Connect with us

Latest

ದೆಹಲಿಯಲ್ಲಿ ದಟ್ಟ ಮಂಜು – ಹೆದ್ದಾರಿ ಕಾಣದೆ ಕಾಲುವೆಗೆ ಬಿತ್ತು ಕಾರು

Published

on

Share this

– ಆರು ಸಾವು, ವಿಮಾನಗಳ ಹಾರಾಟ ರದ್ದು
– ಹವಮಾನ ಇಲಾಖೆಯಿಂದ ರೆಡ್ ಅಲರ್ಟ್ ಎಚ್ಚರಿಕೆ

ನವದೆಹಲಿ: ಉತ್ತರ ಭಾರತದಲ್ಲಿ ಕನಿಷ್ಠ ತಾಪಮಾನ ಪರಿಸ್ಥಿತಿ ಮುಂದುವರಿದಿದೆ. ದೆಹಲಿಯಲ್ಲಿ ಇಂದು ದಟ್ಟ ಮಂಜು ಆವರಿಸಿದ್ದು 30ಕ್ಕೂ ಹೆಚ್ಚು ರೈಲು ಸಂಚಾರ, 50 ಅಧಿಕ ವಿಮಾನಗಳ ಹಾರಾಟ ವಿಳಂಬವಾಗಿದೆ. ಅಲ್ಲದೇ ನಾಲ್ಕು ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಸಂಚಾರ ವ್ಯತ್ಯಯವಾಗಿರುವುದರಿಂದ ಪ್ರಯಾಣಿಕರು ತಮ್ಮ ಏರ್‌ಲೈನ್ಸ್‌ ಸಿಬ್ಬಂದಿಯನ್ನು ನಿರಂತರವಾಗಿ ಸಂಪರ್ಕಿಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಬೆಳಗ್ಗೆಯಿಂದಲೇ ಗಾಳಿಯ ಗುಣಮಟ್ಟ ತೀರಾ ಕೆಟ್ಟ ಮಟ್ಟಕ್ಕೆ ಕುಸಿದಿತ್ತು. ಮಾಲಿನ್ಯದ ಜೊತೆಗೆ ದಟ್ಟಮಂಜು ಕವಿದ ಹಿನ್ನೆಲೆಯಲ್ಲಿ ರಸ್ತೆಗಳು ಕಾಣದಂತಹ ವಾತಾವರಣ ಸೃಷ್ಟಿಯಾಗಿತ್ತು. ಮಧ್ಯಾಹ್ನ ಒಂದು ಗಂಟೆಯಾದರೂ ವಾತಾವರಣ ಸಹಜ ಪರಿಸ್ಥಿತಿಗೆ ಬಂದಿರಲಿಲ್ಲ. ವಾಹನ ಸವಾರರು ಸಾಕಷ್ಟು ಪರದಾಡುತ್ತಿದ್ದು ಫಾಗ್ ಲೈಟ್ ಸಹಾಯದಿಂದ ನಿಧಾನವಾಗಿ ವಾಹನ ಚಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ನೊಯ್ಡಾ, ದೆಹಲಿ ಸಂಪರ್ಕಿಸುವ ಹೆದ್ದಾರಿಯಲ್ಲಿ ಅತಿಯಾದ ಮಂಜು ಆವರಿಸಿತ್ತು. ಚಲಿಸುತ್ತಿದ್ದ ಕಾರು ಮುಂದೆ ರಸ್ತೆ ಕಾಣದೆ ಕಾಲುವೆಯೊಂದಕ್ಕೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸತ್ತವರಲ್ಲಿ ಇಬ್ಬರು ಮಕ್ಕಳು ಇದ್ದರೆಂದು ತಿಳಿದು ಬಂದಿದ್ದು, ಘಟನೆಯಲ್ಲಿ ಇನ್ನು 5 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯಿಂದ ಮಾರುತಿ ಎರ್ಟಿಗಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಒಟ್ಟು ಕಾರಿನಲ್ಲಿ 11 ಮಂದಿ ಪ್ರಯಾಣಿಸುತ್ತಿದ್ದರು. ಕಾರಿನಲ್ಲಿದ್ದವರೆಲ್ಲರೂ ಸಂಭಾಲ್ ಜಿಲ್ಲೆಯವರಾಗಿದ್ದು, ದೆಹಲಿಗೆ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಮೃತಪಟ್ಟವರನ್ನು ಮಹೇಶ್ (35), ಕಿಶನ್ ಲಾಲ್ (50), ನೀರೇಶ್ (17), ರಾಮ್ ಖಿಲಾದಿ (75), ಮಲ್ಲು(12), ನೇತ್ರಪಾಲ್ (40) ಎಂದು ಗುರುತಿಸಲಾಗಿದೆ.

ಹವಾಮಾನ ಇಲಾಖೆ ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಭಾನುವಾರ ರೆಡ್ ಅಲರ್ಟ್ ವಾರ್ನಿಂಗ್ ಎಚ್ಚರಿಕೆ ನೀಡಿತ್ತು. ಮಧ್ಯಪ್ರದೇಶದಲ್ಲಿ ಬ್ಲೂ ಅಲರ್ಟ್ ಘೋಷಣೆ ಮಾಡಲಾಗಿತ್ತು. ಇನ್ನೇರಡು ದಿನಗಳ ಕಾಲ ಉತ್ತರ ಭಾರತ ಪ್ರದೇಶದಲ್ಲಿ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.

Click to comment

Leave a Reply

Your email address will not be published. Required fields are marked *

Advertisement