IIMB ಯಿಂದ ‘ಹಾಸ್ಪಿಟಲ್ ಮ್ಯಾನೇಜ್‍ಮೆಂಟ್’ ಕೋರ್ಸ್ ಆರಂಭ – ಡಾ.ಕೆ.ಸುಧಾಕರ್ ಕನಸು ಸಾಕಾರ

Public TV
2 Min Read
DR K SUDHAKAR

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳನ್ನು ನಿರ್ವಹಣೆ ಮಾಡುವುದರ ಜೊತೆಗೆ, ಇಡೀ ಆಸ್ಪತ್ರೆಯ ಆಡಳಿತದ ನಿರ್ವಹಣೆ ಮಾಡುವ ನಾಯಕತ್ವ ಹೊಂದಿರಬೇಕು ಎಂಬುದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಕನಸು. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‍ಮೆಂಟ್ (ಐಐಎಂಬಿ) ನೆರವಿನಿಂದ ಸಚಿವರ ಕನಸು ಈಗ ಸಾಕಾರಗೊಂಡಿದೆ.

SUDHAKAR

ಐಐಎಂಬಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಹೊಸ ‘ಹಾಸ್ಪಿಟಲ್ ಮ್ಯಾನೇಜ್‍ಮೆಂಟ್’ ಕೋರ್ಸ್‍ಗೆ ಚಾಲನೆ ದೊರೆತಿದ್ದು, ಸಚಿವ ಡಾ.ಕೆ.ಸುಧಾಕರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳಿಗೆ ತಪಾಸಣೆ, ಚಿಕಿತ್ಸೆಯ ಸೇವೆ ನೀಡುತ್ತಾರೆ. ಆದರೆ ಆಸ್ಪತ್ರೆಯ ಸ್ವಚ್ಛತೆಯ ನಿರ್ವಹಣೆ, ಔಷಧಿ ಪೂರೈಕೆ, ಯಂತ್ರೋಪಕರಣಗಳ ಸುಸ್ಥಿತಿ ಕಾಪಾಡುವುದು, ಸಿಬ್ಬಂದಿ ನಿರ್ವಹಣೆ ಸೇರಿದಂತೆ ಹಲವಾರು ಕಾರ್ಯಗಳಿಗೆ ಆಡಳಿತದ ಅನುಭವ ಅತಿ ಅಗತ್ಯ. ಆಸ್ಪತ್ರೆಯೊಂದರ ಸಮಗ್ರ ಪ್ರಗತಿಗೆ ವೈದ್ಯರೇ ಮುಂದಾಳತ್ವ ವಹಿಸಿ ನಿರ್ವಹಣೆ ಮಾಡುವುದು ಮುಖ್ಯ. ಇದಕ್ಕಾಗಿ ಒಂದು ವೃತ್ತಿಪರ ಕೋರ್ಸ್ ಆರಂಭಿಸಬೇಕೆಂದು ಸಚಿವರು ಐಐಎಂಬಿಯ ನಿರ್ದೇಶಕ ಪ್ರೊ.ರಿಷಿಕೇಶ ಟಿ.ಕೃಷ್ಣನ್ ಹಾಗೂ ಡಾ.ದೇವಿ ಶೆಟ್ಟಿ ಅವರೊಂದಿಗೆ ಈ ಹಿಂದೆ ಚರ್ಚೆ ನಡೆಸಿದ್ದರು. ವೈದ್ಯರು ಸೇರಿದಂತೆ ವೈದ್ಯಕೀಯ ಕ್ಷೇತ್ರದ ಎಲ್ಲರೂ ಆಡಳಿತದ ಕೌಶಲ್ಯ ಪಡೆಯಬೇಕು. ಮುಖ್ಯವಾಗಿ ಸರ್ಕಾರಿ ಆರೋಗ್ಯ ಕ್ಷೇತ್ರ ಪರಿಣಾಮಕಾರಿಯಾಗಿ ಕೆಲಸ ಮಾಡಲು ಈ ಕೌಶಲ್ಯ ತರಬೇತಿ ಅಗತ್ಯ ಎಂದು ಸಚಿವರು ಪ್ರತಿಪಾದಿಸಿದ್ದರು. ಅದರಂತೆ, ಈಗ ಕೋರ್ಸ್ ಆರಂಭವಾಗಿದೆ. ಇದನ್ನೂ ಓದಿ: ಇಂದಿನಿಂದ ಪಂಜಾಬ್ ಪ್ರತಿಮನೆಗೂ 300 ಯೂನಿಟ್ ಉಚಿತ ವಿದ್ಯುತ್ ಪೂರೈಕೆ: ಭಗವಂತ್ ಮಾನ್

SUDHKAR

ಐಐಎಂಬಿಯ ಪರಿಣತ ಉಪನ್ಯಾಸಕರು ಈ ಕೋರ್ಸ್ ನಡೆಸಿಕೊಡಲಿದ್ದು, ವೈದ್ಯರಿಗೆ ಸೂಕ್ತ ತರಬೇತಿ ನೀಡಲಿದ್ದಾರೆ. ಇದರಿಂದಾಗಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜ್‍ಗಳಲ್ಲಿ ಆಡಳಿತ ನಡೆಸುವ ಪರಿಣತಿಯನ್ನು ವೈದ್ಯರು ಹೊಂದಬಹುದಾಗಿದೆ. ಆಸ್ಪತ್ರೆಗಳಲ್ಲಿ ಉತ್ತಮ ಆಡಳಿತವೂ ಅಗತ್ಯ. ಆಡಳಿತದಲ್ಲಿ ದೋಷಗಳಿದ್ದರೆ ಅದು ರೋಗಿಗಳ ಚಿಕಿತ್ಸೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಐಐಎಂಬಿ ಆರಂಭಿಸಿರುವ ಈ ಕೋರ್ಸ್‍ನಿಂದ ನನ್ನ ಕನಸು ಸಾಕಾರಗೊಂಡಿದೆ ಎಂದರು. ಇದನ್ನೂ ಓದಿ: ಜುಲೈ 5ರ ವರೆಗೆ ರಾಜ್ಯದಲ್ಲಿ ಭಾರೀ ಮಳೆ

ಕಾರ್ಪೊರೇಟ್‌ ಆಸ್ಪತ್ರೆಗಳು ಉತ್ತಮ ಆಡಳಿತ ವ್ಯವಸ್ಥೆ ಹೊಂದಿವೆ. ಖಾಸಗಿಗೆ ಹೋಲಿಸಿದರೆ, ಸರ್ಕಾರ ತನ್ನ ಆಸ್ಪತ್ರೆಗಳಿಗೆ ಹೆಚ್ಚು ಹಣ ಖರ್ಚು ಮಾಡುತ್ತದೆ. ಆದರೆ ವೈದ್ಯರಿಗೆ ಆಡಳಿತದ ನಿರ್ವಹಣೆಯ ಕೊರತೆ ಇದೆ. ಆದ್ದರಿಂದ ಈ ಹೊಸ ಕೋರ್ಸ್ ವೈದ್ಯರಿಗೆ ಬಹಳ ನೆರವಾಗಲಿದೆ. ಈ ಕೋರ್ಸ್‍ನಿಂದ ರಾಜ್ಯ ಮಾತ್ರವಲ್ಲದೆ, ಇಡೀ ದೇಶದ ವೈದ್ಯರಿಗೆ ನೆರವಾಗಲಿದೆ. ಅಲ್ಲದೆ, ರಾಜ್ಯದ ಸರ್ಕಾರಿ ಆರೋಗ್ಯ ಕ್ಷೇತ್ರ ದೊಡ್ಡ ಸುಧಾರಣೆ ಕಾಣಲು ನೆರವಾಗಲಿದೆ ಎಂದು ಸ್ಪಷ್ಟಪಡಿಸಿದರು.

Live Tv

Share This Article
Leave a Comment

Leave a Reply

Your email address will not be published. Required fields are marked *