ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ಶಿವಸೇನೆ ಕಾರ್ಯಕರ್ತರು ಆತನ ತಲೆ ಬೋಳಿಸಿ ವಿಕೃತಿ ಮೆರೆದಿದ್ದಾರೆ.
ಸಂತ್ರಸ್ತನನ್ನು ಹೀರಾಮಣಿ ತಿವಾರಿ(30) ಎಂದು ಗುರುತಿಸಲಾಗಿದ್ದು, ಡಿ.19ರಂದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದನ್ನು ಕಂಡು ಶಿವ ಸೇನೆ ಕಾರ್ಯಕರ್ತರು ತಲೆ ಬೋಳಿಸಿದ್ದಾರೆ. ತಿವಾರಿ ಅವರು ರಾಹುಲ್ ತಿವಾರಿ ಎಂಬ ಫೇಸ್ಬುಕ್ ಖಾತೆಯಿಂದ ಪೋಸ್ಟ್ ಹಾಕಿದ್ದು, ಹಲವರು ಈ ಕುರಿತು ಬೆದರಿಕೆ ಹಾಕಿದ್ದರಿಂದ ತಿವಾರಿ ಅವರು ಪೋಸ್ಟ್ ಡಿಲೀಟ್ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಜಾಮಿಯಾ ವಿದ್ಯಾರ್ಥಿಗಳ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದರ ಕುರಿತ ಠಾಕ್ರೆ ಹೇಳಿಕೆ ಖಂಡಿಸಿ, ತಿವಾರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಇದಕ್ಕೆ ಶಿವಸೇನೆ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಅವರ ತಲೆ ಬೋಳಿಸಿ ವಿಕೃತಿ ಮೆರೆದಿದ್ದಾರೆ.
Advertisement
Advertisement
ಪೋಸ್ಟ್ ಡಿಲೀಟ್ ಮಾಡಿದರೂ ಸಹ ಸಮಾಧಾನ್ ಜುಕ್ಡಿಯೊ ಹಾಗೂ ಪ್ರಕಾಶ್ ಹಸ್ಬೆ ನೇತೃತ್ವದ ಶಿವ ಸೇನೆ ತಂಡ ತಿವಾರಿ ಅವರ ಶಾಂತಿ ನಗರದಲ್ಲಿನ ಮನೆಗೆ ತೆರಳಿ ಅವರನ್ನು ಥಳಿಸಿದ್ದಾರೆ. ಅಲ್ಲದೆ ತಲೆ ಬೋಳಿಸಿದ್ದಾರೆ. ಈ ಕುರಿತು ವಡಾಲಾ ಟಿಟಿ ಪೊಲೀಸರು ಐಪಿಸಿ ಸೆಕ್ಷನ್ 149 ಅಡಿ ಶಿವ ಸೇನೆ ಕಾರ್ಯಕರ್ತರಿಗೆ ನೋಟಿಸ್ ನೀಡಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
Advertisement
ಈ ಕುರಿತು ತಿವಾರಿಯವರು ಪ್ರತಿಕ್ರಿಯಿಸಿ, ನಾನು ಇತ್ತೀಚೆಗೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸೇರಿದಂತೆ ಬಲಪಂಥೀಯ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದೆ. ನಾನು ಹಾಕಿದ ಪೋಸ್ಟ್ ಕುರಿತು ಫೇಸ್‍ಬುಕ್ ಮೂಲಕ ಹಾಗೂ ದೂರು ನೀಡುವುದರ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಆದರೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಹೀಗಾಗಿ ಶಿವ ಸೇನೆ ಕಾರ್ಯಕರ್ತರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ನನ್ನ ಅಭಿಪ್ರಾಯಗಳನ್ನು ಫೇಸ್ಬುಕ್ಕಿನಲ್ಲಿ ಹಂಚಿಕೊಂಡಿದ್ದೆ ಅಷ್ಟೇ ಎಂದು ತಿಳಿಸಿದ್ದಾರೆ.
ಘಟನೆ ಕುರಿತು ಪೊಲೀಸರು ಮಾಹಿತಿ ನೀಡಿ, ತಿವಾರಿಯವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಶಿವಸೇನೆ ಕಾರ್ಯಕರ್ತರು ಹಾಗೂ ತಿವಾರಿ ರಾಜಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಯಾರಾದರೂ ಈ ಕುರಿತು ದೂರು ನೀಡಿದರೆ ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಜಾಮಿಯಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವಾಗ ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಡಿ.17ರಂದು ಆಕ್ರೋಶ ವ್ಯಕ್ತಪಡಿಸಿ, ಜೆಎಂಐ ಕಾಂಪೌಂಡಿಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿರುವುದನ್ನು ನೋಡಿದರೆ ಜಲಿಯನ್ ವಾಲಾಭಾಗ್ ಹತ್ಯಾಕಂಡದಂತೆ ಭಾಸವಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ತಿವಾರಿಯವರು ಸಾಮಾಜಿಕ ಜಾಲತಾಣದಲ್ಲಿ ಉದ್ಧವ್ ಅವರನ್ನು ಟೀಕಿಸಿ ಅಭಿಪ್ರಾಯ ಹಂಚಿಕೊಂಡಿದ್ದರು.