2018 ಅಕ್ಟೋಬರ್ 31 ಭಾರತ ಇತಿಹಾಸದಲ್ಲಿ ಐತಿಹಾಸಿಕ ದಿನ. ದೇಶದ ಏಕತೆಗೆ ಶ್ರಮಿಸಿದ, ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಉದ್ದದ ಉಕ್ಕಿನ ಪ್ರತಿಮೆ ಅನಾವರಣಗೊಳ್ಳಲಿದೆ. ಈ ಮೂಲಕ ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಟೇಲರ `ಏಕತಾ ಪ್ರತಿಮೆ’ ಪಾತ್ರವಾಗಲಿದೆ. ವಲ್ಲಭಭಾಯ್ ಅವರ ಪೂರ್ಣ ಪ್ರತಿಮೆ ಇದಾಗಿದ್ದು ಧೋತಿ ಮತ್ತು ಜುಬ್ಬ ತೊಟ್ಟ ಸ್ಯಾಂಡಲ್ ಚಪ್ಪಲಿ ಧರಿಸಿರುವ ಪಟೇಲ್ ರ ಸರಳ ವ್ಯಕ್ತಿತ್ವವನ್ನು ಕಾಣಬಹುದು. ವಿಶ್ವ ಮಟ್ಟದಲ್ಲಿ ಭಾರತದ ಹೆಗ್ಗಳಿಕೆಗೆ ಪಾತ್ರವಾಗಲಿರುವ ಹಿನ್ನೆಲೆಯಲ್ಲಿ ಈ ಪ್ರತಿಮೆ ಕುರಿತ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
Advertisement
ಗುಜರಾತಿನಲ್ಲಿ ಎಲ್ಲಿದೆ?
ಅಹಮದಾಬಾದ್ ನಿಂದ 200 ಕಿ.ಮೀ ದೂರದಲ್ಲಿರುವ ಸರ್ದಾರ್ ಸರೋವರ ಆಣೆಕಟ್ಟಿನ ಬಳಿ ಪ್ರತಿಮೆ ತಲೆ ಎತ್ತಿದೆ. ನರ್ಮದಾ ಜಿಲ್ಲೆಯ ನರ್ಮದಾ ಡ್ಯಾಮ್‍ನಿಂದ 3.2 ಕಿ.ಮೀ ದೂರದಲ್ಲಿರುವ ‘ಸಾಧು ಬೆಟ್’ ದ್ವೀಪದಲ್ಲಿ ಯೋಜನಾ ಸ್ಥಳವಿದೆ. ಅಕ್ಟೋಬರ್ 31 ರಂದು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ಆಚರಣೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 182 ಅಡಿ ಎತ್ತರದ ಏಕತಾ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ.
Advertisement
Advertisement
ಯೋಜನೆ ಆರಂಭಗೊಂಡಿದ್ದು ಹೇಗೆ?
2010 ರಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗುಜರಾತ್ ರಾಜ್ಯವನ್ನು ಅಭಿವೃದ್ಧಿ ಪಡಿಸಲು ಈ ಯೋಜನೆಯನ್ನು ಘೋಷಿಸಿದ್ದರು. 2013 ರಲ್ಲಿ ಯೋಜನೆ ನಿರ್ಮಾಣ ಶಂಕುಸ್ಥಾಪನೆ ನಡೆಸಿ ಕಾಮಗಾರಿಯನ್ನು ಆರಂಭಿಸಲಾಯಿತು. 2015 ರಲ್ಲಿ ಹೈಡ್ರಲಾಜಿಕಲ್ ಸಮೀಕ್ಷೆ, ಸುರಂಗ ಪರೀಕ್ಷೆ, ನೆರಳು ಬೆಳಕಿನ ಅಧ್ಯಯನಗಳನ್ನು ಪೂರ್ಣಗೊಳಿಸಿದ ಎಲ್ ಆಂಡ್ ಟಿ ಸಂಸ್ಥೆಯೂ ಈ ಬೃಹತ್ ಯೋಜನೆ ಉಸ್ತುವಾರಿಯನ್ನು ಹೊತ್ತುಕೊಂಡು ಈಗ ಸಂಪೂರ್ಣ ಮಾಡಿದೆ. 182 ಮೀಟರ್ ಎತ್ತರ ಈ ಪ್ರತಿಮೆಗೆ 25 ಸಾವಿರ ಟನ್ ಉಕ್ಕು, 90 ಸಾವಿರ ಟನ್ ಸಿಮೆಂಟ್, ಸುಮಾರು ಏಳು ಕಿಲೋಮೀಟರ್ ತ್ರಿಜ್ಯದಿಂದ ಕಾಣುವ ಹಾಗೇ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ವಿಶೇಷವಾಗಿ ಈ ಪ್ರತಿಮೆ ನಿರ್ಮಾಣಕ್ಕೆ ದೇಶದ ಹಲವು ಕಡೆಯಿಂದ ಕಬ್ಬಿಣವನ್ನು ಸಂಗ್ರಹಿಸಲಾಗಿತ್ತು.
Advertisement
ಎಷ್ಟು ಖರ್ಚಾಗಿದೆ?
ವಿಶ್ವದ ಉತ್ಕೃಷ್ಟ ತಂತ್ರಜ್ಞಾನ ಮತ್ತು ವಾಸ್ತುಶಿಲ್ಪವನ್ನು ಏಕತಾ ಮೂರ್ತಿ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. 2,989 ಕೋಟಿ ರೂ. ವೆಚ್ಚದಲ್ಲಿ ಉಕ್ಕಿನಷ್ಟೇ ಗಟ್ಟಿಯಾಗಿ ಪ್ರತಿಮೆ ನಿರ್ಮಿಸಲಾಗಿದೆ. ಪಿಪಿಪಿ ಮಾದರಿಯಲ್ಲಿ ಈ ಯೋಜನೆ ಪೂರ್ಣಗೊಂಡಿದ್ದು 2012-13ರ ಬಜೆಟ್ ನಲ್ಲಿ 100 ಕೋಟಿ, 2014-15ರ ಬಜೆಟ್ ನಲ್ಲಿ 500 ಕೋಟಿ ಹಣವನ್ನು ಗುಜರಾತ್ ಸರ್ಕಾರ ನೀಡಿದ್ದರೆ, 200 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರ 2014-15ರ ಬಜೆಟ್ ನಲ್ಲಿ ನೀಡಿತ್ತು.
ಏನೆಲ್ಲ ವಿಶೇಷತೆಯಿದೆ?
ಪ್ರತಿಮೆಯಲ್ಲೇ ಎರಡು ಲಿಫ್ಟ್ ಗಳಿವೆ. ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರವಾಸಿಗರ ವಸತಿಗಾಗಿ 52 ರೂಂಗಳಿರುವ ಶ್ರೇಷ್ಠ ಭಾರತ ಹೆಸರಿನ ತ್ರಿಸ್ಟಾರ್ ಲಾಡ್ಜ್ ನಿರ್ಮಿಸಿದೆ. ಸೆಲ್ಫಿ ಪಾಯಿಂಟ್, ರೆಸ್ಟೋರೆಂಟ್‍ಗಳು, ಫೆರ್ರಿ ಸೇವೆ, ಬೋಟಿಂಗ್ ಸೌಕರ್ಯವಿದೆ. 250 ಟೆಂಟ್‍ಗಳಿರುವ ‘ಟೆಂಟ್ ಸಿಟಿ’, 306 ಮೀಟರ್ ಉದ್ದದ ಮಾರ್ಬಲ್ ಫ್ಲೋರಿಂಗ್ ವಾಕ್‍ವೇ, ವೀಕ್ಷಣಾ ಗ್ಯಾಲರಿಯೂ ಇರಲಿದೆ. ಪಟೇಲರಿಗೆ ಸಂಬಂಧಿಸಿದ ಮ್ಯೂಸಿಯಂ. ಆಡಿಯೊ-ವಿಡಿಯೊ ಗ್ಯಾಲರಿ, ಸಂಶೋಧನಾ ಕೇಂದ್ರವನ್ನು ತೆರೆಯಲಾಗಿದೆ. ನಾಲ್ಕು ಹಂತದಲ್ಲಿ ಕಾಮಗಾರಿ ಮಾಡಲಾಗಿದ್ದು ತ್ರೀಡಿ ತಂತ್ರಜ್ಞಾನದ ಮೂಲಕ ಪಟೇಲರ ಚಿತ್ರಗಳನ್ನು ಸೃಷ್ಟಿಸಿ ಅವರ ಸಾಧನೆಗಳನ್ನು ಪ್ರವಾಸಿಗರಿಗೆ ತಿಳಿಸುವ ಪ್ರೊಗ್ರಾಮ್ ಫಿಕ್ಸ್ ಮಾಡಲಾಗಿದೆ.
ಪ್ರತಿಮೆ ಎಷ್ಟು ಬಲಶಾಲಿಯಾಗಿದೆ?
ವಿಶ್ವದ ಅತಿದೊಡ್ಡ ಪ್ರತಿಮೆಯಾದ ಹಿನ್ನೆಲೆ ಸಾಕಷ್ಟು ಜಾಗರುಕತೆಯಿಂದ ಕಾಮಗಾರಿ ಮಾಡಲಾಗಿದೆ. ಬಿರುಗಾಳಿ ಮತ್ತು ಭೂಕಂಪದ ಸವಾಲುಗಳನ್ನು ಎದುರಿಸುವ ಸಲುವಾಗಿ ಪ್ರತಿಮೆ ಕೆಳಭಾಗವನ್ನು ವಿಶಾಲವಾಗಿ ನಿರ್ಮಿಸಿದೆ. ರಿಕ್ಟರ್ ಮಾಪಕದಲ್ಲಿ 6.5 ಕಂಪನದ ತೀವ್ರತೆಯಲ್ಲಿ ಹದಿನೈದು ಕಿಮೀ ಸುತ್ತಳತೆಯಲ್ಲಿ ಭೂಕಂಪನವಾದರೂ ಪ್ರತಿಮೆಗೆ ಯಾವುದೇ ಧಕ್ಕೆಯೂ ಆಗುವುದಿಲ್ಲ, ಗಂಟೆಗೆ 220 ಕಿ.ಮೀ ಗಾಳಿ ಬೀಸಿದರೂ ಪ್ರತಿಮೆ ಒಂಚೂರು ಅಲುಗಾಡದಷ್ಟು ಭದ್ರವಾಗಿದ್ದು, ಮಳೆ ಗುಡುಗು ಸಿಡಿಲಿನಿಂದ ಹಾನಿಯಾಗದಂತೆ ರೇಡಿಯೋ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ.
182 ಮೀಟರ್ ಎತ್ತರ ಯಾಕೆ?
ಗುಜರಾತ್ ನಲ್ಲಿ 182 ವಿಧಾನಸಭೆ ಕ್ಷೇತ್ರಗಳಿರುವ ಕಾರಣ ಎತ್ತರವನ್ನು 182 ಅಡಿಗೆ ನಿಗಧಿಪಡಿಸಲಾಗಿದೆ. ನ್ಯೂಯಾರ್ಕ್ ನ ನದಿ ತೀರದಲ್ಲಿರುವ ಲಿಬರ್ಟಿ ಪ್ರತಿಮೆಗಿಂತ 93 ಮೀಟರ್ ಎತ್ತರವಿದೆ ಪಟೇಲರ ಪ್ರತಿಮೆ. 7 ಕಿ.ಮೀ ದೂರದಿಂದಲೇ ಈ ಪ್ರತಿಮೆಯನ್ನು ವೀಕ್ಷಿಸಬಹುದಾಗಿದೆ.
ವಿವಾದ ಕೇಳಿ ಬಂದಿತ್ತು:
ಈ ಯೋಜನೆಯಲ್ಲಿ ಸಾವಿರಾರು ಕಾರ್ಮಿಕರು ಬಂದಿದ್ದು ಸುಮಾರು 200 ಜನರು ಚೀನಾದವರು ಎಂಬುದು ವಿವಾದಕ್ಕೆ ಕಾರಣವಾಗಿತ್ತು. ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡಿದ ಮೋದಿ ಚೀನಿಗಳಿಗೆ ಮಣೆ ಹಾಕಿದ್ದು ಸರಿಯಲ್ಲ ಎಂಬ ಮಾತುಗಳು ಸಹ ಕೇಳಿ ಬಂದಿತ್ತು. ಪ್ರತಿಮೆ ಸುತ್ತಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಭೂಮಿ ಒತ್ತುವರಿ ಸಂಬಂಧ ಜನರು ವಿರೋಧವನ್ನು ವ್ಯಕ್ತಪಡಿಸಿದ್ದರು. ಪರಿಸರ ಸಚಿವಾಲಯದ ಅನುಮತಿ ಪಡೆಯದೇ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಪರಿಸರ ಹೋರಾಟಗಾರರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಕೇವಾಡಿಯ, ಕೋಟಿ, ವಾಘೋಡಿಯಾ, ಲಂಬ್ಡಿ ಹಳ್ಳಿಗಳ ಜನರು ಇನ್ನು ಸರ್ಕಾರದ ಪರಿಹಾರ ಸಿಗದ ಹಿನ್ನಲೆಯಲ್ಲಿ ಸರ್ದಾರ್ ಸರೋವರ ಆಣೆಕಟ್ಟು ನಿರ್ಮಾಣಕ್ಕೆ ವಶಪಡಿಸಿಕೊಂಡ 927 ಎಕರೆ ಜಮೀನು ಮರಳಿ ನೀಡುವಂತೆ ಒತ್ತಾಯಿಸಿದ್ರು.
ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನವಾದ ಅಕ್ಟೋಬರ್ 31 ದಿನವನ್ನು `ಏಕತಾ ದಿನ’ ವನ್ನಾಗಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಅದರೆ, ಅಂದೇ ‘ಉಕ್ಕಿನ ಮಹಿಳೆ’ ಇಂದಿರಾ ಗಾಂಧೀ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಪಟೇಲ್‍ರ ಸಂಭ್ರಮ ಏಕತಾ ದಿವಸ್ ಆಚರಣೆಗೆ ಕಾಂಗ್ರೆಸ್ಸಿಗರು ಮೋದಿ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಸರ್ದಾರ್ ಪಟೇಲ್ ಯಾರು?
ಗುಜರಾತಿನ ಕರಮ್ ಸಂದ್ ನಲ್ಲಿ 1875ರ ಅಕ್ಟೋಬರ್ 31ರಂದು ಜನಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ಸ್ವಾತಂತ್ರ್ಯ ಭಾರತದ ಬಳಿಕ ಮೊದಲ ಗೃಹ ಸಚಿವರಾಗಿದ್ದವರು. ಕಾನೂನು ಪದವಿ ಪಡೆದಿದ್ದ ಅವರು ಗಾಂಧೀಜಿ ಅವರ ಕರೆಗೆ ಓಗೊಟ್ಟು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಧುಮುಕಿ ಸ್ವತಂತ್ರ ಭಾರತಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು. ಸ್ವಾತಂತ್ರ್ಯದ ಬಳಿಕ ರಾಜ್ಯಗಳ ಪುನರ್ ವಿಂಗಡನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸುಮಾರು 500ಕ್ಕೂ ಅಧಿಕ ರಾಜಮನೆತನ ಅಡಿಯಲ್ಲಿದ್ದ ರಾಜ್ಯಗಳನ್ನು ನೆಹರೂ ಸರ್ಕಾರದ ಸುಪರ್ದಿಗೆ ತಂದರು. ಇದಲ್ಲದೆ ಗುಜರಾತಿನ ಖೇದ, ಬೊರ್ಸದ್, ಬಾರ್ಡೋಲಿಗಳಲ್ಲಿ ರೈತರ ಪರ ಹೋರಾಟದಲ್ಲೂ ಪಟೇಲ್ ಅವರು ಪಾಲ್ಗೊಂಡಿದ್ದರು.
ರಾಷ್ಟ್ರೀಯ ಏಕತಾ ದಿವಸ ಏಕೆ?
ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತಿಗಳಿಸಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕುರಿತಾದ ಮಾಹಿತಿ, ಇತಿಹಾಸದ ಬಗ್ಗೆ ಹೆಚ್ಚಿನ ವಿವರ ನೀಡಲಾಗಿಲ್ಲ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪಟೇಲ್ ಅವರಿಂದ ಬಿಗಿಕ್ರಮಗಳ ಬರದೇ ಹೋಗಿದ್ದರೆ ದೇಶ ಇನ್ನಷ್ಟು ದುರ್ಬಲವಾಗುತ್ತಿತ್ತು. ದೇಶದ ಸಮಗ್ರತೆ, ಐಕ್ಯತೆಯನ್ನು ಕಾಯ್ದುಕೊಳ್ಳುವಲ್ಲಿ ಅಂದಿನ ಗೃಹ ಸಚಿವರಾಗಿದ್ದ ಪಟೇಲರು ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು ಇಂದು ಸದೃಢ ಭಾರತವನ್ನು ಕಟ್ಟಿವೆ. ದೇಶದ ಏಕತೆಗಾಗಿ ಸರ್ಧಾರ್ ಪಟೇಲ್ ಅವರು ನಡೆಸಿದ ಹೋರಾಟ ಮತ್ತು ಅವರ ಸಂದೇಶವನ್ನು ಸಾರುವುದು ಈ ದಿನಾಚರಣೆಯ ಉದ್ದೇಶ. ಈ ನಿಟ್ಟಿನಲ್ಲಿ ಪಟೇಲ್ ಅವರಿಗೆ ಸೂಕ್ತ ಗೌರವ ನೀಡಲು ಅವರ ಜನ್ಮದಿನವನ್ನು `ರಾಷ್ಟ್ರೀಯ ಏಕತಾ ದಿನ’ವನ್ನಾಗಿ ಆಚರಿಸಲು ಪ್ರಧಾನಿ ಮೋದಿ ಸರ್ಕಾರ ನಿರ್ಧರಿಸಿದೆ.
ಏಕತಾ ದಿವಸ ಆಚರಣೆ ಹೇಗೆ?
ಬುಧವಾರದಂದು ಮೋದಿಯವರು ಸಾರ್ವಜನಿಕ ಭಾಷಣಗಳನ್ನ ಮಾಡುವುದರ ಜೊತೆಗೆ ರೇಡಿಯೋದಲ್ಲೂ ಭಾಷಣ ಮಾಡಲಿದ್ದಾರೆ. ಅಂದು ಸಂಜೆ ಪೊಲೀಸ್ ಪೆರೇಡನ್ನೂ ಹಮ್ಮಿಕೊಳ್ಳಲಾಗುತ್ತದೆ. ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿ ಏಕತಾ ಮ್ಯಾರಥಾನ್ ನಡೆಸಲಾಗುತ್ತದೆ, ಎನ್ ಸಿಸಿ, ಹೋಮ್ ಗಾರ್ಡ್, ಗೃಹರಕ್ಷಕ ದಳ ಮುಂತಾದ ಪಡೆಗಳ ಪಥ ಸಂಚಲನ ಕೂಡಾ ಇರುತ್ತದೆ. ಇದರಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಿರಿಯ ರಾಜಕೀಯ ನಾಯಕರು ಪಾಲ್ಗೊಳ್ಳಲಿದ್ದಾರೆ.
– ಶಬ್ಬೀರ್ ನಿಡಗುಂದಿ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv