ದಾವಣಗೆರೆ: ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಅವರಿಗೆ ಗಂಭೀರ ಗಾಯವಾಗಿದೆ. ಮಾರ್ಚ್ 14ರಂದು ಶುಕ್ರವಾರ ಸಂಜೆ ಈ ಘಟನೆ ನಡೆದಿದೆ.
ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಅವರು ಬೆಂಗಳೂರಿನಿಂದ ಕರ್ನಾಟಕ ವಿಧಾನ ಮಂಡಲ ಅಧಿವೇಶನ ಮುಗಿಸಿಕೊಂಡು ಹಾವೇರಿ ಜಿಲ್ಲೆಯ ಕುಮಾರಪಟ್ಟಣಂ ಸಮೀಪದ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿಗೆ ಸಂಪುಟ ಒಪ್ಪಿಗೆ – 1 ಕೋಟಿವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ
ಬೈಕ್ ಬಂದು ಗುದ್ದಿದ ರಭಸಕ್ಕೆ ರುದ್ರಪ್ಪ ಮಾನಪ್ಪ ಲಮಾಣಿ ಅವರು ನೆಲಕ್ಕೆ ಬಿದ್ದ ಪರಿಣಾಮ ಅವರ ಹಣೆ, ಹಲ್ಲು ಹಾಗೂ ಬಲ ಮೊಣಕಾಲಿಗೆ ಪೆಟ್ಟು ಬಿದ್ದಿದೆ. ತಕ್ಷಣವೇ ಉಪ ಸಭಾಪತಿಗಳಿಗೆ ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿರೋದು ಸಿದ್ದರಾಮಯ್ಯನ ಸರ್ಕಾರ… ನಿಮ್ಮಪ್ಪನ ಸರ್ಕಾರ ಅಲ್ಲ – ಬಿಜೆಪಿ ಕಾರ್ಯಕರ್ತರ ವಿರುದ್ಧ ರೊಚ್ಚಿಗೆದ್ದ ಪ್ರದೀಪ್ ಈಶ್ವರ್
ರುದ್ರಪ್ಪ ಮಾನಪ್ಪ ಲಮಾಣಿ ಅವರಿಗೆ ಗುದ್ದಿದ ಬೈಕ್ ಸವಾರ, ಬೈಕ್ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹಿರಿಯೂರು ಡಿವೈಎಸ್‌ಪಿ ಶಿವಕುಮಾರ್ ಹಾಗೂ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೈಕ್ ಸವಾರನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಸದ್ಯ ರುದ್ರಪ್ಪ ಲಮಾಣಿ ಅವರನ್ನು ವಾರ್ಡ್‌ಗೆ ಶಿಫ್ಟ್ ಮಾಡಿರುವ ವೈದ್ಯರ ತಂಡ ಯಾವುದೇ ಅಪಾಯವಿಲ್ಲ ಎಂದು ಅಭಯ ನೀಡಿದೆ.
ಆರೋಗ್ಯ ವಿಚಾರಿಸಿದ ಸಿಎಂ:
ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಕರೆ ಮಾಡಿ ರುದ್ರಪ್ಪ ಲಮಾಣಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಸಲಹೆ ನೀಡಿದ್ದಾರೆ.