ಬ್ಯಾಂಕಾಕ್: ಚಾಕು ಹಿಡಿದು ಠಾಣೆಯೊಳಗೆ ನುಗ್ಗಿದ್ದ ವ್ಯಕ್ತಿಯನ್ನು ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಮೃದು ಮಾತುಗಳಿಂದ ಮನವೊಲಿಸುವ ಮೂಲಕ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದಾರೆ.
ಬ್ಯಾಂಕಾಕ್‍ನ ಹೂಯೆ ಕ್ವಾಂಗ್ ಪೊಲೀಸ್ ಠಾಣೆಯಲ್ಲಿ ಅಧಿಕಾರಿ ಅನಿರತ್ ಮಾಲೀ ಎಂಬವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಚಾಕು ಹಿಡಿದು ಠಾಣೆಗೆ ನುಗ್ಗಿದ್ದಾನೆ. ಸ್ಥಳದಲ್ಲಿದ್ದ ಅನಿರತ್ ವ್ಯಕ್ತಿಯನ್ನು ಅತ್ಯಂತ ತಾಳ್ಮೆಯಿಂದ ಮೃದು ಮಾತುಗಳಿಂದ ಮಾತನಾಡಿಸಿದ್ದಾರೆ. ಅವರು ಏನು ಮಾತನಾಡುತ್ತಿದ್ದಾರೆ ಎಂಬುದು ವಿಡಿಯೋದಿಂದ ತಿಳಿಯದಿದ್ದರೂ ಕೊನೆಗೆ ವ್ಯಕ್ತಿ ಚಾಕುವನ್ನ ಪೊಲೀಸರ ಕೈಗೆ ನೀಡೋದನ್ನ ಕಾಣಬಹುದು. ಪೊಲೀಸ್ ಅಧಿಕಾರಿಯೂ ಕೂಡ ಆ ವ್ಯಕ್ತಿಯನ್ನು ಬಂಧನಕ್ಕೊಳಪಡಿಸದೆ, ಚಾಕುವನ್ನ ಪಕ್ಕಕ್ಕೆಸೆದು ಆತನನ್ನ ತಬ್ಬಿಕೊಂಡು ಸಮಾಧಾನಪಡಿಸಿದ್ದಾರೆ. ನಂತರ ಅಲ್ಲೇ ಇದ್ದ ಚೇರ್ ಮೇಲೆ ಕೂರಿಸಿದ್ದಾರೆ.
ಠಾಣೆಗೆ ನುಗ್ಗಿದ ವ್ಯಕ್ತಿ ಓರ್ವ ಸಂಗೀತಗಾರನಾಗಿದ್ದು, ವೃತ್ತಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೆ ಕಳೆದ ಮೂರು ದಿನಗಳಿಂದ ಆತನಿಗೆ ಸಂಬಳವಾಗಿರಲಿಲ್ಲ. ಜೊತೆಗೆ ತನ್ನ ಗಿಟಾರ್ ಕೂಡ ಕಳೆದುಕೊಂಡು ಆತಂಕದಲ್ಲಿದ್ದ ಎನ್ನಲಾಗಿದೆ.
ಅನಿರತ್ ಆ ವ್ಯಕ್ತಿಗೆ ತಮ್ಮಲ್ಲಿರುವ ಗಿಟಾರ್ ಕೊಡುವುದಾಗಿ ಹೇಳಿ, ಇಬ್ಬರೂ ಒಟ್ಟಿಗೆ ಹೊರಗಡೆ ಊಟಕ್ಕೆ ಹೋಗೋಣವೆಂದು ಹೇಳಿದ್ದಾಗಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಸಮಾಧಾನಗೊಂಡ ವ್ಯಕ್ತಿಯನ್ನು ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
https://www.youtube.com/watch?v=SdTDKRTkXuM