ನವದೆಹಲಿ: ಡೆಂಘೀಯಿಂದ ಬಳಲುತ್ತಿದ್ದ 7 ವರ್ಷದ ಬಾಲಕಿಯ ಚಿಕಿತ್ಸೆಗಾಗಿ ಗುರ್ಗಾಂವ್‍ನ ಆಸ್ಪತ್ರೆಯೊಂದು ಬರೋಬ್ಬರಿ 16 ಲಕ್ಷ ರೂ. ಬಿಲ್ ಮಾಡಿರೋದು ವರದಿಯಾಗಿದೆ. ಇಲ್ಲಿನ ಫೋರ್ಟಿಸ್ ಆಸ್ಪತ್ರೆಯ ಐಸಿಯುನಲ್ಲಿ 15 ದಿನಗಳವರೆಗೆ ದಾಖಲಾಗಿದ್ದ ಬಾಲಕಿ ಆದ್ಯಾ ರಾಕ್‍ಲ್ಯಾಂಡ್ ಆಸ್ಪತ್ರೆಗೆ ರವಾನಿಸುವಾಗ ಮೃತಪಟ್ಟಿದ್ದಾಳೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ನಂತರ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದ್ರೆ ಈ ಪ್ರಕರಣದಲ್ಲಿ ನಮ್ಮಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಫೋರ್ಟಿಸ್ ಆಸ್ಪತ್ರೆ ಹೇಳಿದೆ. ಬಾಲಕಿ ಆದ್ಯಾ ಸಿಂಗ್‍ಗೆ ಚಿಕಿತ್ಸೆ ನೀಡುವಾಗ ಎಲ್ಲಾ ವೈದ್ಯಕೀಯ ಶಿಷ್ಟಾಚಾರಗಳನ್ನ ಅನುಸರಿಸಲಾಗಿದೆ ಎಂದು ಹೇಳಿದೆ. 15.79 ಲಕ್ಷ ರೂ. ಚಾರ್ಜ್ ಮಾಡಲಾಗಿದೆ ಎಂದು ಆರೋಗ್ಯ ಸಚಿವರಿಗೆ ನೀಡಿದ ಸ್ಪಷ್ಟನೆಯಲ್ಲಿ ಫೋರ್ಟಿಸ್ ಆಸ್ಪತ್ರೆ ಹೇಳಿದೆ.
Advertisement
ನವೆಂಬರ್ 17ರಂದು ಬಾಲಕಿಯ ತಂದೆಯ ಸ್ನೇಹಿತರೊಬ್ಬರು ಟ್ವಿಟ್ಟರ್‍ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದರು. ಡೆಂಘೀಯಿಂದ ನನ್ನ ಸ್ನೇಹಿತರೊಬ್ಬರ ಮಗಳು 15 ದಿನಗಳ ಕಾಲ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದಳು. 1700 ಗ್ಲವ್ಸ್ ಗೂ ಸೇರಿದಂತೆ ಒಟ್ಟು 18 ಲಕ್ಷ ರೂ. ಬಿಲ್ ಮಾಡಿದ್ದಾರೆ. ಆದ್ರೆ ಕೊನೆಗೆ ಬಾಲಕಿ ಸಾವನ್ನಪ್ಪಿದ್ದಾಳೆ. ಭ್ರಷ್ಟರು ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ 4 ದಿನಗಳಲ್ಲಿ 9 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿತ್ತು. ಈ ಬಗ್ಗೆ ಆರೋಗ್ಯ ಸಚಿವರು ಪ್ರತಿಕ್ರಿಯಿಸಿ, ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
Advertisement
Advertisement
ಇಷ್ಟೂ ದಿನ ಆಸ್ಪತ್ರೆಯವರು ನಮ್ಮನ್ನ ದಾರಿ ತಪ್ಪಿಸಿದ್ದಾರೆ. ಈ ರೀತಿ ಮತ್ತೆ ಯಾವುದೇ ಆಸ್ಪತ್ರೆ ತನ್ನ ರೋಗಿಗಳೊಂದಿಗೆ ನಡೆದುಕೊಳ್ಳಬಾರದು. ಹೀಗಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಾಲಕಿ ತಂದೆ ಜಯಂತ್ ಸಿಂಗ್ ಹೇಳಿದ್ದಾರೆ. ಮಗಳ ಚಿಕಿತ್ಸೆಯ ವೆಚ್ಚಕ್ಕಾಗಿ ಜಯಂತ್ ತಮ್ಮ ಉಳಿತಾಯದ ಹಣ ಹಾಗೂ ಕುಟುಂಬಸ್ಥರು ನೀಡಿದ ಹಣದ ಜೊತೆಗೆ 5 ಲಕ್ಷ ರೂ. ಖಾಸಗಿ ಲೋನ್ ಪಡೆದಿದ್ದರು ಎಂದು ವರದಿಯಾಗಿದೆ.
Advertisement
ಆದ್ಯಾಳಿಗೆ ಆಗಸ್ಟ್ 27ರಂದು ಜ್ವರ ಕಾಣಿಸಿಕೊಂಡಿತ್ತು. ಎರಡು ದಿನಗಳ ಬಳಿಕ ದ್ವಾರಕಾದ ರಾಕ್‍ಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಆದ್ಯಾಗೆ ಡೆಂಘೀ ಇದೆ ಎಂಬುದು ಗೊತ್ತಾಗಿತ್ತು. ಬಾಲಕಿಯ ಪರಿಸ್ಥಿತಿ ಮತ್ತಷ್ಟು ಚಿಂತಾನಜಕವಾದಾಗ ಆಕೆಯನ್ನು ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲು ಅಲ್ಲಿನ ವೈದ್ಯರು ಸೂಚಿಸಿದ್ದರು. ಅಲ್ಲಿಂದ ಆಗಸ್ಟ್ 31ರಂದು ಕುಟುಂಬಸ್ಥರು ಆದ್ಯಾಳನ್ನು ಫೋರ್ಟಿಸ್ ಆಸ್ಪತ್ರೆಗೆ ರವಾನಿಸಿದ್ದರು. ಆದ್ರೆ ಅಲ್ಲೂ ಕೂಡ ಆದ್ಯಾ ಆರೋಗ್ಯದಲ್ಲಿ ಚೇತರಿಕೆಯಾಗಿರಲಿಲ್ಲ. ಆಕೆಯ ಪರಿಸ್ಥಿತಿ ಹದಗೆಟ್ಟಿದ್ದರಿಂದ ಆಕೆಯನ್ನ ವೆಂಟಿಲೇಷನ್‍ನಲ್ಲಿ ಇಡಲಾಗಿತ್ತು.
10 ದಿನಗಳ ಕಾಲ ಆದ್ಯಾಳನ್ನ ಲೈಫ್ ಸಪೋರ್ಟ್‍ನಲ್ಲಿ ಇರಿಸಿದ್ದ ಆಸ್ಪತ್ರೆ ಭಾರೀ ಮೊತ್ತದ ಬಿಲ್ ಮಾಡಿದೆ. 1600 ಗ್ಲವ್ಸ್, 660 ಸಿರಿಂಜ್‍ಗಳು, ಆ್ಯಂಟಿಬಯಾಟಿಕ್ಸ್ ಹಾಗೂ ಬಳಕೆಯೇ ಮಾಡದ ಶುಗರ್ ಸ್ಟ್ರಿಪ್ಸ್ ಗಾಗಿ ಕೂಡ ಬಿಲ್ ಮಾಡಿದ್ದಾರೆ ಎಂದು ಕುಟುಂಬ ಆರೋಪಿಸಿದೆ.
ಸೆಪ್ಟೆಂಬರ್ 14 ರಂದು ಎಮ್‍ಆರ್‍ಐ ಮಾಡಿದ ನಂತರ ಮೆದುಳಿನಲ್ಲಿ ತೀವ್ರ ಹಾನಿಯಾಗಿರುವುದು ಗೊತ್ತಾಗಿ ವೈದ್ಯರು ಕೈ ಚೆಲ್ಲಿದರು. ನಾವು ಮಗುವನ್ನ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದೆವು. ಆದ್ರೆ ಅದಕ್ಕಾಗಿ ಆಸ್ಪತ್ರೆಯವರು ಆಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಲಿಲ್ಲ ಎಂದು ಹೇಳಿದ್ದಾರೆ.
ಅನಾರೋಗ್ಯದಿಂದ ಆದ್ಯಾಳ ದೇಹ ಊದಿಕೊಂಡಿತ್ತು. ಆಸ್ಪತ್ರೆಯ ಉಡುಪಿನಲ್ಲೇ ಅಲ್ಲಿಂದ ಹೋಗಲು ಹೇಳಿದ್ರು. ಅದಕ್ಕೂ ಹಣ ಕಟ್ಟಲು ಹೇಳಿದ್ರು. ಸೆಪ್ಟೆಂಬರ್ 14 ಹಾಗೂ 15ರ ಮಧ್ಯರಾತ್ರಿ ರಾಕ್‍ಲ್ಯಾಂಡ್ ಆಸ್ಪತ್ರೆಗೆ ಕೊಂಡೊಯ್ದಾಗ ಆದ್ಯಾ ಆಗಲೇ ಸಾವನ್ನಪ್ಪಿದ್ದಾಳೆಂದು ವೈದ್ಯರು ಹೇಳಿದ್ರು ಎಂದು ತಂದೆ ಜಯಂತ್ ಹೇಳಿದ್ದಾರೆ. ಆದ್ರೆ ವಿವಿಧ ಅತ್ಯಾಧುನಿಕ ಚಿಕಿತ್ಸೆಗಳಿಗಾಗಿ ಬಿಲ್ ಮಾಡಲಾಗಿದೆ. ಬಿಲ್ ಬಗ್ಗೆ ಸಂಪೂರ್ಣವಾಗಿ ವಿವರಿಸಿ ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ.