ತುಮಕೂರು: ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ತುಮಕೂರು ಜಿಲ್ಲೆಯಲ್ಲೇ ಭಾರಿ ಮೇವು ಹಗರಣ ನಡೆದಿದೆ. ಮೇವು ವಿತರಣೆಯಲ್ಲಿ ಬರೊಬ್ಬರಿ 22 ಕೋಟಿ ರೂ. ಲೂಟಿ ಮಾಡಲಾಗಿದೆ ಎಂದು ಉಪ ಲೋಕಾಯುಕ್ತ ನ್ಯಾ.ಸುಭಾಷ್ ಅಡಿ ಅವರ ವರದಿಯಲ್ಲಿ ಬಹಿರಂಗವಾಗಿದೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ನಿವಾಸಿ ಮಲ್ಲಿಕಾರ್ಜುನ್ ಎನ್ನುವವರು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಉಪಲೋಕಾಯುಕ್ತ ನ್ಯಾ. ಅಡಿಯವರು ಬರಗಾಲದ ಹಿನ್ನಲೆಯಲ್ಲಿ ಪ್ರಾರಂಭಿಸಿದ ಗೋ ಶಾಲೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದರು. ಇಲ್ಲಿ ಭಾರಿ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ಮೇವು ಖರೀದಿಸಿರುವ ರಸೀದಿಗಳಿಗೂ, ದಾಸ್ತಾನು ನಿರ್ವಹಣೆ ಪುಸ್ತಕದಲ್ಲಿರುವ ಮಾಹಿತಿಗೂ ವ್ಯತ್ಯಾಸ ಕಂಡುಬಂದಿದೆ.
Advertisement
Advertisement
ತುಮಕೂರು ಜಿಲ್ಲೆಯ 7 ತಾಲೂಕುಗಳ ಗೋಶಾಲೆ ನಿರ್ವಹಣೆಗೆ ಬಿಡುಗಡೆ ಮಾಡಿದ 33.96 ಲಕ್ಷ ರೂ. ಅಕ್ರಮ ನಡೆದಿದೆ. ಅದೇ ರೀತಿ ಮೇವು ಖರೀದಿಯಲ್ಲೂ 21.98 ಕೋಟಿ ರೂ ದುರ್ಬಳಕೆ ಅಗಿದೆ. ಕಾನೂನು ಸಚಿವ ಟಿ.ಬಿ.ಜಯಚಂದ್ರರ ಸ್ವಕ್ಷೇತ್ರ ಶಿರಾದಲ್ಲಿ ಬರೋಬ್ಬರಿ 6.55 ಕೋಟಿ ರೂ. ಅಕ್ರಮವಾಗಿದೆ. ಉಳಿದಂತೆ ಗುಬ್ಬಿಯಲ್ಲಿ 1 ಕೋಟಿ, ಗೃಹಸಚಿವರ ಕ್ಷೇತ್ರ ಕೊರಟಗೆರೆಯಲ್ಲಿ 1.55 ಕೋಟಿ, ತಿಪಟೂರಲ್ಲಿ 2.99 ಕೋಟಿ, ತುರುವೇಕೆರೆಯಲ್ಲಿ 1.49 ಕೋಟಿ, ಪಾವಗಡದಲ್ಲಿ 3.10 ಕೋಟಿ, ಚಿಕ್ಕನಾಯಕನ ಹಳ್ಳಿಯಲ್ಲಿ 4.92 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಉಪಲೋಕಾಯುಕ್ತರ ವರದಿಯಲ್ಲಿ ಹೇಳಲಾಗಿದೆ.