ನವದೆಹಲಿ: ಜಿಯೋಗೆ ಅಂತರ್ ಸಂಪರ್ಕ ನೀಡದೇ ಲೋಪ ಎಸಗಿದ್ದಕ್ಕೆ ಡಿಜಿಟಲ್ ಕಮ್ಯೂನಿಕೇಷನ್ ಕಮಿಷನ್(ಡಿಸಿಸಿ) ಏರ್ ಟೆಲ್, ಐಡಿಯಾ ವೊಡಾಫೋನ್ ಕಂಪನಿಗಳಿಗೆ 3,050 ಕೋಟಿ ರೂ. ದಂಡ ವಿಧಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ತನ್ನ ಸೇವೆ ಆರಂಭಗೊಂಡ ಸಮಯದಲ್ಲಿ ಈ ಟೆಲಿಕಾಂ ಕಂಪನಿಗಳು ಅಂತರ್ ಸಂಪರ್ಕ ನೀಡದೇ ಲೋಪ ಎಸಗುತ್ತಿವೆ ಎಂದು ಆರೋಪಿಸಿ ಜಿಯೋ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ(ಟ್ರಾಯ್) ದೂರು ನೀಡಿತ್ತು.
Advertisement
Advertisement
ಡಿಸಿಸಿ ಸರ್ಕಾರದ ನೇಮಿಸಿದ ಸಮಿತಿಯಾಗಿದ್ದು ಟೆಲಿಕಾಂ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ನೀತಿ ಆಯೋಗ, ಆರ್ಥಿಕ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಗಳಿರುತ್ತಾರೆ. ಈಗಾಗಲೇ ವೊಡಾಫೋನ್ ಮತ್ತು ಏರ್ ಟೆಲ್ ಆರ್ಥಿಕ ಮುಗ್ಗಟ್ಟಿನಲ್ಲಿರುವುದು ಡಿಸಿಸಿ ಈಗ ದಂಡಕ್ಕೆ ಅನುಮೋದನೆ ನೀಡಿರುವುದು ಮತ್ತೆ ಹಿನ್ನಡೆಯಾಗಿದೆ.
Advertisement
ಟ್ರಾಯ್ ನೀಡಿದ ಶಿಫಾರಸುಗಳ ಬಗ್ಗೆ ಗಂಭೀರ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಟೆಲಿಕಾಂ ಕಾರ್ಯದರ್ಶಿ ಅರುಣ್ ಸುಂದರ್ರಾಜನ್ ತಿಳಿಸಿದ್ದಾರೆ. ಈ ಹಿಂದಿನ ಸಭೆಯಲ್ಲಿ ಈ ಶಿಫಾರಸ್ಸಿನ ಬದಲಾವಣೆ ಸಾಧ್ಯವೇ ಎಂದು ಕೇಳಿ ಟ್ರಾಯ್ಗೆ ವಾಪಸ್ ಕಳುಹಿಸಲಾಗಿತ್ತು. ಆದರೆ ಟ್ರಾಯ್ ಈ ಶಿಫಾರಸ್ಸಿನಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ತಿಳಿಸಿತ್ತು.
Advertisement
2016ರಲ್ಲೇ ಟ್ರಾಯ್ ಈ ಬಗ್ಗೆ ಮೊದಲ ಶಿಫಾರಸ್ಸು ಮಾಡಿತ್ತು. ಡಿಸಿಸಿ ಅನುಮೋದನೆ ಕೊಟ್ಟ ಬಳಿಕ ಈ ಶಿಫಾರಸ್ಸು ದೂರಸಂಪರ್ಕ ಸಚಿವಾಲಯಕ್ಕೆ ಹೋಗುತ್ತದೆ. ಈ ವಿಚಾರದಲ್ಲಿ ದೂರಸಂಪರ್ಕ ಸಚಿವಾಲಯೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸುಂದರ್ರಾಜನ್ ತಿಳಿಸಿದರು.
ಏನಿದು ಪ್ರಕರಣ?
2016ರ ಸೆಪ್ಟೆಂಬರ್ 5 ರಂದು ಜಿಯೋ ಆರಂಭಗೊಂಡಿದ್ದು, ಈ ಸಂದರ್ಭದಲ್ಲಿ ಒಳ ಬರುವ ಮತ್ತು ಹೊರ ಹೋಗುವ ಕರೆಗಳಲ್ಲಿ ಜಿಯೋ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದರು. ಎರಡು ಟೆಲಿಕಾಂ ಕಂಪನಿಗಳ ಮಧ್ಯೆ ಒಂದು ಕರೆ ಪೂರ್ಣಗೊಳ್ಳಬೇಕಾದರೆ ಪಾಯಿಂಟ್ಸ್ ಆಫ್ ಇಂಟರ್ ಕನೆಕ್ಷನ್ ಬಳಕೆ ಮಾಡಲಾಗುತ್ತದೆ. ಅಕ್ಟೋಬರ್ 2016ರಲ್ಲಿ ಟ್ರಾಯ್ ಜಿಯೋಗೆ ಅಂತರ್ ಸಂಪರ್ಕ ನೀಡದೇ ಲೋಪ ಎಸಗಿದ್ದಕ್ಕೆ ಏರ್ ಟೆಲ್ ಮತ್ತು ವೊಡಾಫೋನ್ ಕಂಪನಿಗಳಿಗೆ 1,050 ಕೋಟಿ ರೂ., ಐಡಿಯಾಗೆ 950 ಕೋಟಿ ರೂ. ದಂಡ ವಿಧಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.
ಗ್ರಾಹಕ ವಿರೋಧಿ ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಕಡಿಮೆ ಮಾಡಲು ಟೆಲಿಕಾಂ ಕಂಪನಿಗಳು ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡುತ್ತಿದೆ ಎಂದು ಜಿಯೋ ದೂರು ನೀಡಿತ್ತು. ಈ ವಿಚಾರದ ಬಗ್ಗೆ ಏರ್ ಟೆಲ್ ಮತ್ತು ವೊಡಾಫೋನ್ ಕಂಪನಿ, ದಂಡ ವಿಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ಮಾಡುತ್ತೇವೆ. ನ್ಯಾಯಾಲಯದಲ್ಲಿ ನಮಗೆ ನಂಬಿಕೆಯಿದೆ ಎಂದು ತಿಳಿಸಿದೆ.