ಲಕ್ನೋ: ಕೇವಲ ಎರಡು ರೂಪಾಯಿಯ ಬಿಸ್ಕೆಟ್ಟನ್ನ ತಾಯಿ ಕೊಡಿಸಲು ನಿರಾಕರಿಸಿದ್ದಕ್ಕೆ ಆಕೆಯ 11 ವರ್ಷದ ಮಗನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಪ್ರದೇಶದ ಷಹಜಹಾನ್‍ಪುರ್ ದ ಹರಿಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಜಹಾರ್ಹರ್ ಹರಿಪುರ ಗ್ರಾಮದ ಚಂದ್ರಬಾನ್ (11) ಆತ್ಮಹತ್ಯೆಗೆ ಶರಣಾದ ಬಾಲಕ. ಚಂದ್ರಬಾನ್ ರಾಜೇಂದ್ರ ಕುಮಾರ್ ಹಾಗೂ ಸುಖಿ ದಂಪತಿಯ ಮೂರು ಮಕ್ಕಳ ಪೈಕಿ ಹಿರಿಯ ಮಗನಾಗಿದ್ದ. ಕಳೆದ ಮಂಗಳವಾರ ಶಾಲೆಗೆ ಹೋಗುವ ಮುನ್ನ ತನ್ನ ತಾಯಿಯ ಬಳಿ ಒಂದು ಕಪ್ ಟೀ ಹಾಗೂ ಬಿಸ್ಕೆಟ್ ಕೊಡುವಂತೆ ಕೇಳಿಕೊಂಡಿದ್ದನು. ಆದರೆ ತಾಯಿ ಟೀ ಮಾತ್ರ ಕೊಟ್ಟು, ಮನೆಯಲ್ಲಿ ಬಿಸ್ಕೆಟ್ ಇಲ್ಲ ಎಂದು ಹೇಳಿದ್ದರು. ನನಗೆ ಬಿಸ್ಕೆಟ್ ಬೇಕೇ ಬೇಕು. ಬಿಸ್ಕೆಟ್ ತರಲು 2 ರೂಪಾಯಿ ಕೊಡುವಂತೆ ತಾಯಿ ಬಳಿ ಬಾಲಕ ಹಠ ಹಿಡಿದಿದ್ದ. ಆದರೆ ತಾಯಿ ಮಾತ್ರ ಅವನ ಮಾತನ್ನು ನಿರಾಕರಿಸಿದ್ದರು.
Advertisement
Advertisement
ತಾಯಿಯ ಮಾತಿನಿಂದ ಕುಪಿತಗೊಂಡಿದ್ದ ಚಂದ್ರಬಾನ್ ತನ್ನ ತಾಯಿ ಹಾಗೂ ಸಹೋದರಿ ಜೊತೆ ಜಗಳವಾಡಿದ್ದನು. ಅಲ್ಲದೇ ತಾಯಿಯ ವೇಲ್ ಅನ್ನು ತೆಗೆದುಕೊಂಡು ಮನೆಯಿಂದ ಹೊರಟು ಹೋಗಿದ್ದ. ಮನೆಯಿಂದ ಹೋದ ಬಳಿಕ ಎಷ್ಟೇ ಸಮಯವಾದರೂ ಬಾಲಕ ಮನೆಗೆ ಹಿಂದಿರುಗಿರಲಿಲ್ಲ. ಆದರೆ ಮಧ್ಯಾಹ್ನದ ಹೊತ್ತಿಗೆ ಜಮೀನಿನ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರು ಹಾಗೂ ಬಾಲಕನ ಪೋಷಕರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಮದ್ನಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಂತರ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು.
Advertisement
ಈ ಬಗ್ಗೆ ಮದ್ನಾಪುರ್ ಪೊಲೀಸ್ ಠಾಣೆಯ ಅಧಿಕಾರಿ ಇಶ್ತಿಯಾಕ್ ಅಹಮದ್ ಮಾತನಾಡಿ, ಕೇವಲ ತನ್ನ ತಾಯಿ ಬಿಸ್ಕೆಟ್ ತಿನ್ನಲು 2 ರೂಪಾಯಿ ಹಣವನ್ನು ನೀಡದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಸಂಗತಿಯನ್ನು ಪೋಷಕರು ಹೇಳಿದ್ದರು. ಆದರೆ ನಾವು ಅದನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ. ಆದರೆ ಬಾಲಕನ ಮರಣೋತ್ತರ ಪರೀಕ್ಷೆಯಲ್ಲಿ ಬಾಲಕ ಸ್ವತಃ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನುವ ವರದಿ ಬಂದಿದೆ ಎಂದು ಹೇಳಿದ್ದಾರೆ.
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಬಾಲಕನ ತಂದೆ, ನನ್ನ ಮಗ ತುಂಬಾ ಮುಂಗೋಪಿಯ ಸ್ವಭಾವ ಹೊಂದಿದ್ದ. ಆದರೆ ಅವನು ಈ ರೀತಿ ದುಡುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ನಿರೀಕ್ಷಿಸಿರಲಿಲ್ಲ. ಮಗನ ಸಾವಿನಿಂದ ನಾವು ಆಘಾತಕ್ಕೊಳಗಾಗಿದ್ದೇವೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv