ಹೀಗಾದ್ರೆ ಪಕ್ಷ ಕಟ್ಟೋದು ಹೇಗೆ – ವೇಣುಗೋಪಾಲ್ ವಿರುದ್ಧ ಖರ್ಗೆ ಅಸಮಾಧಾನ

Public TV
2 Min Read
kpcc meeting parameshwar 1

ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟದ ಸೂತ್ರ ಹಾಗೂ ಖಾತೆ ಹಂಚಿಕೆ ಪ್ರಕ್ರಿಯೆ ಪ್ರಕಟವಾಗುತ್ತಿದ್ದಂತೆ, ಕೈ ಪಕ್ಷದಲ್ಲಿ ಪೂರ್ಣಾವಧಿವರಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಟ್ಟಿದ್ದು ಯಾಕೆ ಎನ್ನುವ ವಿಚಾರದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.

ವಿಧಾನ ಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ನೇತೃತ್ವದಲ್ಲಿ ಸೋಲಿನ ಪರಾಮರ್ಶೆ ಮತ್ತು ಆತ್ಮಾವಲೋಕನ ಸಭೆ ಶನಿವಾರ ನಡೆಯಿತು. ವಸಂತ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ಭವನದಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಪದಾಧಿಕಾರಿಗಳು ಮತ್ತು ಮುಂಚೂಣಿ ಘಟಕದ ಅಧ್ಯಕ್ಷರುಗಳು, ಜಿಲ್ಲಾಧ್ಯಕ್ಷರುಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಕಾಂಗ್ರೆಸ್ ಶಾಸಕರ ಬಲ 78 ಇದ್ದರೂ, 37 ಸ್ಥಾನಗಳನ್ನು ಮಾತ್ರ ಹೊಂದಿರುವ ಜೆಡಿಎಸ್‍ಗೆ 5 ವರ್ಷ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟಿದ್ದು ಎಷ್ಟು ಸರಿ ಎಂದು ರಾಜ್ಯ ಉಸ್ತುವಾರಿ ವೇಣುಗೋಪಾಲ್‍ರನ್ನು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಸಭೆಯಲ್ಲಿನ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ಮುಖ್ಯಮಂತ್ರಿ ಅಲ್ಲದೇ ಹಣಕಾಸು ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ಜೆಡಿಎಸ್‍ಗೆ ಬಿಟ್ಟು ಕೊಟ್ಟಿರುವುದು ಎಷ್ಟು ಸರಿ ಅಂತ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಪಕ್ಷೇತರರಿಗೆ 2 ಸ್ಥಾನ ಬಿಟ್ಟರೆ ಉಳಿದ 20 ಸಚಿವ ಸ್ಥಾನಗಳಿಗೆ 40ಕ್ಕೂ ಹೆಚ್ಚು ಶಾಸಕರು ಆಕಾಂಕ್ಷಿಗಳಾಗಿದ್ದು, ಯಾವುದೇ ಕಾರಣಕ್ಕೂ ಈ ಹಿಂದೆ ಸಚಿವರಾಗಿದ್ದವರಿಗೆ ಮತ್ತೆ ಸ್ಥಾನ ನೀಡಬಾರದೆಂಬ ಒತ್ತಡವೂ ಜೋರಾಗಿದೆ.

kpcc meeting parameshwar 2

ಆತ್ಮಾವಲೋಕನ ಸಭೆಯಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ ಅಂತ ಉಪ ಮುಖ್ಯಮಂತ್ರಿ ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ. 5 ವರ್ಷ ಜೆಡಿಎಸ್‍ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡುವ ಹೈಕಮಾಂಡ್ ತೀರ್ಮಾನವೇ ಅಂತಿಮ ಅಂತ ಪರಮೇಶ್ವರ್ ಹೇಳಿದ್ದಾರೆ.

ಒಂದೆರಡು ದಿನಗಳಲ್ಲಿ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ, ಹಲವು ಮುಖಂಡರು ಹೈಕಮಾಂಡ್ ಭೇಟಿ ಆಗುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಸೇರಿದಂತೆ ಸಚಿವರ ಪಟ್ಟಿ ಅಂತಿಮಗೊಳಿಸುವ ಸಾಧ್ಯತೆಯಾಗಿವೆ.

ವೇಣುಗೋಪಾಲ್‍ಗೆ ಖರ್ಗೆ ಪ್ರಶ್ನೆ:
5 ವರ್ಷ ಕುಮಾರಸ್ವಾಮಿ ಅಂತ ನಾವು ಬಹಿರಂಗವಾಗಿ ಹೇಳೇ ಇಲ್ಲ ಆದರೆ ನೀವು (ವೇಣುಗೋಪಾಲ್) ಒಪ್ಪಂದದಲ್ಲಿ ಹೇಳಿದ್ದು ಏಕೆ? `ಕೈ’ 78 ಶಾಸಕರನ್ನು ಹೊಂದಿದ್ದರೂ ಜೆಡಿಎಸ್‍ಗೆ ಸಿಎಂ ಸ್ಥಾನ ಬಿಟ್ಟು ಕೊಟ್ಟಿದ್ಯಾಕೆ? ಐದು ವರ್ಷ ಸಿಎಂ ಸ್ಥಾನ ಬಿಟ್ಟು ಕೊಟ್ಟರೆ ಪಕ್ಷ ಕಟ್ಟೋದು ಹೇಗೆ? ಹಣಕಾಸು, ಇಂಧನ, ಲೋಕೋಪಯೋಗಿ ಖಾತೆ ಬಿಟ್ಟು ಕೊಟ್ಟಿದ್ಯಾಕೆ? ಜೆಡಿಎಸ್‍ಗೆ ನಾವು ಶರಣಾಗತಿ ಆಗುವುದು ಬೇಕಿತ್ತೇ? ಲೋಕಸಭೆ ಎಲೆಕ್ಷನ್ ಬಳಿಕ ಪರಿಸ್ಥಿತಿ ಹೇಗಿರುತ್ತೋ ಗೊತ್ತಿಲ್ಲ ಎಂದು ಖರ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಪರಂ ಹೇಳಿದ್ದೇನು?
ಜೆಡಿಎಸ್ ಜೊತೆಗೆ ಸರ್ಕಾರ ರಚನೆ ನೋವಿನ ಸಂಗತಿಯಾಗಿದ್ದು ಅನಿವಾರ್ಯ ಕಾರಣಗಳಿಂದಾಗಿ ಮೈತ್ರಿ ಮಾಡಿಕೊಂಡಿದ್ದೇವೆ. ಪ್ರಮುಖ ಖಾತೆಗಳು ನಮಗೆ ಬೇಕು ಅಂತ ಅವರು ಪಟ್ಟು ಹಿಡಿದು ಪಡೆದುಕೊಂಡಿದ್ದಾರೆ. ರಾಷ್ಟ್ರೀಯ ಪಕ್ಷವಾಗಿ ನಾವು ಸಣ್ಣ ಪಕ್ಷದ ಮಾತು ಕೇಳಬೇಕಿರೋದು ನೋವಿನ ಸಂಗತಿಯಾಗಿದೆ. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಳ್ಳಬೇಕು ಅಷ್ಟೇ ಅಲ್ಲದೇ ಲೋಕಸಭೆ, ಸ್ಥಳೀಯ ಸಂಸ್ಥೆಗಳ ಎಲೆಕ್ಷನ್‍ನಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಪರಮೇಶ್ವರ್ ಸಭೆಯಲ್ಲಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *