ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ (Anna Bhagya Scheme) 5 ಕೆಜಿ ಅಕ್ಕಿ ಬದಲಿಗೆ ಫಲಾನುಭವಿಗಳಿಗೆ ನೀಡಲು ಉದ್ದೇಶಿಸಿರುವ ಹಣವನ್ನು ನಾಳೆಯಿಂದಲೇ ಖಾತೆಗೆ ಜಮೆ ಮಾಡಲು ಸಾಧ್ಯವಿಲ್ಲ. ಇನ್ನು 10-15 ದಿನಗಳ ಕಾಲ ಸಮಯ ಬೇಕಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಜ್ಞಾನೇಂದ್ರ (Jnanendra) ಹೇಳಿದ್ದಾರೆ. ಹೇಳಿದ್ದಾರೆ.
ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ 5 ಕೆಜಿ ಅಕ್ಕಿ ಬದಲಿಗೆ ಹಣ ಜಮೆ ಮಾಡುವ ಕುರಿತು ʻಪಬ್ಲಿಕ್ ಟಿವಿʼಯೊಂದಿಗೆ ಜ್ಞಾನೇಂದ್ರ ಅವರು ಮಾತನಾಡಿದ್ದಾರೆ. ಅನ್ನಭಾಗ್ಯದ ದುಡ್ಡು ಜಮೆ ಆಗೋದು ಹೇಗೆ? ಖಾತೆಗೆ ಹಣ ಜಮೆ ಆಗಬೇಕಾದ್ರೆ ಜನ ಏನು ಮಾಡಬೇಕು? ಎಂಬುದನ್ನು ಸಮಗ್ರವಾಗಿ ವಿವರಿಸಿದ್ದಾರೆ.
ಫಲಾನುಭವಿಗೆ ದುಡ್ಡು ಹಾಕಲು ಸಮಸ್ಯೆ ಏನು?
ಮೊದಲಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಮಗ್ರವಾಗಿ ದಾಖಲೆಗಳನ್ನ ಸಂಗ್ರಹಿಸಬೇಕಿದೆ. ನಮ್ಮಲ್ಲಿ ಒಟ್ಟು 1.78 ಕೋಟಿ ರೇಷನ್ ಕಾರ್ಡ್‌ಗಳಿವೆ. ಅವುಗಳಲ್ಲಿ 1.28 ಕೋಟಿ ಬಿಪಿಎಲ್ ಕಾರ್ಡ್‌ದಾರರು (BPL Card) ಇದ್ದಾರೆ. ಈಪೈಕಿ 1.22 ಕೋಟಿ ಕಾರ್ಡ್‌ಗಳಲ್ಲಿ ಕನಿಷ್ಠ ಕುಟುಂಬದ ಒಬ್ಬರಾದರೂ ಬ್ಯಾಂಕ್ ಖಾತೆ ಹೊಂದಿದ್ದಾರೆ. ಇನ್ನುಳಿದ 6 ಲಕ್ಷ ಕಾರ್ಡ್‌ಗಳಲ್ಲಿ ಸಮಸ್ಯೆಯಾಗಿದೆ. ಕೆಲವರು ಬ್ಯಾಂಕ್ ಖಾತೆ (Bank Account) ಹೊಂದಿದ್ದರೆ, ಆಧಾರ್ ಲಿಂಕ್ (Aadhar Link) ಆಗಿಲ್ಲ. ಆಧಾರ್ ಲಿಂಕ್ ಆಗಿದ್ದರೆ ಬ್ಯಾಂಕ್ ಖಾತೆ ಆಕ್ಟೀವ್ ಆಗಿಲ್ಲ. ಈ ರೀತಿಯ ಸಮಸ್ಯೆಗಳು ಕಂಡುಬಂದಿವೆ. ಆದ್ದರಿಂದ ನಾಳೆಯೇ ಎಲ್ಲರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡೋದು ಕಷ್ಟ ಎಂದು ತಿಳಿಸಿದ್ದಾರೆ.
ಇದೀಗ ಹೋಬಳ್ಳಿ ಮಟ್ಟದಲ್ಲಿ ಹಾಗೂ ಪೋಸ್ಟ್ ಆಫೀಸ್‌ಗಳಲ್ಲೂ ಬ್ಯಾಂಕಿಂಗ್ ವ್ಯವಸ್ಥೆಯಿದೆ. ಫಲಾನುಭವಿಗಳು ಬೇಗನೇ ಖಾತೆ ಮಾಡಿಕೊಳ್ಳಬಹುದು. ಖಾತೆ ಹೊಂದಿದವರು ಶೀಘ್ರವೇ ಆಕ್ಟೀವ್ ಮಾಡಿಸಿಕೊಂಡರೆ, ಮುಂದಿನ ತಿಂಗಳಿಂದಲೇ ಹಣ ಜಮೆಯಾಗಲಿದೆ. ನಾಳೆ ಯೋಜನೆ ಜಾರಿಯಾದರೆ ಸಾಂಕೇತಿಕವಾಗಿ ಖಾತೆಗೆ ಹಣ ಹಾಕಬಹುದು ಎಂದು ಹೇಳಿದ್ದಾರೆ.
1.78 ಕೋಟಿ ರೇಷನ್ ಕಾರ್ಡ್ ಇರುವುದರಿಂದ ಅವುಗಳಲ್ಲಿ ಬ್ಯಾಂಕ್ ಖಾತೆ ಹೊಂದಿರವರನ್ನು ಪ್ರತ್ಯೇಕಿಸಬೇಕಾಗುತ್ತದೆ. ನಂತರ ಪೂರಕ ದಾಖಲೆ ಇದೆಯೇ? ಅಧಾರ್ ಲಿಂಕ್ ಆಗಿರುವ ಖಾತೆಗಳು ನಿಷ್ಕ್ರಿಯವಾಗಿದ್ಯಾ? ಎಲ್ಲವನ್ನೂ ನೋಡಬೇಕು. ಜೊತೆಗೆ ಆರ್ಥಿಕ ಸ್ಥಿತಿಯನ್ನೂ ಅಂದಾಜಿಸಬೇಕು. ಎಲ್ಲ ದತ್ತಾಂಶಗಳನ್ನ ಪರಿಶೀಲಿಸಿದ ನಂತರ ಸರ್ಕಾರಕ್ಕೆ ದಾಖಲೆ ಸಲ್ಲಿಸಲಾಗುತ್ತದೆ. ಮುಂದಿನ 10-15 ದಿನಗಳಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆ ನಂತರ ಜನರ ಖಾತೆಗೆ ಅಕ್ಕಿ ಹಣ ಜಮೆಯಾಗಲಿದೆ ಎಂದು ವಿವರಿಸಿದ್ದಾರೆ.
ಕುಟುಂಬದ ಮುಖ್ಯಸ್ಥರಿಗೆ ಮೊದಲ ಆದ್ಯತೆ:
ಅಕ್ಕಿ ಹಣ ನೀಡಲು ಕುಟುಂಬದ ಮುಖ್ಯಸ್ಥರಿಗೆ ಮೊದಲ ಆದ್ಯತೆ ನೀಡಲಿದ್ದೇವೆ. ಅದರಲ್ಲೂ ಹಿರಿಯ ಮಹಿಳೆ ಯಾರಿರುತ್ತಾರೋ ಅವರ ಖಾತೆಗೆ ಹಣ ಜಮೆ ಮಾಡಲು ಕ್ರಮ ವಹಿಸುತ್ತೇವೆ. ಶೇ.94.6 ಪಡಿತರ ಚೀಟಿಯಲ್ಲಿ ಮಹಿಳೆಯರೇ ಕುಟುಂಬದ ಮುಖ್ಯಸ್ಥರಿದ್ದಾರೆ. ಶೇ.5 ರಷ್ಟು ಪುರುಷರಿದ್ದಾರೆ. ಒಂದು ವೇಳೆ ಕುಟುಂಬದ ಮುಖ್ಯಸ್ಥರು ಬ್ಯಾಂಕ್ ಖಾತೆ ಹೊಂದಿಲ್ಲವಾದಲ್ಲಿ, ಕುಟುಂಬದ ಇತರ ಸದಸ್ಯರ ಖಾತೆಗೆ ಹಣ ಜಮೆ ಮಾಡುತ್ತೇವೆ.
ಡೆಡ್‌ಲೈನ್ ಫಿಕ್ಸ್..?: ಸುಮಾರು 6 ಲಕ್ಷ ರೇಷನ್ ಕಾರ್ಡ್‌ಗೆ ಬ್ಯಾಂಕ್ ಖಾತೆ ಸಮಸ್ಯೆಯಿದೆ. ಆದ್ದರಿಂದ ಎಲ್ಲಾ ದತ್ತಾಂಶಗಳನ್ನು ಪರಿಶೀಲಿಸಿ ಇನ್ನೆರಡು ದಿನಗಳಲ್ಲಿ ಬ್ಯಾಂಕ್ ಖಾತೆ ಮಾಡಿಸಲು ಡೆಡ್‌ಲೈನ್ ಫಿಕ್ಸ್ ಮಾಡುತ್ತೇವೆ ಎಂದು ಜ್ಞಾನೇಂದ್ರ ತಿಳಿಸಿದ್ದಾರೆ.
Web Stories