Connect with us

Latest

ರೇಪಿಸ್ಟ್ ಬಾಬಾನಿಗೆ ಈಗ ದಿನಕ್ಕೆ 20 ರೂ. ಕೂಲಿ!

Published

on

Share this

ಪಂಚಕುಲ: ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಒಳಪಟ್ಟಿರುವ ಡೇರಾ ಸಚ್ಚಾ ಸೌದ ಮುಖ್ಯಸ್ಥ ಬಾಬಾ ರಾಮ್ ರಹೀಮ್‍ನ ದಿನ ಕೂಲಿ ಕೇವಲ 20 ರೂ. ಮಾತ್ರ.

ಅಪರಾಧಿ ಬಾಬಾ ಆಶ್ರಮದಲ್ಲಿದ್ದಾಗ ಐಷರಾಮಿ ಜೀವನವನ್ನು ಕಳೆಯುತ್ತಿದ್ದ. ಆದರೆ ಈಗ ಜೈಲಿನಲ್ಲಿ ತೋಟಗಾರಿಕೆ ಕೆಲಸವನ್ನು ಮಾಡುತ್ತಿದ್ದು, ಪ್ರತಿದಿನ ಈ ಕೆಲಸಕ್ಕೆ 20 ರೂ. ದಿನ ಕೂಲಿಯನ್ನು ಪಡೆಯುತ್ತಿದ್ದಾನೆ.

ಹರಿಯಾಣ ಜೈಲಿನಲ್ಲಿ ಕೌಶಲ್ಯವಿಲ್ಲದ ಉದ್ಯೋಗವನ್ನು ಮಾಡುವವರಿಗೆ ನಿಗಧಿಯಾದ ಕೂಲಿ ಇದಾಗಿದೆ. ಇದಕ್ಕಿಂತ ಹೆಚ್ಚಿನ ಕೂಲಿ ನೀಡುವುದಿಲ್ಲ ಎಂದು ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಜಿಪಿ) ಕೆ.ಪಿ. ಸಿಂಗ್ ತಿಳಿಸಿದ್ದಾರೆ.

ಬಾಬಾ ಉತ್ತಮ ಉದ್ಯೋಗ ಕೌಶಲ್ಯವನ್ನು ಹೊಂದಿದ್ದಾನೆ. ಆದರೆ ಜೈಲಿನಲ್ಲಿ ಇರುವಾಗ ಅಲ್ಲಿನ ನಿರ್ಬಂಧಗಳನ್ನು ಪಾಲಿಸಬೇಕಾಗುತ್ತದೆ. ಆದ್ದರಿಂದ ಬ್ಯಾರಕ್‍ನ ಬಳಿ ಸಣ್ಣ ಪ್ರದೇಶದ ಭೂಮಿಯಲ್ಲಿ ಪ್ರತಿದಿನ 4 ರಿಂದ 5 ಗಂಟೆ ಕಾಲ ಕಷ್ಟಪಟ್ಟು ಕೆಲಸ ಮಾಡುತ್ತಾನೆ ಎಂದು ಹೇಳಿದರು.

ಪತ್ರಿಕೆ, ಟಿವಿ ಇಲ್ಲ: ದೂರದರ್ಶನ ಮತ್ತು ಪತ್ರಿಕೆ ಮೂಲಕ ದಿನನಿತ್ಯದ ಸುದ್ದಿಗಳಿಂದ ದೂರವಿಡಲಾಗಿದೆ. ಟಿವಿ, ಪತ್ರಿಕೆ ಪ್ರವೇಶಕ್ಕೆ ಅವಕಾಶವಿರುವ ಸ್ಥಳಗಳಲ್ಲಿ ಬ್ಯಾರಕ್‍ಗಳಿವೆ. ಆದರೆ ಬಾಬಾ ಬ್ಯಾರಕ್‍ಗೆ ಹೋಗಲು ಅನುಮತಿ ಇಲ್ಲ. ಅಷ್ಟೇ ಅಲ್ಲದೆ ಭದ್ರತಾ ಕಾಳಜಿಯ ಮೇರೆಗೆ ಯಾವುದೇ ಫೋನ್ ಕರೆಗಳನ್ನು ಮಾಡಲು ಅನುಮತಿ ನೀಡಿಲ್ಲ.

ಬ್ಯಾರಕ್‍ಗೆ ಅನುಮತಿ ಇಲ್ಲ: ಆರಂಭದಲ್ಲಿ ಮಾಧ್ಯಮಗಳು ಬಾಬಾನನ್ನು ಏಕಾಂಗಿಯಾಗಿ ಬಂಧಿಸಿದ್ದಾರೆ ಎಂದು ವರದಿ ಮಾಡಿದ್ದರು. ಆದರೆ ಅದನ್ನು ಡಿಜಿಪಿ ಅವರು ನಿರಾಕರಿಸಿ, ಬಾಬಾ ಜೈಲಿನಲ್ಲಿ ಮೂರು ಮಂದಿ ಅಪರಾಧಿಗಳ ಜೊತೆ ಇದ್ದಾನೆ. ಸಾಮಾಜಿಕ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಅವನ ಜೊತೆ ಇರುವ ಕೈದಿಗಳಿಗೆ ಡೇರಾ ಆಶ್ರಮದ ಜೊತೆ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಖಚಿತ ಪಡಿಸಿಕೊಳ್ಳಲಾಗಿದೆ. ಮೂವರು ಕೈದಿಗಳು ಈಗಾಗಲೇ 10 ವರ್ಷಗಳಿಗಿಂತ ಹೆಚ್ಚಿನ ಕಾಲ ಜೈನಲ್ಲಿದ್ದಾರೆ. ಇದರಲ್ಲಿ 70 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಇದ್ದಾರೆ ಎಂದು ಹೇಳಿದ್ದಾರೆ.

ಊಟ: ಜೈಲಿನ ಎಲ್ಲ ಕೈದಿಗಳಿಗೆ ನೀಡುವಂತೆ ದಿನಕ್ಕೆ ಗರಿಷ್ಠ 3,175 ಕ್ಯಾಲೋರಿ ಇರುವ ಆಹಾರವನ್ನು ನೀಡಲಾಗುತ್ತದೆ. ಬೆಳಗಿನ ತಿಂಡಿಗೆ ಎರಡು ಬ್ರೆಡ್ ಮತ್ತು 250 ಗ್ರಾಂ ಹಾಲು, ನಂತರ ಟೀ, ಮಧ್ಯಾಹ್ನ ಊಟಕ್ಕೆ 7 ಚಪಾತಿ ಮತ್ತು ತರಕಾರಿ, ಸಂಜೆ ಟೀ ಮತ್ತೆ ರಾತ್ರಿ ಊಟ ನೀಡಲಾಗುತ್ತದೆ.

ಜೈಲಿನ ಕ್ಯಾಂಟೀನ್‍ನಿಂದ ಹಣ್ಣುಗಳು ಹಾಗೂ ಇತರ ತಿನ್ನುವ ವಸ್ತುಗಳನ್ನು ಹಣ ನೀಡಿ ಖರೀದಿಸಬಹುದು. ಆದರೆ ಕೈಯಲ್ಲಿ ಗರಿಷ್ಟ 5 ಸಾವಿರ ರೂ. ಹಣವನ್ನು ಇಟ್ಟುಕೊಳ್ಳಲು ಮಾತ್ರ ಅವಕಾಶವಿದೆ.

ಬಾಬಾನನ್ನು ಜೈಲಿನಲ್ಲಿ ಭಗವದ್ಗೀತೆ ಪುಸ್ತಕವನ್ನು ಓದುತ್ತಿದ್ದಾನೆ. ಅವನ ತಾಯಿ ಭೇಟಿಯಾಗಲು ಬಂದಾಗ ಬಹುಶಃ 2 ಪುಸ್ತಕವನ್ನು ನೀಡಿದ್ದಾರೆ. ಅವುಗಳನ್ನು ಪ್ರತಿದಿನ ಓದುತ್ತಾನೆ ಎಂದು ಅಧಿಕಾರಿ ತಿಳಿಸಿದರು.

ಜೈಲಿಗೆ ಹೊಸದಾಗಿ ಆಗಮಿಸಿದ ಕೈದಿಗಳು ಕಿರುಚಾಡಿ, ಕೂಗಾಡಿ ಅಳುತ್ತಾರೆ. ಆದರೆ ಬಾಬಾ ಇಲ್ಲಿಯವರೆಗೆ ಕೋಪಗೊಳ್ಳದೇ ಜೈಲಿನ ನಿಯಮ ನಿರ್ಬಂಧಗಳಿಗೆ ಅನುಸಾರವಾಗಿ ವರ್ತಿಸುತ್ತಿದ್ದಾನೆ. ಜೈಲಿನಲ್ಲಿ ಕುರ್ತಾ ಪೈಜಾಮ್ ಬಿಟ್ಟು ಬೇರೆ ಯಾವ ಉಡುಪನ್ನು ಧರಿಸುವಂತಿಲ್ಲ. ಕೈದಿ ಬಾಬಾ ನಂಬರ್ 8647 ಎಂದು ಸಿಂಗ್ ಹೇಳಿದರು.

Click to comment

Leave a Reply

Your email address will not be published. Required fields are marked *

Advertisement