ರಾಮನಗರ: ಜಿಲ್ಲೆಯ ಜನ ಡೆಂಗ್ಯೂ ಮಹಾಮಾರಿಗೆ ಬೆಚ್ಚಿ ಬೀಳುವಂತಾಗಿದ್ದು, ದಿನೇ ದಿನೇ ಡೆಂಗ್ಯೂ ಶಂಕಿತ ಪ್ರಕರಣಗಳು ಹಾಗೂ ಡೆಂಗ್ಯೂ ಜ್ವರಕ್ಕೆ ಒಳಗಾದವರ ಸಂಖ್ಯೆ ಹೆಚ್ಚಾಗುತ್ತಿದೆ.
ಈಗಾಗಲೇ ಸದ್ದಿಲ್ಲದೆ ಎರಡು ಜೀವಗಳು ಡೆಂಗ್ಯೂ ಮಹಾಮಾರಿಗೆ ಬಲಿಯಾಗಿವೆ. ಇದು ಜಿಲ್ಲೆಯ ಜನರನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಜಿಲ್ಲೆಯಲ್ಲಿ ಜನವರಿಯಿಂದ ಕಳೆದ ಜುಲೈ ತಿಂಗಳ ಅಂತ್ಯದವರೆಗೆ 210 ಶಂಕಿತ ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬಂದಿವೆ.
Advertisement
ರಾಮನಗರ ತಾಲೂಕಿನಲ್ಲೇ 173 ಶಂಕಿತ ಪ್ರಕರಣಗಳು ಕಾಣಿಸಿಕೊಂಡಿದ್ದು, ಚನ್ನಪಟ್ಟಣ ತಾಲೂಕಿನಲ್ಲಿ 24, ಕನಕಪುರ ತಾಲೂಕಿನಲ್ಲಿ 2 ಹಾಗೂ ಮಾಗಡಿ ತಾಲೂಕಿನಲ್ಲಿ 11 ಶಂಕಿತ ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಲ್ಲಿ 10 ಡೆಂಗ್ಯೂ ಪ್ರಕರಣಗಳು ರಕ್ತ ಪರೀಕ್ಷೆಯಿಂದ ದೃಢಪಟ್ಟಿವೆ. ರಾಮನಗರ ತಾಲೂಕಿನ ಪಾದರಹಳ್ಳಿಯಲ್ಲಿ ಓರ್ವ ಬಾಲಕಿ ಹಾಗೂ ವಡೇರಹಳ್ಳಿಯಲ್ಲಿ ಮಗುವೊಂದು ಡೆಂಗ್ಯೂನಿಂದ ಮೃತಪಟ್ಟಿದ್ದು, ಜನರಲ್ಲಿ ಮತ್ತಷ್ಟು ಆತಂಕವನ್ನುಂಟು ಮಾಡಿದೆ.
Advertisement
Advertisement
ಇತ್ತೀಚೆಗೆ ಮಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಿದ್ದವು, ಇದೀಗ ರಾಮನಗರದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು, ರಾಜ್ಯಾದ್ಯಂತ ಮಹಾಮಾರಿ ಆವರಿಸುವ ಭೀತಿ ಎದುರಾಗಿದೆ.
Advertisement
ಡೆಂಗ್ಯೂ ಜ್ವರದ ಲಕ್ಷಣಗಳು:
* ಅಧಿಕ ಜ್ವರ, ತಲೆನೋವು, ಸುಸ್ತು ಕಾಣಿಸಿಕೊಳ್ಳುತ್ತವೆ.
* ಮಾಂಸಖಂಡಗಳಲ್ಲಿ, ಕೈ, ಕಾಲುಗಳ ಕೀಲುಗಳಲ್ಲಿ ನೋವು ಉಂಟಾಗುತ್ತದೆ.
* ಕಣ್ಣಿನಲ್ಲಿ ಹೇಳಲಾಗದ ನೋವು, ಉರಿಯಾಗುತ್ತದೆ.
* ಕೆಮ್ಮು, ಗಂಟಲು ಕೆರೆತ ಬರುತ್ತದೆ.
* ಕೆಲವರಿಗೆ ವಾಂತಿ, ತಲೆ ಸುತ್ತು ಕಾಣಿಸಿಕೊಳ್ಳುತ್ತವೆ.
ಡೆಂಗ್ಯೂ ಜ್ವರಕ್ಕೆ ಮನೆ ಮದ್ದು: ಈ ಜ್ವರ ಇರುವ ಬಗ್ಗೆ ಗೊತ್ತಾದ ಮೇಲೆ ಸಾಮಾನ್ಯವಾಗಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಔಷಧಿ ಪಡೆದು ವಿಶ್ರಾಂತಿಗೆ ಸೂಚಿಸಲಾಗುತ್ತದೆ. ಜೊತೆಗೆ ಸಾಕಷ್ಟು ನೀರು ಮತ್ತು ದ್ರವ ಆಹಾರಗಳನ್ನು ಸೇವಿಸಬೇಕಾಗುತ್ತದೆ. ವಿಟಮಿನ್ ಸಿ, ಸಿಟ್ರಸ್ ಅಂಶ ಇರುವ, ನೀರಿನಾಂಶ ಜಾಸ್ತಿ ಇರುವ ಹಣ್ಣುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. ಆದರೆ ಎಣ್ಣೆ, ಮಸಾಲೆಯುಕ್ತ ಆಹಾರವನ್ನು ವರ್ಜಿಸಿದರೆ ಉತ್ತಮ.
ಯಾವ ಆಹಾರಗಳನ್ನು ಸೇವಿಸಬೇಕು:
* ಕಿತ್ತಳೆ ಹಣ್ಣು ಸೇವನೆಯಿಂದ ಡೆಂಗ್ಯೂ ಬೇಗ ಗುಣವಾಗುತ್ತದೆ. ವಿವಿಧ ವಿಟಮಿನ್ ಮತ್ತು ಖನಿಜಾಂಶ ಭರಿತ ಪೌಷ್ಟಿಕ ಹಣ್ಣು, ಅಧಿಕ ನಾರಿನಂಶ, ವಿಟಮಿನ್ ಸಿ ಇರುವ ಮೂಸಂಬಿ, ನಿಂಬೆ ರಸ, ಅನಾನಸ್, ಕಿವಿ ಫ್ರೂಟ್, ದ್ರಾಕ್ಷಿ, ಚಕ್ಕೋತ ಹಣ್ಣುಗಳ ರಸ, ಹಣ್ಣು ಸೇವನೆಯಿಂದ ಅವಶ್ಯ ಪೋಷಕಾಂಶ ದೊರೆಯುತ್ತದೆ.
* ಎಳನೀರು ಸೇವನೆಯಿಂದ ದೇಹದಲ್ಲಿ ಡೆಂಗ್ಯೂನಿಂದ ಕಡಿಮೆ ಆಗಿದ್ದ ನೀರಿನಾಂಶ ಹೆಚ್ಚಳವಾಗುತ್ತದೆ. ದಿನಕ್ಕೆ 2-3 ಎಳನೀರು ಕುಡಿಯಿರಿ.
* ದಾಳಿಂಬೆ ಹಣ್ಣಿನ ಬೀಜಗಳು ಕಬ್ಬಿಣಾಂಶದ ಪ್ರಮುಖ ಮೂಲವಾಗಿವೆ. ದಾಳಿಂಬೆ ರಸ, ಹಣ್ಣು ಸೇವನೆಯಿಂದ ರಕ್ತಕಣಗಳನ್ನು ನಿಯಂತ್ರಣದಲ್ಲಿಡಬಹುದು. ಆಯಾಸವನ್ನೂ ಕಡಿಮೆಗೊಳಿಸುತ್ತದೆ.
* ಡೆಂಗ್ಯೂದಿಂದ ಬಳಲುತ್ತಿರುವವರಿಗೆ ಪಪ್ಪಾಯ ಎಲೆ ಮತ್ತು ಬೀಜಗಳ ರಸವೂ ಅತ್ಯುತ್ತಮ ಔಷಧಿ. ಪಪ್ಪಾಯ ಎಲೆಯ ರಸ, ಪಪ್ಪಾಯ ಹಣ್ಣಿನ ಜ್ಯೂಸ್ ಸೇವನೆ ಉತ್ತಮ.
* ಮೊಳಕೆ ಕಾಳುಗಳ ಸೇವನೆ ಉತ್ತಮ.
* ಗಂಟೆಗೊಂದು ಲೋಟ ನೀರು ಕುಡಿಯುವುದು.
* ಡೆಂಗ್ಯೂ ಜ್ವರ ಕಡಿಮೆ ಮಾಡಲು ಹರ್ಬಲ್ ಟೀ ಕುಡಿಯುವುದು ಒಳ್ಳೆಯದು.
* ತರಕಾರಿ ಜ್ಯೂಸ್, ಸೂಪ್ ಸೇವನೆಯಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ.
ಮುಂಜಾಗ್ರತಾ ಕ್ರಮಗಳೇನು?:
* ಡೆಂಗ್ಯೂ ಹರಡುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆ ನೀವು ಎಚ್ಚರಗೊಳ್ಳಬೇಕು. ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳಿಸಬೇಕು.
* ಸೊಳ್ಳೆಗಳಿಗೆ ಸೂಕ್ತವಾದ ತಾಣಗಳನ್ನು ನಾಶಪಡಿಸುವುದು.
* ಮನೆಯ ಸುತ್ತಮುತ್ತ ನಿಂತಿರುವ ನೀರಿನ ನೆಲೆಗಳನ್ನು ನಾಶ ಪಡಿಸಬೇಕು.
* ತೆಂಗಿನ ಚಿಪ್ಪು, ಟಯರ್ಗಳು, ಚಿಕ್ಕ ಗುಂಡಿಗಳು, ಬೇಡ ಎಂದು ಬಿಸಾಡಿದ ಪ್ಲಾಸ್ಟಿಕ್ ಬಕೆಟ್, ಜಗ್ ಇತ್ಯಾದಿಗಳ ಸಂಗ್ರಹ ಬೇಡ.
* ನೀರು ನಿಂತಿರುವ ಕಡೆ ಸೂಕ್ತ ಕೀಟನಾಶಕ ಸಿಂಪಡಿಸಿ.
* ಮಕ್ಕಳಿಗೆ ಉದ್ದ ತೋಳಿನ ಬಟ್ಟೆ, ಸಾಕ್ಸ್ ಹಾಕಿರಿ.
* ಸೊಳ್ಳೆಗಳು ಮೊಟ್ಟೆಗಳನ್ನು ಇಡಲು ಅವಕಾಶ ಇರುವ ಕುಂಡಗಳು, ಮತ್ತಿತರ ವಸ್ತುಗಳನ್ನು ಸ್ವಚ್ಛ ಮಾಡಿರಿ.
ಒಟ್ಟಿನಲ್ಲಿ ಡೆಂಗ್ಯೂ ಜ್ವರ ಬಂತೆಂದರೆ ಭಯ ಪಡುವುದು ಬೇಡ. ದಿನ ನಿತ್ಯದ ಆಹಾರ ಕ್ರಮ, ನಾಲಿಗೆ ರುಚಿಯನ್ನು ನಿಯಂತ್ರಣದಲ್ಲಿಡುವುದರಿಂದ ಡೆಂಗ್ಯೂವನ್ನು ಹೊಡೆದೋಡಿಸಬಹುದು. ಜ್ವರ ಕಾಣಿಸಿಕೊಂಡ ತಕ್ಷಣ ವೈದ್ಯರ ಭೇಟಿ ಮಾಡಿ ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳಿ. ಸಾಕಷ್ಟು ಮನೆ ಮದ್ದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ. ಸಲಹೆಗಳನ್ನೂ ಪಾಲಿಸಿದರೆ ನೀವು ಡೆಂಗ್ಯೂ ಜ್ವರದಿಂದ ಪಾರಾಗಬಹುದು.