ಮಡಿಕೇರಿ: ಮಂಜಿನ ನಗರಿ ಎಂದೇ ಖ್ಯಾತವಾಗಿರುವ ಕೊಡಗಿನಲ್ಲಿ ಇದೀಗ ಜಾತ್ರಾ ಮಹೋತ್ಸವಗಳ ಕಲರವ ಜೋರಾಗಿದೆ. ಆಧುನಿಕತೆಯ ಅಬ್ಬರದ ನಡುವೆ ಅನ್ನದಾತರ ಅವಿಭಾಜ್ಯ ಅಂಗವಾಗಿರುವ ರಾಸುಗಳ ಪ್ರದರ್ಶನ ಹಾಗೂ ದೇಶಿ ಬಂಡಿಗಳ ಸ್ಪರ್ಧೆಯ ಗಮ್ಮತ್ತು ಮೇಳೈಸುತ್ತಿದೆ.
ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ ಗ್ರಾಮ ದೇವತೆ ಬನಶಂಕರಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಜಾತ್ರೆ ಪ್ರಯುಕ್ತ ಮಾದರಿ ಯುವಕ ಸಂಘದಿಂದ ಗ್ರಾಮದಲ್ಲಿ ಜೋಡೆತ್ತುಗಳ ಪ್ರದರ್ಶನ ಹಾಗೂ ದೇಶಿ ಬಂಡಿಗಳ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಅದರ ಜೊತೆಗೆ ಪುರುಷರು, ಮಹಿಳೆಯರಿಗೆ 100, 200 ಹಾಗೂ 400 ಮೀಟರ್ ಓಟ ಸ್ಪರ್ಧೆ, ಮೂರು ಕಾಲಿನ ಓಟ, ಕಬಡ್ಡಿ, ರಂಗೋಲಿ ಸ್ಪರ್ಧೆ, ಶಾಟ್ ಪುಟ್ ಎಸೆತ, ಹಗ್ಗ-ಜಗ್ಗಾಟ ಸೇರಿದಂತೆ ಸಂಗಿತದ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
Advertisement
Advertisement
ಕ್ರೀಡಾಕೂಟದಲ್ಲಿ ಜನರು ಉತ್ಸಾಹದಿಂದ ಪಾಲ್ಗೊಂಡು ಸಂತಸ ಪಟ್ಟಿದ್ದಾರೆ. ಹೆಬ್ಬಾಲೆ, ಚಿಕ್ಕಮಗಳೂರು, ಸಾಲಿಗ್ರಾಮ, ಹುಣಸೂರು ಹಳೇಕೋಟೆ ಸೇರಿದಂತೆ 11 ಸ್ಪರ್ಧಾ ಜೊಡೆತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅಲ್ಲದೆ ಜಾತ್ರೆಯಲ್ಲಿ 1.5 ಲಕ್ಷ ರೂಪಾಯಿ ಪ್ರಾರಂಭಿಕ ಬೆಲೆಯಿಂದ 5 ಲಕ್ಷ ರೂಪಾಯಿವರೆಗೆ ಬೆಲೆ ಬಾಳುವ ಒಂಟೆತ್ತನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
Advertisement
Advertisement
ಪ್ರತಿವರ್ಷವೂ ಗ್ರಾಮದ ಜಾತ್ರೆಗೆ ವಿವಿಧ ಜಿಲ್ಲೆಗಳಿಂದ ರೈತರು ತಮ್ಮ ಎತ್ತುಗಳನ್ನು ಪ್ರದರ್ಶನ ಹಾಗೂ ಎತ್ತಿನಗಾಡಿ ಓಟದ ಸ್ಪರ್ಧೆಗೆ ಕರೆತರುತ್ತಾರೆ. ಇಂದಿನ ನವ ಯುಗದ ಅಬ್ಬರದಲ್ಲಿ ಯಂತ್ರೋಪಕರಣಗಳ ಮಧ್ಯೆ ದೇಶಿ ಬಂಡಿಗಳು, ರೈತನ ಜೀವನಾಡಿಗಳಾದ ರಾಸುಗಳು ಕಣ್ಮರೆಯಾಗುತ್ತಿದೆ. ಆದರೆ ಇಂತಹ ಸನ್ನಿವೇಶದಲ್ಲಿ ಊರ ಜಾತ್ರೆಗಳ ಮೂಲಕ ಗ್ರಾಮೀಣ ಕ್ರೀಡೆಯ ಮಹತ್ವ, ದೇಶಿ ರಾಸುಗಳ ಬಗ್ಗೆ ಅರಿವು ಮೂಡಿಸುತ್ತಿರುವುದು ತುಂಬಾ ಸಂತೋಷವಾಗುತ್ತೆ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳು ಸದಾ ಒತ್ತಡದಿಂದಲೇ ಇದ್ದಂತಹ ರೈತಪಿ ವರ್ಗಕ್ಕೂ ಮನರಂಜನೆಯ ಸರದೌತಣವನ್ನ ಉಣಬಡಿಸಿದೆ. ಅಷ್ಟೇ ಅಲ್ಲದೆ ರಾಸುಗಳು ಹಾಗೂ ಗ್ರಾಮೀಣ ಆಟೋಟಗಳ ಪರಿವೇ ಇಲ್ಲದ ಯುವಕ-ಯುವತಿಯರಿಗೆ ಅವುಗಳ ಮಹತ್ವದ ಅರಿವು ಮೂಡಿಸಿದೆ.