ಹಾವೇರಿ: ಜಿಲ್ಲಾಧಿಕಾರಿಗಳು ಅಂದ್ರೆ ಕಚೇರಿ ಕೆಲಸ ಮಾಡಿಕೊಂಡು ಅಧಿಕಾರಿಗಳ ಸಭೆ ನಡೆಸಿ ಕ್ರಮ ತೆಗೆದುಕೊಳ್ಳುವುದು ಕಾಮನ್. ಆದ್ರೆ ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವ್ಹಿ.ವೆಂಕಟೇಶ್ ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಾವು ಹಾಗೂ ತಮ್ಮ ಸಿಬ್ಬಂದಿಯ ಜೊತೆ ಸೇರಿಕೊಂಡು ಶ್ರಮದಾನ ಮಾಡಿ, ಅವರ ಕುಂದು-ಕೊರತೆಗಳನ್ನ ಕೇಳಿದ್ದಾರೆ.
ಹಾವೇರಿ ತಾಲೂಕಿನ ದೇವಿಹೊಸೂರು ಗ್ರಾಮದ ಕೆರೆಯಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಕೆರೆಯಲ್ಲಿ ಹೂಳು ಎತ್ತಲಾಗುತ್ತಿತ್ತು. ಶ್ರಮದಾನದಲ್ಲಿ ಜಿಲ್ಲಾಧಿಕಾರಿಗಳು ಭಾಗವಾಹಿಸುವದರ ಜೊತೆ ಕಾರ್ಮಿಕರ ತೊಂದರೆಗಳನ್ನು ಆಲಿಸಿದರು.
ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಪ್ರತಿಯೊಬ್ಬರ ಸಮಸ್ಯೆಗಳನ್ನು ಕೇಳಿದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸದ್ಯ ಪ್ರತಿ 15 ದಿನಕ್ಕೆ ವೇತನವನ್ನ ನೀಡಲಾಗುತ್ತದೆ. ಅದನ್ನ ಕಡಿಮೆ ಮಾಡಿ ಪ್ರತಿವಾರ ತಮ್ಮ ಖಾತೆಗೆ ಹಣಬರುವಂತೆ ಮಾಡಬೇಕು ಎಂದು ಕಾರ್ಮಿಕರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
ಪ್ರಸ್ತಕ ವರ್ಷ ಬರಗಾಲ ಇರೋದ್ರಿಂದ ಬೇರೆ ಕಡೆ ಕೆಲಸ ಸಿಗುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ 100 ರಿಂದ 150 ದಿನಗಳ ಕಾಲ ಬಡಕೂಲಿಕಾರ್ಮಿಕರಿಗೆ ಉದ್ಯೋಗ ಸಿಗುತ್ತಿದೆ. ನಮ್ಮ ಜೊತೆಗೆ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಜೊತೆಗೆ ಆರೋಗ್ಯ ತಪಾಸಣೆ ಮಾಡಿಸಿದ್ರು. ನಮಗೆ ಬಹಳ ಸಂತೋಷವಾಗಿದೆ. ಅಲ್ಲದೆ ನಮ್ಮ ವೇತನವನ್ನ ವಾರಕ್ಕೆ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ಕೂಲಿ ಕಾರ್ಮಿಕೆ ಸರೋಜಮ್ಮ ಸುಣಗಾರ ಹೇಳಿದರು.