ಮೈಸೂರು: ಮಾಜಿ ಸಚಿವ ಜಿ.ಟಿ.ದೇವೇಗೌಡರಿಗೆ ಜೆಡಿಎಸ್‍ಗಿಂತ ಬಿಜೆಪಿ ಸಖ್ಯ ಹೆಚ್ಚು ಖುಷಿ ಕೊಟ್ಟಂತೆ ಕಾಣುತ್ತಿದ್ದು, ದಿನೇ ದಿನೇ ಬಿಜೆಪಿ ನಾಯಕರ ಜೊತೆ ಜಿಟಿಡಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇಂದು ಮೈಸೂರಿಗೆ ಬಂದಿದ್ದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಜೊತೆ ಜಿ.ಟಿ.ದೇವೇಗೌಡ ಅವರು ಫುಲ್ ರೌಂಡ್ಸ್ ಹಾಕಿದ್ದಾರೆ. ಚಾಮುಂಡಿ ಬೆಟ್ಟ ಮತ್ತು ಸುತ್ತೂರು ಮಠದಲ್ಲಿ ಡಿಸಿಎಂಗೆ ಸಾಥ್ ಕೊಟ್ಟ ಜಿಟಿಡಿ, ಕಾರಜೋಳ ಕಾರಿನಲ್ಲೇ ಸುತ್ತೂರು ಮಠಕ್ಕೆ ಬಂದಿಳಿದಿದ್ದರು.
Advertisement
Advertisement
ಇತ್ತೀಚೆಗೆ ಬಿಜೆಪಿ ನಾಯಕರ ಜೊತೆ ಹೆಚ್ಚು ಓಡಾಡುತ್ತಿರುವ ಜಿಟಿಡಿ, ಜೆಡಿಎಸ್ ಶಾಸಕರಾಗಿದ್ದರೂ, ಜೆಡಿಎಸ್ ನಾಯಕರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇದನ್ನು ನೋಡಿದರೆ, ಮತ್ತೆ ಜಿಟಿಡಿ ಬಿಜೆಪಿಗೆ ಹೋಗುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಜಿಟಿಡಿ ಅವರು ಗೋವಿಂದ ಕಾರಜೋಳ ಅವರ ಜೊತೆ ಓಡಾಡಿದರೂ ಸಹ ಬಿಜೆಪಿ ಶಾಸಕ ಎಸ್.ಎ.ರಾಮ್‍ದಾಸ್ ಮಾತ್ರ ಉಪ ಮುಖ್ಯಮಂತ್ರಿಗಳ ಬಳಿ ಸುಳಿಯಲೇ ಇಲ್ಲ.
Advertisement
ಡಿಸಿಎಂ ಜೊತೆ ಸುತ್ತಾಟದ ಕುರಿತು ಪ್ರತಿಕ್ರಿಯಿಸಿದ ಜಿಟಿಡಿ, ಕ್ಷೇತ್ರದ ಕೆಲಸಗಳನ್ನು ಮಾಡಿಸಿಕೊಳ್ಳಲು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರ ಸಭೆಗೆ ಬಂದಿದ್ದೇನೆ. ಹೊಸ ಸರ್ಕಾರ ಬಂದ ನಂತರ ನನ್ನ ಕ್ಷೇತ್ರದ ಕೆಲಸಗಳು ನಿಂತುಹೋಗಿತ್ತು. ಚಾಮುಂಡಿ ಬೆಟ್ಟದಲ್ಲಿ ಲೋಕೋಪಯೋಗಿ ಇಲಾಖೆಯ ಹಲವು ಕೆಲಸಗಳು ನಿಂತುಹೋಗಿದೆ. ದಸರಾ ಬರುತ್ತಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ಕಾಮಗಾರಿಯಾಗಬೇಕಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಈಗಾಗಲೇ ಚರ್ಚಿಸಿದ್ದೇನೆ. ಇಬ್ಬರೂ ಈ ವಿಚಾರವನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಬಗೆಹರಿಸುವುದಾಗಿ ಹೇಳಿದ್ದಾರೆ ಎಂದು ಜಿಟಿಡಿ ಸ್ಪಷ್ಟಪಡಿಸಿದರು.
Advertisement
ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಲ್.ನಾಗೇಂದ್ರ ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಕಾಲಿಗೆ ಅಡ್ಡಬಿದ್ದಿದ್ದಾರೆ.