ಚಂಡೀಗಢ: ಗುರುಮೀತ್ ರಾಮ್ ರಹೀಂ ಬಾಬಾ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ಇಂದು ತೀರ್ಪು ಹೊರಬೀಳಲಿದೆ. ಪಂಚಕುಲಾದ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ. ಈಗಾಗಲೇ ಲಕ್ಷಾಂತರ ಬಾಬಾ ಅನುಯಾಯಿಗಳು ಪಂಚಕುಲಾ ಮತ್ತು ಸಿರ್ಸಾಗೆ ಬಂದು ಸೇರಿದ್ದಾರೆ.
ಪಂಚಕುಲಾದ ನಗರದ ರಸ್ತೆಯ ಇಕ್ಕೆಲಗಳು ಬಾಬಾ ಅನುಯಾಯಿಗಳಿಂದಲೇ ತುಂಬಿಹೋಗಿದೆ. ಗುರುವಾರ ರಾತ್ರಿ 10 ಗಂಟೆ ಬಳಿಕ ಪಂಚಕುಲಾವನ್ನು ಸೇನೆಗೆ ವಹಿಸಲಾಗಿದ್ದು, ಅಲ್ಲಿನ ಭದ್ರತೆಯ ಸಂಪೂರ್ಣ ಜವಾಬ್ದಾರಿಯನ್ನು ಸೇನೆ ಹೊತ್ತಿದೆ. ಜೊತೆಗೆ ಸಿರ್ಸಾ, ಪಂಚಕುಲಾದಲ್ಲಿ ನಿನ್ನೆ ರಾತ್ರಿಯಿಂದ್ಲೇ ಕಫ್ರ್ಯೂ ಜಾರಿಗೊಳಿಸಲಾಗಿದೆ.
Advertisement
ಹರಿಯಾಣ ಮತ್ತು ಚಂಡೀಗಢದಲ್ಲಿ ಎಲ್ಲಾ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಅಂಗಡಿಗಳನ್ನು ಮುಚ್ಚಲಾಗಿದೆ. ಪಂಜಾಬ್, ಹರಿಯಾಣ, ಚಂಡೀಗಢದಲ್ಲಿ 72 ಗಂಟೆಗಳ ಕಾಲ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಈ ಮಧ್ಯೆ ಹೈಕೋರ್ಟ್ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹರಿಯಾಣ ಸರ್ಕಾರ ವಿಫಲವಾಗಿದೆ ಅಂತ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ಭಕ್ತರು ಮನೆಗೆ ತೆರಳುವಂತೆ ಮನವಿ ಮಾಡಲು ಸೂಚಿಸಿದ್ದು, ಅದರಂತೆ ಬಾಬಾ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Advertisement
ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸಿ, ಮನೆಗೆ ತೆರಳಿ ಅಂತ ಮನವಿ ಮಾಡಿಕೊಂಡಿದ್ದಾರೆ. 2002ರಲ್ಲಿ ಬಾಬಾರ ಇಬ್ಬರು ಮಹಿಳಾ ಭಕ್ತರು ನಮ್ಮ ಮೇಲೆ ಬಾಬಾ ಅತ್ಯಾಚಾರವೆಸಗಿದ್ದಾರೆ ಅಂತ ಆರೋಪಿಸಿದ್ದರು. ಆದ್ರಂತೆ ಹೈಕೋರ್ಟ್ ಬಾಬಾ ವಿರುದ್ಧ ಪ್ರಕರಣ ದಾಖಲಿಸುವಂತೆ ಸಿಬಿಐಗೆ ಸೂಚಿಸಿತ್ತು.
Advertisement
ಏನಿದು ಪ್ರಕರಣ?: ಹರಿಯಾಣದ ಸಿರ್ಸಾದಲ್ಲಿರುವ ಆಶ್ರಮದಲ್ಲಿ ರಾಮ್ ರಹೀಂ ವಿರುದ್ಧ 1999ರಲ್ಲಿ ಇಬ್ಬರು ಮಹಿಳಾ ಭಕ್ತರ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, 2002ರಿಂದ ಸಿಬಿಐ ತನಿಖೆ ನಡೆಸಲಾಗುತ್ತಿತ್ತು. ಒಂದು ದಿನ ರಾತ್ರಿ ಗುರ್ಮಿತ್ ರಾಮ್ ರಹೀಂ ಸಂತ್ರಸ್ತ ಮಹಿಳೆಯನ್ನು ತನ್ನ ಕೋಣೆಗೆ ಕರೆದಿದ್ದು, ಕೋಣೆಯಲ್ಲಿದ್ದ ಟಿವಿಯಲ್ಲಿ ಸೆಕ್ಸ್ ಮೂವಿ ತೋರಿಸಿದ್ದರು. ಅವರ ಪಕ್ಕದಲ್ಲಿ ಗನ್ ಕೂಡಾ ಇತ್ತು ಎನ್ನಲಾಗಿತ್ತು. ಅಲ್ಲದೇ 3 ವರ್ಷಗಳವರೆಗೆ ನಿರಂತರವಾಗಿ ಅತ್ಯಾಚಾರ, 30-40ರಷ್ಟು ಮಹಿಳಾ ಭಕ್ತರಿಗೂ ಇದೇ ರೀತಿ ಪೀಡಿಸಿದ್ದರೆಂಬ ಆರೋಪ ಕೇಳಿಬಂದಿತ್ತು. ಈ ಆರೋಪಗಳ ಬಗ್ಗೆ ವಿಚಾರಣೆ ನಡೆಸಿದ್ದ ಪಂಚಕುಲಾ ಸಿಬಿಐ ಕೋರ್ಟ್ ಇಂದು ತೀರ್ಪು ಪ್ರಕಟಿಸಲಿದೆ.
Advertisement
ರೇಪ್ ಬಗ್ಗೆ ಅಂದಿನ ಪ್ರಧಾನಿ ವಾಜಪೇಯಿಗೆ ಪತ್ರ ಬರೆದಿದ್ದ ವ್ಯಕ್ತಿಯನ್ನೇ ಭಕ್ತರು ಗುಂಡಿಟ್ಟು ಕೊಂದಿದ್ದರು. ಇನ್ನು ಇದೇ ರಾಮ್ ರಹೀಂ ಬಾಬಾ ಈ ಹಿಂದೆ ವಿರಾಟ್ ಕೊಹ್ಲಿ, ಬಾಕ್ಸಿಂಗ್ ಪಟು ವಿಜೇಂದರ್‍ಗೂ ನಾನೇ ಟ್ರೇನಿಂಗ್ ಕೊಟ್ಟಿದ್ದೆ ಅಂತ ಹೇಳಿದ್ದರು. ವೀಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದ ಹಾಗೇ ಒಮ್ಮೆ ವಿರಾಟ್ ಕೊಹ್ಲಿ ಮತ್ತು ಆಶೀಶ್ ನೆಹ್ರಾ ಈ ಬಾಬಾರನ್ನ ಭೇಟಿ ಕೂಡ ಮಾಡಿದ್ದರು.
ಏನಿದು ದೇರಾ ಸಚ್ಛಾ ಸೌಧ?: ರಕ್ತದಾನ, ಮಾದಕ ದ್ರವ್ಯ ತಡೆ, ಆರೋಗ್ಯ ತಪಾಸಣಾ ಶಿಬಿರಗಳ ಮೂಲಕ ಸಾಮಾಜಿಕ ಸೇವೆ ಮಾಡುತ್ತಿದ್ದ ಇವರು, ದೇರಾ ಸಚ್ಛಾ ಸೌಧ ಎಂಬ ಅತೀ ದೊಡ್ಡ ರಕ್ತದಾನಿ ಸಂಸ್ಥೆಯನ್ನು ಆರಂಭಿಸಿದ್ದರು. ದೇರಾ ಸಚ್ಛಾ ಸೌಧ ಬರೋಬ್ಬರಿ 6 ಕೋಟಿ ಭಕ್ತರಿರುವ ಆಧ್ಯಾತ್ಮಿಕ ಮತ್ತು ಸೇವಾ ಸಂಸ್ಥೆಯಾಗಿದ್ದು, ಇದು ಹರಿಯಾಣದ ಸಿರ್ಸಾದಲ್ಲಿದೆ. ಆಗಸ್ಟ್ 29, 1948ರಂದು ಬೇಪರವ ಮಸ್ತಾನಜೀ ಮಹಾರಾಜ್‍ರಿಂದ ಈ ಸಂಸ್ಥೆ ಸ್ಥಾಪನೆಯಾಗಿದೆ. ಅಮೆರಿಕ, ಕೆನಡಾ, ಯುಎಇ, ಬ್ರಿಟನ್, ಆಸ್ಟ್ರೇಲಿಯಾದಲ್ಲೂ ಆಶ್ರಮಗಳ ಸ್ಥಾಪನೆಯಾಗಿದೆ. ಹರಿಯಾಣ, ಪಂಜಾಬ್, ರಾಜಸ್ಥಾನ, ಜಮ್ಮು, ದೆಹಲಿಯಲ್ಲಿ ಧಾರ್ಮಿಕ, ರಾಜಕೀಯ, ಸಾಮಾಜಿಕ ಪ್ರಭಾವ ಬೀರಿದೆ. ಇಷ್ಟೇ ಅಲ್ಲ ಕರ್ನಾಟಕದ ಮೈಸೂರಿನಲ್ಲೂ ಕೂಡ ದೇರಾ ಆಶ್ರಮ ಇದೆ. 2016ರ ಆಕ್ಟೋಬರ್‍ನಲ್ಲಿ ಕಟ್ಟಡ ನೆಲಸಮಕ್ಕೆ ಶಿಫಾರಸ್ಸು ಮಾಡಲಾಗಿತ್ತು.
ಯಾರು ಈ ದೇವಮಾನವ?: 1990ರಲ್ಲಿ ದೇರಾ ಸಚ್ಛಾ ಸೌಧದ ಪೀಠವೇರಿದ ಸ್ವಯಂಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಂ ಸಿಂಗ್, `ಸಂತ ಡಾ. ಎಸ್‍ಎಂಜಿ’ (ದೇವರ ಸಂದೇಶಕಾರ) ಎಂದೇ ಕರೆಸಿಕೊಂಡಿದ್ದರು. ಹಾಡುವುದು, ಕುಣಿಯುವುದು, ಸಿನಿಮಾ ನಟನೆ, ನಿರ್ದೇಶನ, ಸಂಗೀತಗಾರ ಹೀಗೆ ಸಕಲ ಕಲಾವಲ್ಲಭ ಸ್ವಾಮೀಜಿ ಪಾಪ್ ಸಂಗೀತಗಾರರಂತೆ ಚಿತ್ರ-ವಿಚಿತ್ರ ಬಟ್ಟೆಗಳನ್ನು ಧರಿಸಿ, ವಿವಿಧ ಅವತಾರಗಳಲ್ಲಿ ಕಾಣಿಸಿಕೊಂಡಿದ್ದರು. ತನ್ನನ್ನು ತಾನು ದೇವರ ಅವತಾರೆಂದು ಬಿಂಬಿಸಿಕೊಂಡಿರುವ ಗುರ್ಮಿತ್ ಸಿಂಗ್ `ಎಸ್‍ಎಂಜಿ’ ಚಿತ್ರದ ನಿರ್ದೇಶನ ಕೂಡ ಮಾಡಿದ್ದರು.
2015ರಲ್ಲಿ ರಿಲೀಸ್ ಆದ ಸಿನಿಮಾಕ್ಕೆ ತಾನೇ ಡೈರೆಕ್ಟರ್, ಕಥೆ, ಸಂಭಾಷಣೆ, ಸಂಗೀತ, ಕುಣಿತ ಎಲ್ಲವೂ ಆಗಿದ್ದರು. ವಿವಾದಕ್ಕೊಳಗಾದ ಈ ಸಿನಿಮಾವನ್ನು ಕರ್ನಾಟಕದ ಕೆಲವು ಭಾಗಗಳಲ್ಲೂ ಶೂಟ್ ಮಾಡಲಾಗಿತ್ತು. ಯೂಟ್ಯೂಬ್‍ನಲ್ಲಿ ಟ್ರೇಲರ್ ರಿಲೀಸ್ ಆದ ಬಳಿಕ 24 ಗಂಟೆಗಳಲ್ಲಿ 10 ಲಕ್ಷ ಮಂದಿ ವೀಕ್ಷಿಸಿದ್ದರು. `ರು-ಬಾ-ರು ನೈಟ್ಸ್’ ಹೆಸರಲ್ಲಿ ಪಾಪ್ ಸಂಗೀತಗಾರರಂತೆ ಆಲ್ಬಂ ಲೈವ್ ಶೋಗಳ ಖಯಾಲಿ ಇವರಿಗಿತ್ತು. ಇವರ `ಹೈವೇ ಲವ್ ಚಾರ್ಜರ್’ ಆಲ್ಬಂನ 30 ಲಕ್ಷ ಪ್ರತಿಗಳು 3 ದಿನಗಳಲ್ಲಿ ಸೇಲಾಗಿತ್ತು.