– ವಿದೇಶದಿಂದಲೇ ಸ್ಕೇಚ್ ರೆಡಿ ಮಾಡಿದ್ದ ಶಂಕಿತ ಝನೈದ್
– ಪ್ಲಾನ್-ಬಿ ಟೀಂ ಬೆನ್ನುಬಿದ್ದ ಎನ್‌ಐಎ ಅಧಿಕಾರಿಗಳು
ಬೆಂಗಳೂರು: ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಮೂವರು ಶಂಕಿತರನ್ನು ಬಂಧನ ಮಾಡಿದ ಬೆನ್ನಲ್ಲೇ ಹಲವು ವಿಚಾರಗಳು ಒಂದೊಂದೇ ಹೊರಗೆ ಬರ್ತಿವೆ.
ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿರುವ ಉಗ್ರ (Terrorist) ನಾಸೀರ್‌ನನ್ನ ಜೈಲಿನಿಂದ ಎಸ್ಕೇಪ್ ಮಾಡಿಸಲು ಪ್ಲ್ಯಾನ್ ಮಾಡಿದ್ದ ಟೀಂ, ಕಳೆದ ಎರಡು ವರ್ಷಗಳ ಹಿಂದೆ ಸಿಸಿಬಿ ಕೈಗೆ ಸಿಕ್ಕಿಬಿದ್ದಿದ್ರು. ಈ ವೇಳೆ ಕೃತ್ಯಕ್ಕೆ ಬಳಸಲು ರೆಡಿ ಮಾಡಿದ್ದ ಹಲವು ಸ್ಟೋಟಕಗಳನ್ನ ಬಯಲಿಗೆಳೆದಿದ್ದರು. ಇದರಿಂದ ಶಾಕ್‌ಗೆ ಒಳಗಾದ ಝನೈದ್, ನಾಸೀರ್ ನನ್ನು ಏನಾದ್ರು ಮಾಡಿ ಹೊರಗೆ ತರಲೇಬೇಕು ಅಂತ ವಿದೇಶದಿಂದಲೇ ಪ್ಲಾನ್-ಬಿ ತಯಾರು ಮಾಡಿದ್ನಂತೆ.
ಎಎಸ್‌ಐ ಚಾಂದ್ ಪಾಷ, ಸೇರಿದಂತೆ ಹಲವರನ್ನ ಬಳಸಿಕೊಂಡು ಆಸಕ್ತ ಮುಸ್ಲಿಂ ಯುವಕರ ಟೀಂ ಕಟ್ಟುವಂತೆ ಸೂಚಿಸಿದ್ದ. ಅಷ್ಟೇ ಅಲ್ದೇ ಅದಕ್ಕೆ ಬೇಕಾದ ಹಣಕಾಸಿನ ನೆರವು ಕೂಡ ಅಲ್ಲಿಂದಲೇ ಮಾಡ್ತಿದ್ದ ಅನ್ನೋದು ಗೊತ್ತಾಗಿದೆ. ಅಷ್ಟರಲ್ಲಿ ಎನ್‌ಐಎ ಅಧಿಕಾರಿಗಳ ಕೈಗೆ ಮೂವರು ಸಿಕ್ಕಿಬಿದ್ದಿದ್ದಾರೆ, ಕೆಲವರು ಮಾತ್ರ ಎಸ್ಕೇಪ್ ಆಗಿದ್ದಾರೆ. ಝನೈದ್‌ನ ಹುಡುಗರೆಲ್ಲಾ ಬಹುತೇಕ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರೋದರಿಂದ ಹೊಸದಾಗಿ ಆಸಕ್ತ ಯುವಕರನ್ನು ಒಟ್ಟುಗೂಡಿಸಿರೋ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಹಾಗಾಗಿ ಇವರ ಪ್ಲ್ಯಾನ್-ಬಿ ಏನಾಗಿತ್ತು? ಇದರಲ್ಲಿ ಯರ‍್ಯಾರು ಇದ್ರು, ಯಾರ ಪಾತ್ರ ಏನಾಗಿತ್ತು? ಅನ್ನೋದರ ತೀವ್ರ ತನಿಖೆಗೆ ಇಳಿದಿದ್ದಾರೆ ಎನ್‌ಐಎ ಅಧಿಕಾರಿಗಳು..
ಎಎಸ್‌ಐ ಚಾಂದ್ ಪಾಷಾ ವಿರುದ್ಧ ತನಿಖೆಗೆ ಆದೇಶ:
ಇನ್ನೂ ಉಗ್ರರಿಗೆ ನೆರವು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಆರ್ ಎಎಸ್‌ಐ ಚಾಂದ್ ಪಾಷಾ (ASI Chand Pasha) ವಿರುದ್ಧ ತನಿಖೆಗೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ. ಇಲಾಖಾ ಹಂತದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.
ಎನ್‌ಐಎ ಈಗಾಗಲೇ ತನಿಖೆ ನಡೆಸುತ್ತಿದೆ, ಮುಂದೆ ನಾವು ಕೂಡ ತನಿಖೆ ಮಾಡಿ ರಿಪೋರ್ಟ್ ಪಡೆಯುತ್ತೇವೆ. ಬಳಿಕ ಪೊಲೀಸ್ ಇಲಾಖೆಯಲ್ಲಿ ಏನ್ ಕ್ರಮ ಇದೆ ಅದನ್ನ ಕೈಗೊಳ್ತೀವಿ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.