– ಸಾಮಗ್ರಿ ದುಬಾರಿ ಎಂದು ಇಡ್ಲಿ ಬೆಲೆ ಏರಿಕೆ ಮಾಡಲ್ಲ
– ಇಳಿ ವಯಸ್ಸಲ್ಲೂ ಮಾನವೀಯತೆ ಮೆರೆಯುತ್ತಿರುವ ಅಜ್ಜಿ
ಚೆನ್ನೈ: ಲಾಕ್‍ಡೌನ್‍ನಲ್ಲಿ ಅಡುಗೆ ಸಾಮಗ್ರಿ ಬೆಲೆ, ದಿನ ಬಳಿಕೆಯ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ. ಹಲವರು ಇದೇ ಒಳ್ಳೆಯ ಅವಕಾಶ ದುಬಾರಿ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಿ ಹಣ ಮಾಡೋಣ ಅಂತ ಪ್ಲಾನ್ ಹಾಕಿ, ಹಣ ಗಳಿಸುತ್ತಿದ್ದಾರೆ. ಆದರೆ ತಮಿಳುನಾಡಿನ ವಡಿವೇಲಪಾಲ್ಯಂ ಗ್ರಾಮದಲ್ಲಿನ ‘ಇಡ್ಲಿ ಪಾಟಿ'(ಇಡ್ಲಿ ಅಜ್ಜಿ) ಎಂದೇ ಖ್ಯಾತಿಗಳಿಸಿರುವ 85 ವರ್ಷದ ವೃದ್ಧೆ ಕಮಲಥಾಲ್ ಅವರು ಲಾಕ್‍ಡೌನ್‍ನಲ್ಲಿಯೂ ಕೇವಲ 1 ರೂಪಾಯಿಗೇ ಇಡ್ಲಿ ಮಾರಾಟ ಮಾಡುತ್ತಿದ್ದಾರೆ. ಸಾಮಗ್ರಿ ಬೆಲೆ ದುಬಾರಿಯಾದರೂ ಬಡವರ ಹಸಿವು ನೀಗಿಸಲು ಕೇವಲ 1 ರೂಪಾಯಿಗೆ ಇಡ್ಲಿ ಮಾರಾಟ ಮಾಡುತ್ತಾ ಮಾನವೀಯತೆ ಮೆರೆದಿದ್ದಾರೆ.
Advertisement
ವಡಿವೇಲಪಾಲ್ಯಂ ಗ್ರಾಮದ ನಿವಾಸಿ ಕಮಲಥಾಲ್ ಅವರು ಕಳೆದ 30 ವರ್ಷದಿಂದ ಇಡ್ಲಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಪ್ರತಿನಿತ್ಯ ಬೆಳಗ್ಗೆ ತಮ್ಮ ಅಂಗಡಿ ಬಾಗಿಲು ತೆಗೆದು, ಸ್ವಾದಿಷ್ಟ ಮತ್ತು ರುಚಿಯಾದ ಸಾಂಬಾರ್, ಚಟ್ನಿ ಜೊತೆಗೆ ಕೇವಲ 1 ರೂಪಾಯಿ ಬೆಲೆಗೆ ಇಡ್ಲಿ ಮಾರಾಟ ಮಾಡುತ್ತಾರೆ. ಇದನ್ನೂ ಓದಿ: ಬಡವರಿಗಾಗಿ ಕೇವಲ 1 ರೂಪಾಯಿಗೆ ಇಡ್ಲಿ ಮಾರುತ್ತಿದ್ದಾರೆ 80ರ ವೃದ್ಧೆ
Advertisement
ಲಾಕ್‍ಡೌನ್ ಅವಧಿಯಲ್ಲಿ ಅಡುಗೆ ಸಾಮಗ್ರಿ ಬೆಲೆ ಏರಿಕೆಯಾಗಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಬಡವರಿಗೆ ಹೆಚ್ಚು ಹಣ ಕೊಟ್ಟು ಆಹಾರ ಪಡೆಯಲು ಕಷ್ಟವಾಗುತ್ತದೆ. ಸಾಮಗ್ರಿ ಬೆಲೆ ಹೆಚ್ಚಾದರೂ ನಾನು ಒಂದು ಇಡ್ಲಿಗೆ 1 ರೂಪಾಯಿ ತೆಗೆದುಕೊಳ್ಳುತ್ತೇನೆ. ಲಾಭಕ್ಕಾಗಿ ನಾನು ಈ ಕೆಲಸ ಮಾಡುತ್ತಿಲ್ಲ. ಬಡವರಿಗೆ, ಹಸಿದವರಿಗೆ ಆಹಾರ ನೀಡಬೇಕು ಎನ್ನುವುದು ನನ್ನ ಆಶಯ ಎಂದು ಅಜ್ಜಿ ಹೇಳಿಕೊಂಡಿದ್ದಾರೆ.
Advertisement
Advertisement
ಸಾಮಗ್ರಿ ಬೆಲೆಯೆಲ್ಲಾ ದುಬಾರಿಯಾಗಿದೆ. ಇಡ್ಲಿ ತಯಾರಿಸಲು ಕಷ್ಟವಾಗುತ್ತಿದೆ. ಆದರೆ ಕೆಲವರು ನನಗೆ ದಿನಸಿ ಸಾಮಗ್ರಿ, ತರಕಾರಿಗಳನ್ನು ತಂದುಕೊಟ್ಟು ಸಹಾಯ ಮಾಡುತ್ತಿದ್ದಾರೆ. ಉದ್ದಿನ ಬೇಳೆ ಬೆಲೆ ಕೆಜಿಗೆ 100 ರೂಪಾಯಿಂದ 150 ರೂಪಾಯಿ ಆಗಿದೆ. ಮೆಣಸು ಕೆಜಿಗೆ 150 ರೂಪಾಯಿಂದ 200 ರೂಪಾಯಿ ಆಗಿದೆ. ಆದರೂ ನಾನು ಇಡ್ಲಿ ಬೆಲೆ ಏರಿಕೆ ಮಾಡಲ್ಲ. ಹೇಗೋ ಈ ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದೇನೆ ಎಂದು ಅಜ್ಜಿ ತಿಳಿಸಿದ್ದಾರೆ.
ಸದ್ಯ ಅಜ್ಜಿ ದಿನಕ್ಕೆ 300ಕ್ಕೂ ಹೆಚ್ಚು ಮಂದಿಗೆ ಆಹಾರ ನೀಡುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಂಡು ಗ್ರಾಹಕರಿಗೆ ಇಡ್ಲಿ ಪಾರ್ಸಲ್ ನೀಡುತ್ತಿದ್ದಾರೆ. ಬೇರೆ ಬೇರೆ ಪ್ರದೇಶಗಳಿಂದ ಬಂದ ಜನರು ಲಾಕ್‍ಡೌನ್‍ನಿಂದ ಇಲ್ಲೇ ಸಿಲುಕಿಕೊಂಡಿದ್ದಾರೆ. ಲಾಕ್‍ಡೌನ್‍ನಿಂದ ಸಾಕಷ್ಟು ಮಂದಿ ಸಂಕಷ್ಟದಲ್ಲಿದ್ದಾರೆ. ಅವರಿಗೆ ತನ್ನಿಂದ ಸಹಾಯವಾಗಲಿ ಎಂದು ಅಜ್ಜಿ ಇಂದಿಗೂ 1 ರೂಪಾಯಿಗೆ ಇಡ್ಲಿ ಮಾರುತ್ತಾ ಮನವೀಯತೆ ಮೆರೆದಿದ್ದಾರೆ.