– ಎಲ್ಲರ ಮೆಚ್ಚುಗೆಗೆ ಪಾತ್ರರಾದ ಡಿಸಿ
ಚೆನ್ನೈ: ಸಾಮಾನ್ಯವಾಗಿ ದಪ್ಪ ಕಾಗದ ಹಾಗೂ ಪ್ಲಾಸ್ಟಿಕ್ ಶೀಟ್ಸ್ ನಲ್ಲಿ ಮದುವೆಯ ಆಮಂತ್ರಣ ಪತ್ರಿಕೆ ಮುದ್ರಿಸಿರುವುದನ್ನು ನೋಡಿರುತ್ತೇವೆ. ಆದರೆ ತಮಿಳುನಾಡಿನ ಜಿಲ್ಲಾಧಿಕಾರಿಯೊಬ್ಬರು ತಮ್ಮ ಮಗನ ಮದುವೆ ಆಮಂತ್ರಣ ಪತ್ರಿಕೆಯನ್ನು ಕರವಸ್ತ್ರದಲ್ಲಿ ಮುದ್ರಿಸಿ ಆಹ್ವಾನ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು. ಪರಿಸರದ ಬಗ್ಗೆ ಕಾಳಜಿ ವಹಿಸಲು ಕಾಂಚಿಪುರಂ ಜಿಲ್ಲಾಧಿಕಾರಿ ಸೆಲ್ವಮನಿ ವೆಂಕಟೇಶ್ ಅವರು ತಮ್ಮ ಮಗನ ಮದುವೆಗೆ ಈ ವಿಶೇಷ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಸೆಲ್ವಮನಿ ತಮ್ಮ ಮಗನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಕರವಸ್ತ್ರದಲ್ಲಿ ಮುದ್ರಿಸಿದ್ದಾರೆ.
Advertisement
Advertisement
ಸೆಲ್ವಮನಿ ಮಗ ಬಾಲಾಜಿಯ ಮದುವೆ ತಿರುಚ್ಚಿಯಲ್ಲಿ ನಡೆಯಲಿದೆ. ಈ ಮದುವೆಯ ವಿಶೇಷವೇನೆಂದರೆ ಆಮಂತ್ರಣ ಪತ್ರಿಕೆಯಿಂದ ಉಡುಗೊರೆವರೆಗೂ ಪರಿಸರ ಸಂರಕ್ಷಣೆಯನ್ನು ನೋಡಿಕೊಳ್ಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸೆಲ್ವಮನಿ, ಈಗಿನ ಕಾಲದಲ್ಲಿ ಆಮಂತ್ರಣ ಪತ್ರಿಕೆ ತುಂಬಾ ದುಬಾರಿ ಆಗಿದೆ. ಮದುವೆಯಾದ ಕೆಲವು ದಿನಗಳಲ್ಲಿ ಪತ್ರಿಕೆಯನ್ನು ಕಸದಬುಟ್ಟಿಗೆ ಎಸೆಯುತ್ತಾರೆ. ಇದರಿಂದ ನನಗೆ ತುಂಬಾ ಬೇಸರವಾಗುತ್ತಿತ್ತು ಎಂದರು.
Advertisement
Advertisement
ನಾನು ಸಾಕಷ್ಟು ಫ್ಯಾನ್ಸಿ ಆಗಿರುವ ವೆಡ್ಡಿಂಗ್ ಕಾರ್ಡ್ ಗಳನ್ನು ನೋಡಿದ್ದೇನೆ. ಕೊನೆಗೂ ಜನರು ಅದನ್ನು ಕೂಡ ಎಸೆಯುತ್ತಿದ್ದರು. ಈ ವಿಷಯಗಳ ಬಗ್ಗೆ ಗಮನ ಹರಿಸಿ ಆಮಂತ್ರಣ ಪತ್ರಿಕೆಯನ್ನು ಕಾಗದದ ಬದಲು ಕರವಸ್ತ್ರದಲ್ಲಿ ಮುದ್ರಿಸಲು ನಿರ್ಧರಿಸಿದೆವು. ಈ ಕರವಸ್ತ್ರವನ್ನು ಎರಡು-ಮೂರು ಬಾರಿ ತೊಳೆದರೆ ಪ್ರಿಂಟ್ ಹೋಗುತ್ತದೆ. ಆಗ ಎಲ್ಲರೂ ಈ ಕರವಸ್ತ್ರವನ್ನು ಉಪಯೋಗಿಸಬಹುದು ಎಂದು ತಿಳಿಸಿದ್ದಾರೆ.
ಈ ಕರವಸ್ತ್ರ ಪತ್ರಿಕೆ ಜೊತೆ ಪೌಚ್ ಕೂಡ ನೀಡಲಾಗುತ್ತಿದೆ. ಇದು ಮಹಿಳೆಯರಿಗೆ ಇಷ್ಟವಾಗಿದ್ದು, ಪೌಚ್ ನಲ್ಲಿ ಚಿನ್ನಾಭರಣವನ್ನು ಇಟ್ಟುಕೊಳ್ಳಲು ಶುರು ಮಾಡಿದ್ದಾರೆ. ಸೆಲ್ವಮನಿ ಅವರ ಮಗನ ಮದುವೆಯಲ್ಲಿ ಪ್ಲಾಸ್ಟಿಕ್ ಕಪ್ ಹಾಗೂ ಟಿಶ್ಯೂ ಪೇಪರ್ ಬಳಸುವುದನ್ನು ಕೂಡ ನಿಲ್ಲಿಸಲಾಗಿದೆ. ಇದರ ಬದಲಾಗಿ ಸ್ಟೀಲ್ ಗ್ಲಾಸ್ ಹಾಗೂ ಹತ್ತಿ ಟವಲ್‍ಗಳನ್ನು ನೀಡಲಾಗುತ್ತಿದೆ. ಆಮಂತ್ರಣ ಪತ್ರಿಕೆ ಜೊತೆ ಅತಿಥಿಗಳಿಗೆ 2000 ಬೇವು ಹಾಗೂ ತರಕಾರಿ ಬೀಜಗಳನ್ನು ವಿತರಿಸಲಾಗಿದೆ.