆರೆ ಶಂಕರ್ ಕುಟುಂಬಕ್ಕೆ ಹಣ, ಆಸ್ತಿ, ಅಂತಸ್ತು ಎಲ್ಲವೂ ಬೇಕಾಗಿದ್ದಕ್ಕಿಂತ ಹೆಚ್ಚೇ ಇತ್ತು. ಆದರೆ ನೆಮ್ಮದಿ ಮಾತ್ರ ಇರಲಿಲ್ಲ. ಹಲ್ಲೆಗೆರೆ ಶಂಕರ್ ಪತ್ನಿಯ ಕಿರಿಕಿರಿ. ಇಬ್ಬರು ಹೆಣ್ಣುಮಕ್ಕಳ ದಾಂಪತ್ಯ ಜೀವನದ ಬಿರುಕು ನೆಮ್ಮದಿ ಕದಡಿತ್ತು. ಶಂಕರ್ ತಮ್ಮ ಮೂವರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ರು. ಹೆಣ್ಣು ಮಕ್ಕಳಿಬ್ಬರನ್ನು ಐಎಎಸ್ ಕೋಚಿಂಗ್‍ಗೂ ಕಳುಹಿಸಿದ್ದರು. ಎಂಜಿನಿಯರ್ ಮಗನಿಗೆ ಬಾರ್ ಲೈಸೆನ್ಸ್ ಕೊಡಿಸಿದ್ರು. ಏನು ಕೊರತೆ ಆಗದಂತೆ ಶಂಕರ್ ನೋಡಿಕೊಂಡಿದ್ರು. ಆದರೂ ಪತ್ನಿ ಭಾರತಿ ಯಾರನ್ನೂ ನೆಮ್ಮದಿಯಾಗಿ ಇರಲು ಬಿಟ್ಟಿರಲಿಲ್ಲ. ಪರಿಣಾಮವೇ ಈ ಘನಘೋರ ದುರಂತ.
ಬ್ಯಾಡರಹಳ್ಳಿ ಠಾಣೆಗೆ ತಮ್ಮ ಕೌಟುಂಬಿಕ ಕಲಹದ ಬಗ್ಗೆ ಹಲ್ಲೆಗೆರೆ ಶಂಕರ್ ಏಳುಪುಟಗಳ ದೂರು ನೀಡಿದ್ದು, ಅದರಲ್ಲಿ ಎಲ್ಲವನ್ನು ಕೂಡ ಇಂಚಿಂಚಾಗಿ ವಿವರಿಸಿದ್ದಾರೆ. ನನ್ನ ಪತ್ನಿ ಭಾರತಿಯೇ ದುರಂತದ ಸೂತ್ರಧಾರಿ. ಆಸ್ತಿ, ಹಣ ಪತ್ನಿ, ಮಗನ ಹೆಸರಿನಲ್ಲಿತ್ತು. ಬೇಕಾದಾಗ ಕೇಳಿ ಪಡೆಯುತ್ತಿದ್ದೆ. ಇಬ್ಬರು ಹೆಣ್ಣು ಮಕ್ಕಳನ್ನು ಗಂಡನ ಮನೆಗೆ ಕಳುಹಿಸಲು ಭಾರತಿ ನಿಕಾರಿಸುತ್ತಿದ್ದು, ಗಲಾಟೆ ಮಾಡುತ್ತಿದ್ದಳು. ಒಮ್ಮೆ ಮಗಳನ್ನು ಬಚ್ಚಿಟ್ಟು ನನ್ನ ಬಳಿ ಪತ್ನಿ ನಾಟಕ, ಗಲಾಟೆ ಮಾಡಿದ್ದಳು.
ಬೀಗರನ್ನು ಹೆದರಿಸಲು ಕೈಕೊಯ್ದುಕೊಳ್ಳುವಂತೆ ಮಗಳಿಗೆ ಪ್ರೇರೇಪಿಸಿದ್ದಳು. ಹೆಣ್ಣುಮಕ್ಕಳ ಸಂಸಾರ ಸರಿ ಮಾಡಲು ನೋಡಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಳು. ಇಲ್ಲಸಲ್ಲದ ಮಾತನ್ನಾಡಿ ಮಗಳು ಸಿಂಧೂ ಪತಿಯನ್ನು ಮನೆಗೆ ಬರದಂತೆ ಮಾಡಿದ್ದಳು. ಅಲ್ಲದೆ ಸೆ.09ರಂದು ನಡೆಯಬೇಕಿದ್ದ ಸಿಂಧೂ ಮಗಳ ನಾಮಕರಣ ವಿಚಾರದಲ್ಲಿ ಗಲಾಟೆ ತೆಗೆದಿದ್ದರು.
ಕಿವಿ ಚುಚ್ಚುವ ವಿಚಾರದಲ್ಲಿ ಗಲಾಟೆ ಶುರುವಾಗಿತ್ತು. ಅದಾದ ಬಳಿಕ ಮಗನ ಹೆಸರಲ್ಲಿ ಬಾರ್ ಓಪನ್ ಮಾಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ, ಜಗಳವಾಗಿತ್ತು. ವೈರಾಗ್ಯದಿಂದ 10 ಲಕ್ಷಕ್ಕೆ ಬೇಡಿಕೆಯಿಟ್ಟು ಆಶ್ರಮ ಸೇರಲು ನಿರ್ಧಾರ ಮಾಡಿದ್ದೆ. ಆಗ ಹಣ ಕೊಡಲ್ಲ ಎಂದು ಪತ್ನಿ ಹಾಗೂ ಮಗ ಗಲಾಟೆ ಮಾಡಿದ್ದರು. ಇದನ್ನೂ ಓದಿ: ಬೋರ್ವೆಲ್ಗೆ ಬಿದ್ದ ಎರಡೂವರೆ ವರ್ಷದ ಮಗು ಶವವಾಗಿ ಪತ್ತೆ
ಇದರಿಂದ ಬೇಸರಗೊಂಡು ಭಾನುವಾರ ಮನೆಬಿಟ್ಟಿದ್ದೆ. ಅದೇ ದಿನ ಸಂಜೆ ಹಣ ಕೊಡ್ತೀನಿ ಬನ್ನಿ ಎಂದು ಮಗ ವಾಟ್ಸಪ್ ಸಂದೇಶ ಕಳುಹಿಸಿದ್ದನು. ಆದರೆ ನಾನು ಅದಕ್ಕೆ ಸ್ಪಂದಿಸಿಲ್ಲ. ಮೊನ್ನೆ ಮನೆ ಬಳಿ ಬಂದಿದ್ದಾಗ ಬೀಗ ಹಾಕಿದ್ದು ನೋಡಿ ಗೆಳೆಯನ ಮನೆಯಲ್ಲಿ ಉಳಿದಿದ್ದೆ. ನಿನ್ನೆ ಸಂಜೆ ಅನುಮಾನ ಬಂದು ಮನೆ ಬಳಿ ಬಂದು ಪರಿಶೀಲನೆ ನಡೆಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಶಂಕರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಹಲ್ಲೆಗೆರೆ ಶಂಕರ್ ಮನೆಯಲ್ಲಿ ಭಾನುವಾರ ಜಗಳ ನಡೆದಿದ್ದು, ಸೋಮವಾರ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಒಬ್ಬೊಬ್ಬರು ಒಂದೊಂದು ರೂಮಿನಲ್ಲಿ ನೇಣಿಗೆ ಶರಣಾಗಿದ್ದಾರೆ. 9 ತಿಂಗಳ ಕಂದಮ್ಮ ಹಸಿವಿನಿಂದ ಸಾವನ್ನಪ್ಪಿದೆ. ತಾಯಿ, ಅಕ್ಕಂದಿರು ಹಾಗೂ 9 ತಿಂಗಳ ಮಗುವಿನ ಶವದ ಮಧ್ಯೆ ಎರಡು ದಿನವಿದ್ದ ಮಧುಸಾಗರ್, ಬುಧವಾರ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಒಂದೇ ಕುಟುಂಬದ ಐವರು ಸಾವು ಪ್ರಕರಣ- ಐದು ದಿನ ಅನ್ನ, ನೀರಿಲ್ಲದೆ ಬದುಕುಳಿದ ಎರಡೂವರೆ ವರ್ಷದ ಕಂದಮ್ಮ
ಮಧುಸಾಗರ್ ನೇಣಿಗೆ ಶರಣಾಗುವ ಮುನ್ನ, ಬದುಕುಳಿದ ಎರಡೂವರೆ ವರ್ಷದ ಪ್ರೇಕ್ಷಾಗೆ ಬೇಕಾದ ಆಹಾರ, ಬಿಸ್ಕೆಟ್‍ಗಳನ್ನು ಪಕ್ಕದಲ್ಲೇ ಇಟ್ಟಿದ್ದ ಎಂದು ತಿಳಿದುಬಂದಿದೆ. ಸಾಮೂಹಿಕ ಆತ್ಮಹತ್ಯೆ ಪೂರ್ವನಿಯೋಜಿತ ಎನ್ನಲಾಗುತ್ತಿದೆ. ನಿನ್ನೆ ಸಂಜೆ ಶಂಕರ್ ಪೊಲೀಸರ ನೆರವಿನಿಂದ ಬಾಗಿಲು ಒಡೆದು ಮನೆ ಒಳಗೆ ಹೋದಾಗ, ಅಲ್ಲಿನ ಪರಿಸ್ಥಿತಿಯನ್ನು ನೋಡಿ ಶಾಕ್ ಆಗಿದ್ದರು. ಎಲ್ಲರೂ ಸತ್ತು ಹೋಗಿದ್ದಾರೆ ಎಂದು ಭಾವಿಸಿದ್ರು. ಆದರೆ ಪೊಲೀಸರು ಪ್ರೇಕ್ಷಾ ಉಸಿರಾಡ್ತಿರೋದನ್ನು ಗಮನಿಸಿದ್ರು. ಕೂಡಲೇ ಮೊಮ್ಮಗಳನ್ನು ಎತ್ತಿಕೊಂಡು ಹೊರಗೆ ಓಡಿದ ಶಂಕರ್, ಯಾರಾದ್ರೂ ನೀರು ಕೊಡಿ ಎಂದು ಕೂಗಿಕೊಂಡಿದ್ರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಒಂದೇ ಕುಟುಂಬದ ಐವರು ಸಾವು- ಆತ್ಮಹತ್ಯೆಗೂ ಮುನ್ನ ಪುಟ್ಟ ಕಂದಮ್ಮನ ಕೊಂದ್ರು!
ಅತ್ತ ಸಿಂಧೂರಾಣಿ ಪತಿ ಶ್ರೀಕಾಂತ್, ತಮ್ಮ ಮಗಳನ್ನು ನೋಡಲು ಹಾತೊರೆಯುತ್ತಿದ್ರು. ಗಂಡ-ಹೆಂಡ್ತಿ ನಡುವೆ ಗಲಾಟೆ ಇದ್ರೂ ವೀಡಿಯೋ ಕಾಲ್ ಮೂಲಕ ಮಗಳನ್ನು ಗಂಡನಿಗೆ ಸಿಂಧೂರಾಣಿ ತೋರಿಸ್ತಿದ್ರು. ಆದರೆ ಸೋಮವಾರದಿಂದ ಕರೆ ಸ್ವೀಕರಿಸಿರಲಿಲ್ಲ. ಹೀಗಾಗಿ ಅಂದು ಸಂಜೆ ಮನೆ ಬಳಿ ಬಂದಿದ್ರು. ಮನೆ ಬಾಗಿಲು ಹಾಕಿದ್ದು ನೋಡಿ ವಾಪಸ್ಸಾಗಿದ್ರು ಎನ್ನಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಮರಣೋತ್ತರ ಪರೀಕ್ಷೆ ನಡೆದು, ಸಂಜೆ ಸುಮ್ಮನಹಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು. ಇದನ್ನೂ ಓದಿ: ಭಾನುವಾರ ಮನೆ ಬಿಟ್ಟಿದ್ದ ಮನೆ ಯಜಮಾನ ನಿನ್ನೆ ವಾಪಸ್ ಬಂದಾಗ ಕಂಡಿದ್ದು ಐವರ ಮೃತದೇಹ
ಸಾಮೂಹಿಕ ಆತ್ಮಹತ್ಯೆಗೆ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಹಲ್ಲೆಗೆರೆ ಶಂಕರ್ ಮತ್ತು ಇಬ್ಬರು ಅಳಿಯಂದಿರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಡೆತ್ ನೋಟ್ ಏನಾದ್ರೂ ಇದ್ಯಾ ಎಂದು ಪೊಲೀಸರು ಮನೆಯಲ್ಲಿ ಶೋಧ ನಡೆಸಿದ್ದಾರೆ. ಈ ವೇಳೆ ಮಧುಸಾಗರ್ ಡೈರಿ ಸಿಕ್ಕಿದ್ದು, ಅದ್ರಲ್ಲಿ ತಂದೆಯ ಬಗ್ಗೆ ಇರುವ ಮಾಹಿತಿ ಪರಿಶೀಲಿಸಿದ್ದಾರೆ. ಮನೆಯ ಒಳಗಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆಯನ್ನು ನಡೆಸಿದ್ದಾರೆ. ಶಂಕರ್ ಮನೆಯ ಕೆಲಸದಾಕೆ ಭಾನುವಾರದಿಂದ ಮನೆ ಕಡೆ ಸುಳಿದಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.